ದಾವಣಗೆರೆ, ಜ .21 : ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಅಪಘಾತವಾದಾಗ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಸುಸಜ್ಜಿತ ಅಸ್ಪತ್ರೆಗಳನ್ನು ಗುರುತಿಸಿ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಕೆಲಸವಾಗಬೇಕೆಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ಸಭೆಯಲ್ಲಿ ಅವರು ಮಾತನಾಡಿದರು. ಅಪಘಾತವಾದಾಗ ಗೋಲ್ಡನ್ ಅವರ್ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತ್ಯಂತ ನಿರ್ಣಾಯಕ, ಗಾಯಾಳುಗಳನ್ನು ಕೂಡಲೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಚಾಲಕರು ಮತ್ತು ಪೆÇಲೀಸರ ನಡುವೆ ಅತ್ಯಂತ ವೇಗದ ಸಮನ್ವಯ ಇರಬೇಕು ಎಂದರು.
ಹೆದ್ದಾರಿ ಟ್ರಾಮಾ ಸೆಂಟರ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಿ, ಅಲ್ಲಿ ತುರ್ತು ಘಟಕಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ರಸ್ತೆ ಅಪಘಾತವಾದಾಗ ಕೇಂದ್ರದ ನಗದು ರಹಿತ ಉಚಿತ ಚಿಕಿತ್ಸಾ ಸೌಲಭ್ಯವನ್ನು ಬಳಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಬರುವ ಆಸ್ಪತ್ರೆಗಳ ವಿವರ ಸಂಗ್ರಹಿಸಿ ಯಾವುದೇ ಅಪಘಾತವಾದಾಗ ಅಂಬುಲೆನ್ಸ್ ನೇರವಾಗಿ ಸಮೀಪದ ಸುಸಜ್ಜಿತವಾದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಯಾವುದೇ ಸೌಲಭ್ಯವಿಲ್ಲದ ಹತ್ತಿರದ ಆಸ್ಪತ್ರೆಗೆ ಹೋಗಿ ಅಲ್ಲಿ ಸಮಯ ವ್ಯರ್ಥ ಮಾಡುವ ಬದಲು ಈ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಅನೇಕ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದರು.
ಹೆದ್ದಾರಿಯಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಮುಂದಿನ 15 ದಿನಗಳ ಒಳಗಾಗಿ ಬಾಕಿ ಇರುವ ದೀಪಗಳ ದುರಸ್ತಿ ಮತ್ತು ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು ಎಂದು ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ಸಭೆಯಲ್ಲಿ ನೀಡಿದ ಆದೇಶಗಳನ್ನು ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ತೊಂದರೆಗಳಿದ್ದರೆ ಅದನ್ನು ಮುಕ್ತವಾಗಿ ತಿಳಿಸಲು ಹೇಳಿ. ಆಂಬ್ಯುಲೆನ್ಸ್ ಮತ್ತು ತುರ್ತು ಸೇವೆಯನ್ನು ಟೋಲ್ ವಲಯದಲ್ಲಿ ಒದಗಿಸಬೇಕಾದ ಬಗ್ಗೆ ಮತ್ತು ಅಲ್ಲಿರುವ ಆಂಬ್ಯುಲೆನ್ಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ಕೇಳಿದರು.
ಈ ವೇಳೆ ಎನ್.ಹೆಚ್.ಎ.ಐ ಅಧಿಕಾರಿಗಳು ಸಮರ್ಪಕ ಅಂಕಿ ಅಂಶಗಳಿಲ್ಲದೇ ಮಾಹಿತಿ ನೀಡಿದಾಗ ಸಂಸದರು ಕೇವಲ ಬಾಯಿ ಮಾತಿನಲ್ಲಿ ಹೇಳುವ ಬದಲು, ಅಪಘಾತಗಳ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಮೂಲಕ ಎಷ್ಟು ಜನರ ಪ್ರಾಣ ಉಳಿಸಲಾಗಿದೆ. ಮತ್ತು ಯಾವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಲಿಖಿತ ವರದಿ ನೀಡಲು ಸೂಚಿಸಿ ಕುಂದುವಾಡ ಕೆಳ ಸೇತುವೆ ನಿರ್ಮಾಣ, ಸೇವಾ ರಸ್ತೆ ಸೇರಿದಂತೆ ರಸ್ತೆಯಲ್ಲಿನ ಮಳೆಯ ನೀರು ಹೋಗಲು ನಿರ್ಮಾಣ ಮಾಡಿದ ಚರಂಡಿಯ ಅವೈಜ್ಞಾನಿಕತೆ ಬಗ್ಗೆ ಪ್ರಶ್ನಿಸಿ ಸರಿಪಡಿಸಲು ಸೂಚನೆ ನೀಡಿ ಬಾಡಾ ಕ್ರಾಸ್ ಮತ್ತು ಎಸ್.ಎಸ್.ಆಸ್ಪತ್ರೆ ಬಳಿಯ ಅಂಡರ್‍ಪಾಸ್ ಪಾಸ್ ವಿಸ್ತರಣೆಗೆ ರೂಪಿಸಲಾದ ಕ್ರಿಯಾ ಯೋಜನೆಯನ್ನು ಮಂಡಿಸಲು ತಿಳಿಸಿ ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರ ಗಮನಕ್ಕೆ ತಂದು ಅನುಷ್ಟಾನಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.
ಅಪಘಾತ ವಲಯಗಳನ್ನು ಗುರುತಿಸಿ, ಅಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳು, ಸೂಚನಾ ಫಲಕಗಳು ಮತ್ತು ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಅಂಡರ್‍ಪಾಸ್‍ಗಳಲ್ಲಿ ಫುಟ್‍ಪಾತ್ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ಅತಿಕ್ರಮಣಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಸೈಕ್ಲಿಂಗ್ ಪ್ರೋತ್ಸಾಹ : ಪರಿಸರ ಸ್ನೇಹಿ ಸಂಚಾರಕ್ಕೆ ಒತ್ತು ನೀಡಲು ನಗರ ಪ್ರದೇಶಗಳಲ್ಲಿ ಸೈಕ್ಲಿಂಗ್ ಪ್ರೋತ್ಸಾಹಿಸುವಂತೆ ಮತ್ತು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವಂತೆ ತಿಳಿಸಿದರು.
ಪ್ರೀಪೇಯ್ಡ್ ಆಟೋ ನಿಲ್ದಾಣಗಳು: ನಗರದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ವ್ಯವಸ್ಥೆ ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನು ನಾಲ್ಕು ಕಡೆಗಳಲ್ಲಿ ಇಂತಹ ನಿಲ್ದಾಣಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ವಿದ್ಯುತ್ ಚಾಲಿತ ಬಸ್ಸುಗಳು ದಾವಣಗೆರೆಗೆ ಸುಮಾರು 50 ರಿಂದ 100 ಹೊಸ ಎಲೆಕ್ಟ್ರಿಕಲ್ ಬಸ್ಸುಗಳು ಬರಲಿದ್ದು, ಇವುಗಳನ್ನು ನಗರ ಮತ್ತು ಹರಿಹರದ ನಡುವಿನ ಸಂಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ಸಂಚಾರ ನಿಯಮಗಳ ಪಾಲನೆ: ಆಟೋ ರಿಕ್ಷಾಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ತುಂಬುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿ ದ್ವಿಚಕ್ರ ವಾಹನ ಸವಾರರು ಮತ್ತು ಎಲೆಕ್ಟ್ರಿಕ್ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಅವರು ಒತ್ತಿ ಹೇಳಿದರು.
ನಗರದ ಸ್ವಚ್ಛತೆ ಮತ್ತು ಸಿಸಿಟಿವಿ ಅಳವಡಿಕೆ: ದಾವಣಗೆರೆ ನಗರದ ಪ್ರವೇಶ ದ್ವಾರಗಳಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮತ್ತು ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಮುಖ್ಯಾಂಶಗಳು
ಅಪಘಾತ ತಡೆಗೆ ಕ್ರಮ: 2030ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಪೆÇಲೀಸರು ಅಥವಾ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮತ್ತು ನಗದು ರಹಿತ ಉಚಿತ ಚಿಕಿತ್ಸಾ ಸೌಲಭ್ಯವನ್ನು ರಸ್ತೆ ಅಪಘಾತವಾದಾಗ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಚರ್ಚಿಸಿ ಇದು ಅನುಷ್ಟಾನವಾಗುವ ರೀತಿ ಕುರಿತು ಚರ್ಚಿಸಲಾಯಿತು.
Read also : ಸತೀಶ್ ಬೆಂಕಿಕೆರೆಗೆ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ’ ಪ್ರದಾನ
ಗುಂಡಿ ಮುಕ್ತ ರಸ್ತೆಗಳು: ನಗರದ ಬಹುತೇಕ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಬ್ಲಿಂಕರ್ ಲೈಟ್ಸ್ ಮತ್ತು ವೇಗಮಿತಿ ಬೋರ್ಡ್‍ಗಳನ್ನು ಹಾಕಲು ನಿರ್ಧರಿಸಲಾಯಿತು.
ಪ್ರಮುಖ ಚರ್ಚೆಗಳು ಮತ್ತು ಸಮಸ್ಯೆಗಳು
ಮ್ಯಾನ್ ಹೋಲ್ ಸಮಸ್ಯೆ: ಗಣಪತಿ ದೇವಸ್ಥಾನದ ಬಳಿ ಮ್ಯಾನ್ ಹೋಲ್ ಮೇಲೆ ಅಳವಡಿಸಿರುವ ಸ್ಟೀಲ್ ಶೀಟ್‍ನಿಂದ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿರುವ ಬಗ್ಗೆ ಚರ್ಚೆಯಾಯಿತು.
ಖಾಸಗಿ ಲೇಔಟ್ ಸಮಸ್ಯೆಗಳು: ಸರಿಯಾದ ರಸ್ತೆ, ಯುಜಿಡಿ ಮತ್ತು ಬೀದಿ ದೀಪಗಳ ಸೌಲಭ್ಯ ನೀಡದ ಡೆವಲಪರ್‍ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅವರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಯಿತು.
ಗಮನಾರ್ಹ ಅಂಶ: 2024ಕ್ಕೆ ಹೋಲಿಸಿದರೆ 2025ರಲ್ಲಿ ಪ್ರಾಣಾಪಾಯ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಸಲ್ಪ ಏರಿಕೆ ಕಂಡುಬಂದಿದೆ. ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.
ಸಂಚಾರಿ ನಿಯಮ ಉಲ್ಲಂಘನೆ ಮತ್ತು ದಂಡ ಸಂಗ್ರಹ; ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಹೆಲ್ಮೆಟ್ ರಹಿತ ಚಾಲನೆಗೆ 2025ರಲ್ಲಿ ದಾಖಲೆಯ 73,247 ಪ್ರಕರಣಗಳು ದಾಖಲಾಗಿದ್ದು, ₹2.92 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ಮದ್ಯಪಾನ ಮಾಡಿ ಚಾಲನೆ ಮಾಡಿದ ಪ್ರಕರಣಗಳು 2023ರಲ್ಲಿ 31 ಇದ್ದರೆ, 2025ರಲ್ಲಿ 1,104ಕ್ಕೆ ಏರಿಕೆಯಾಗಿರುವುದು ಕಳವಳಕಾರಿ ಸಂಗತಿ. ಸೀಟ್ ಬೆಲ್ಟ್ ಧರಿಸದಿರುವುದು 2025ರಲ್ಲಿ 4,285 ಪ್ರಕರಣಗಳು ದಾಖಲಾಗಿವೆ. ಅತೀ ವೇಗದ ಚಾಲನೆ 2025ರಲ್ಲಿ 953 ಪ್ರಕರಣಗಳು ದಾಖಲಾಗಿದ್ದು, ₹7.22 ಲಕ್ಷ ದಂಡ ವಿಧಿಸಲಾಗಿದೆ. 2025 ರಲ್ಲಿ ಒಟ್ಟು 1,33,213 ಪ್ರಕರಣಗಳನ್ನು ದಾಖಲಿಸಿ ರೂ.6.37 ಕೋಟಿ ದಂಡ ಸಂಗ್ರಹಿಸಲಾಗಿದೆ.
ಅಪಘಾತ ವಲಯಗಳು; ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುವ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ, ಒಟ್ಟು ಗುರುತಿಸಲಾದ ಬ್ಲಾಕ್ ಸ್ಪಾಟ್‍ಗಳು 32, ಸರಿಪಡಿಸಲಾದ ಸ್ಥಳಗಳು 13, ಇನ್ನೂ ಅಪಾಯಕಾರಿಯಾಗಿರುವ ಸ್ಥಳಗಳು 19 ಎಂದು ಗುರುತಿಸಿದ್ದು 2026 ರಲ್ಲಿ ಹೊಸದಾಗಿ 8 ಸ್ಥಳಗಳನ್ನು ಗುರುತಿಸಲಾಗಿದೆ.
ಪ್ರಮುಖ ಅಪಾಯಕಾರಿ ಸ್ಥಳಗಳು: ಎನ್.ಹೆಚ್ 48 ರ ಬಾಡಾ ಕ್ರಾಸ್, ಎಸ್.ಎಸ್. ಆಸ್ಪತ್ರೆ ಬ್ರಿಡ್ಜ್, ಚೆನ್ನಗಿರಿಯ ನುಗ್ಗೀಹಳ್ಳಿ ಕ್ರಾಸ್ ಮತ್ತು ಜಗಳೂರಿನ ದೊಣ್ಣೆಹಳ್ಳಿ ಗ್ರಾಮದ ಬಳಿ ಹೆಚ್ಚು ಅಪಘಾತಗಳು ವರದಿಯಾಗಿವೆ. ಅಪಘಾತಗಳ ಸಂಖ್ಯೆಯಲ್ಲಿ ದಾವಣಗೆರೆ ಗ್ರಾಮಾಂತರ ಮತ್ತು ಚನ್ನಗಿರಿ ಉಪವಿಭಾಗಗಳು ಮೊದಲ ಸ್ಥಾನದಲ್ಲಿವೆ. 2025ರಲ್ಲಿ ದಾವಣಗೆರೆ ಗ್ರಾಮಾಂತರದಲ್ಲಿ 135 ಮತ್ತು ಚನ್ನಗಿರಿಯಲ್ಲಿ 124 ಪ್ರಾಣಾಪಾಯ ಸಂಭವಿಸಿದ ಅಪಘಾತಗಳು ದಾಖಲಾಗಿವೆ.
ಸಾರ್ವಜನಿಕರಿಗೆ ಮನವಿ:
ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಮಾತ್ರವಲ್ಲದೆ ಜೀವಕ್ಕೆ ಅಪಾಯಕಾರಿ. ರಸ್ತೆ ನಿಯಮ ಗಳನ್ನು ಪಾಲಿಸುವ ಮೂಲಕ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಬೇಕು ಎಂದು ಅಂಕಿಅಂಶಗಳ ಸಹಿತ ಪೆÇಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಸಭೆಗೆ ವಿವರಿಸಿದರು.
