ಮಟ ಮಟ ಮಧ್ಯಾಹ್ನ,ರಣ ರಣ ಬಿಸಿಲು ಸುರಿಯುತ್ತಿತ್ತು.ಸುರಿವ ಬಿಸಿಲನ್ನೂ ಲೆಕ್ಕಿಸದೆ ಅಪ್ಪ ಗೋಣಿಚೀಲದಲ್ಲಿ ತೊಗರಿ ಹೊತ್ತು ನಡೆದಿದ್ದ.ಅಪ್ಪನ ಒಂಟೆಯಂತಹ ಕಾಲ್ಗಳು ದೂರದೂರಕೆ ಹೆಜ್ಜೆಯಿಡುತ್ತಿದ್ದವು.ಅಪ್ಪನ ಸರಿಸಮಕ್ಕೆ ಓಡಲಾಗದೆ ಹೇಗೋ ಮಾಡಿ ಕಪ್ಪು ಕೋಲಿನಂತಹ ಕಾಲುಗಳನ್ನು ಹಿಂಬಾಲಿಸುತ್ತಿದ್ದೆ.ಓಣಿ ಕೇರಿಗಳನ್ನೂ ದಾಟುವಾಗ ಚರಂಡಿ ನೀರನ್ನು ದಾಟಬೇಕಿತ್ತು.ಸಾಬರ ಓಣಿ, ಶೆಟ್ಟರ ಓಣಿ,ಬ್ರಾಹ್ಮಣರ ಓಣಿಯಲ್ಲಿ ಓಡಾಡುವಾಗ “ತೊಗರಿ ಬೇಕೆನ್ರಮ್ಮೋ”ಎಂದು ಕೂಗುತ್ತಿರಲಿಲ್ಲ.
ತೊಗರಿ ಮಾರಾಟವಾಗದಿರಲಿ
ಜನರೆಲ್ಲ ಉಂಡು ಮಧ್ಯಾಹ್ನದ ಸವಿನಿದ್ದೆಯಲ್ಲಿರುವಾಗ ಎದ್ದು ಬಂದು ಕೊಳ್ಳುವರಾದರೂ ಹೇಗೆ? ಚಿಂತೆ ಮನದಲ್ಲಿ ಹಾದು ಹೋಗುತ್ತಿತ್ತು.ಅಪ್ಪನ ತಲೆಯ ಮೇಲಿನ ತೊಗರಿ ಮಾರಾಟವಾಗದಿರಲಿ ಮನಸ್ಸು ಪ್ರಾರ್ಥಿಸುತ್ತಿತ್ತು.ಯಾರೋ ಬಂದು ಇರುವ ತೊಗರಿಯನ್ನೆಲ್ಲ ತೂಕಕ್ಕೆ ಹಾಕಿಸಿಕೊಂಡರೆ ನಾಳೆಯಿಂದ ತೊಗರಿಕಾಳಿನ ಸಾರು,ಬ್ಯಾಳಿಯ ಸಾರಿಲ್ಲದೆ ಮತ್ತದೇ ಹಿಂಡಿ ಮುದ್ದೆಯೇ ಗತಿಯಾದೀತು.ಮರಬದ ಈರಣ್ಣನ ಜಾತ್ರೀಗೆ ಬ್ಯಾಳಿ ಹಾಕಿ ಹೋಳಿಗಿ ಮಾಡಬೇಕೆಂದರೂ ತೊಗರಿ ಬೇಕಿತ್ತು.
ಕೆಂಪು ದುಂಡುತೊಗರಿಗೆ ಕೆಮ್ಮಣ್ಣು ಅರವತ್ತಿ ಇಟ್ಟರೆ ವರ್ಷವಿಡೀ ಕೆಡುತ್ತಿರಲಿಲ್ಲ.ವರುಷವಿಡೀ ನಡೆಯುವ ಜಾತ್ರೆಗಳಿಗೆಲ್ಲ ತೊಗರಿಯೆಂಬ ಕಾಳು ಕಾರಣವಾಗಿತ್ತು.ತೊಗರಿಕಾಳಿಲ್ಲದೆ ಹೋದರೆ ಹೋಳಿಗೆ ಮಾಡದೆ ಹಬ್ಬವೂ ಇರುತ್ತಿರಲಿಲ್ಲ.ಆಗೆಲ್ಲ ಅಪ್ಪನ ಬೇಜಾರು ನೋಡೋಕಾಗ್ತಿರಲಿಲ್ಲ.ನಾವೂ ಅನ್ನ ಸಾರಿನಲ್ಲಿ ಸಂತೋಷದಿಂದ ಹಬ್ಬ ಆಚರಿಸಿದಂತೆ ನಟಿಸುತ್ತಿದ್ದೆವು.
ಆದರೆ ಈ ಬಾರಿ ಹಾಗಿರಲಿಲ್ಲ
ಅಪ್ಪ ಹೊತ್ತ ಗೋಣಿಚೀಲದಲ್ಲಿ ಎಲ್ಲ ಸೇರಿದರೂ ಮುವ್ವತ್ತು ಕೇಜಿ ದಾಟುತ್ತಿರಲಿಲ್ಲ.ಕಳೆದ ಎರಡು ವರುಷಗಳು ತೀವ್ರ ಬರಬಿದ್ದುದರಿಂದಾಗಿ ತೊಗರಿಯಿಲ್ಲದಂತಾಗಿ ಜಾತ್ರೆಗಳೂ ಸಪ್ಪೆಯಾಗಿದ್ದವು.
ಈ ದಿನ ಹೇಗಾದರೂ ಸರಿ ಅಪ್ಪನ ತೊಗರಿ ಮಾರಾಟವಾಗದಿರಲಿ ಮನಸ್ಸು ಹೇಳುತ್ತಿತ್ತು.ಹೊಟ್ಟೆ ಚುರುಗುಟ್ಟುತ್ತಿದ್ದರೂ …ಅಪ್ಪ,ಅಪ್ಪನ ಹಿಂದೆ ನಾನು ನಡೆಯುತ್ತಲೇ ಇದ್ದೆ.
ನನ್ನ ಕಾಲುಗಳು ನೋಯತೊಡಗಿದ್ದವು.
ಎಲ್ಲಕ್ಕಿಂತ ಹೆಚ್ಚಾಗಿ ಹೊಲ ಕೋಲೆನ್ನ ಸೊಪ್ಪು,ಹಾಲೆಸೊಪ್ಪು,ಸಾಣಿಸೊಪ್ಪು ತಿಂದು ತಿಂದೂ ಸಾಕಾಗಿತ್ತು.ಬಾಯಿ ತೊಗರಿಬೇಳೆಯ ಸಾರಿನ ರುಚಿ ಬೇಡುತ್ತಿತ್ತು.
ಹೊಲದಲ್ಲಿ ಐದುಸಾಲಿನ ಜೋಳ ನಂತರ ಒಂದು ಸಾಲು ತೊಗರಿಯಿರುತ್ತಿತ್ತು.ಅಕ್ಕಡಿಸಾಲಿನ ಈ ಗಿಡಗಳ ಹೂ ಈಚು ಬಿಟ್ಟಾಗ ಕನಸುಗಳು ಮೊಳಕೆಯೊಡೆಯುತ್ತಿದ್ದವು.ಹಳದಿ ಹೂವಿನ ಸಾಲು ಗಿಡಗಳನ್ನು ನೋಡಿದವರ ಕಣ್ಮನ ಸೆಳೆಯುತ್ತಿದ್ದವು.
“ಏನ್ಮಾವ! ಈ ವರ್ಷಕ್ಕ ಜಾತ್ರಿ ಪರಶಿಗೆಲ್ಲ ನಿನ್ ಮನೀಗೆ ಬರ್ತಿವಿ…ಹೋಳ್ಗಿ ಉಣ್ಣಾಕ…ಭರ್ತಿ ತೊಗರಿ ಐತೇಳಪೋ..”ಎಂದವರಿಗೆಲ್ಲ
“ಯೇ ಬರ್ರೆಪ ಎಲ್ಲರು ಬರ್ರಿ,ಉಣ್ರಿ ಹಬ್ಬ ಮೂರ್ದಿನ ಮುಂಚೆ ಬೇಕಾರ ಬರ್ರಿ”ಎನ್ನುತ್ತಿದ್ದ.
ಅಪ್ಪ ಹೊತ್ತ ಗೋಣಿಚೀಲದಲ್ಲಿ ಮಾತುಗಳೆಲ್ಲ ಬಂದಿಯಾಗಿರುವಂತೆ ತೋರುತ್ತಿತ್ತು.
ತೊಗರಿ ಹೂ ಬಿಟ್ಟಿತ್ತು
ದುಂಬಿ ಹಾರಿ ಬಂದಿತ್ತು
ಈಚು ಆಗಿತ್ತು….
ಮಂಜು ಸುರಿದ ಕ್ಷಣ
ಅಪ್ಪನ ಕಂಬನಿ ಕೂಡ ಸುರಿದಿತ್ತು
ತೊಗರಿ ಈಚು ಆಗದೆ ಅಪ್ಪನ ಕನಸಿನಂತೆ ಕಮರಿಹೋಗಿತ್ತು.
ಈ ಬಾರಿಯಾದ್ರೂ ತೊಗರಿ ಮಾರಿ ಬಂದ ದುಡ್ಡಿಗೆ ಹೋರಿ ತರುವ ಕನಸು ಅಪ್ಪನಿಗಿತ್ತು.ಹೊಸ ಹೋರಿಗಳಿಂದ ಹೊಸ ಹುಮ್ಮಸ್ಸಿನಿಂದ ಹೊಲ ಹದ ಮಾಡುವ ಕನಸು ಕಟ್ಟಿದ್ದ.
ಬಿಸಿಲು ಆತನನ್ನೇನೂ ಮಾಡುವಂತಿರಲಿಲ್ಲ.
ನನ್ನ ತೊಗರಿಕಾಳಿನ ಸಾರು ಉಣ್ಣುವ ಕನಸು ನನಸಾಗಬೇಕಿತ್ತು.
ಇಬ್ಬರ ಕನಸುಗಳು ಸ್ಪರ್ಧೆಗೆ ಬಿದ್ದವರಂತೆ ತೋರುತ್ತಿದ್ದವು.
ಅಪ್ಪನ ಕನಸು
ನನ್ನ ಕನಸೂ
ಎರಡೂ ನನಸಾಗಲಿಲ್ಲ
ಆ ದಿನ ಓಣಿ ಓಣಿಗಳ ತಿರುಗಿದರೂ ಮಾರಲಾಗಲಿಲ್ಲ.
ನನಗೆ ಇನ್ನೇನು ತೊಗರಿ ಮನೆಗೆ ಒಯ್ಯಬಹುದು,ಹೂರಣದ ಹೋಳಿಗೆ,ಬ್ಯಾಳಿಸಾರಿನ ಕನಸಿನಲ್ಲಿ ನಾನಿದ್ದೆ.
ಹಾಗೆ ಹೋಗುವಾಗ ಅಪ್ಪನ ಕಾಲುಗಳು ಏಕೋ ನಿಧಾನವಾದವು.
ಎಷ್ಟೋ ಸಾರಿ ಆ ಅಂಗಡಿಯ ಬಾಕಿ ಕೇಳುವರೆಂದೇ ತಪ್ಪಿಸಿಕೊಂಡು, ಸುತ್ತಿಬಳಸಿ ದೂರದಿಂದಲೆ ನಡೆಯುತ್ತಿದ್ದ ಅಪ್ಪ ,ಈ ಬಾರಿ ಸಿಕ್ಕಿ ಹಾಕಿಕೊಂಡವನಂತೆ ತೋರುತ್ತಿದ್ದ.
ಎದುರಿಗೆ ಬಟ್ಟೆಯಂಗಡಿಯ ಲಚ್ಚಣ್ಣ ಶೆಟ್ಟರು ನಿಂತಿದ್ದರು.
“ಏನೋ ಅದು?”
ಎಂದರು.
ನಾನು….
ಅಪ್ಪ….
ಇಬ್ಬರೂ ಬರಿಗೈಯ್ಯಲ್ಲಿ ಬಂದೆವು!
ಅಪ್ಪನ ತಲೆಯ ಮೇಲೆ ಗೋಣಿಚೀಲವಿರಲಿಲ್ಲ.ಭಾರವೂ ಇರಲಿಲ್ಲ.ಅಪ್ಪನ ಕಾಲುಗಳೇಕೋ ಭಾರವಿರುವವೇನೋ ಎಂದೆನಿಸುತ್ತಿತ್ತು.
ಅಪ್ಪನ ಕನಸು
ನನ್ನ ಕನಸೂ
ಎರಡೂ ನನಸಾಗಲಿಲ್ಲ.
ಬಿ.ಶ್ರೀನಿವಾಸ