ದಾವಣಗೆರೆ (Davanagere) : ಮಾರಾಟಗಾರರು ಗ್ರಾಹಕರಿಗೆ ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೆ ವಂಚನೆ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಟಿ. ವಿಜಯಲಕ್ಷ್ಮಿ ಹೇಳಿದರು.
ನಗರದ ಆರ್.ಎಲ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಗ್ರಾಹಕರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ಹಕ್ಕುಗಳು ಮತ್ತು ಹಿತರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡಬೇಕು. ಜೀವನದಲ್ಲಿ ನಿತ್ಯ ಬಳಕೆಗಾಗಿ ಅನೇಕ ಸಾಮಗ್ರಿ ಕೊಳ್ಳುವ ನಾವೆಲ್ಲರೂ ಗ್ರಾಹಕರೇ. ಗ್ರಾಹಕರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಿ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಗ್ರಾಹಕರಿಗೆ ಸುರಕ್ಷತೆ, ವಸ್ತುವಿನ ಬಗ್ಗೆ ಮಾಹಿತಿ, ಆಯ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೆ ಮೋಸ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು’ ಎಂದರು.
ಗ್ರಾಹಕರ ರಕ್ಷಣಾ ಕಾಯ್ದೆ 1986ರಕ್ಕೆ ಮತ್ತಷ್ಟು ಬಲ ತುಂಬಿ ಗ್ರಾಹಕರ ರಕ್ಷಣಾ ಕಾಯ್ದೆ-2019 ರೂಪಿಸಲಾಗಿದೆ. ಈ ಕಾಯ್ದೆಗೆ ಆ.9ರಂದು ರಾಷ್ಟ್ರಪತಿಯ ಅಂಕಿತ ಬಿದ್ದಿದೆ. ಹೊಸ ಕಾಯ್ದೆ ಅನ್ವಯ ಜಿಲ್ಲಾ ಗ್ರಾಹಕರ ವೇದಿಕೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ರೂ.20 ಲಕ್ಷ ಮೌಲ್ಯದ ವಸ್ತುಗಳ ನಷ್ಟದ ಪರಿಮಿತಿಯನ್ನು ರೂ.1 ಕೋಟಿಗೆ ಹೆಚ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ, `ಜಾಗತಿಕವಾಗಿ ಬದಲಾದ ವ್ಯವಸ್ಥೆಯಲ್ಲಿ ಆನ್‍ಲೈನ್ ಖರೀದಿ ಹೆಚ್ಚುತ್ತಿದೆ. ಗ್ರಾಹಕರು ನೀಡುವ ಹಣಕ್ಕೆ ಸರಿಯಾದ ರೀತಿಯ ಮತ್ತು ಗುಣಮಟ್ಟದ ಸರಕು ನೀಡಬೇಕು. ಖರೀದಿಸಿದ ವಸ್ತುವಿನ ಪ್ರಮಾಣ, ಗುಣಮಟ್ಟದಲ್ಲಿ ವಂಚನೆಯಾದರೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಪ್ರಶ್ನಿಸುವ ಅಧಿಕಾರ ನೀಡಲಾಗಿದೆ. ಸಾರ್ವಜನಿಕರು ಗ್ರಾಹಕರ ವೇದಿಕೆ ಮೆಟ್ಟಿಲೇರಿ ಪರಿಹಾರ ಪಡೆಯುವ ಅವಕಾಶವಿದೆ’ ಎಂದು ವಿವರಿಸಿದರು.
ನಾವು ಇಂದು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿ ಗ್ರಾಹಕ ಹಕ್ಕುಗಳು ಅವಶ್ಯಕತೆ ಇದೆ. ಮಾರುಕಟ್ಟೆ ವ್ಯವಸ್ಥೆಯು ಇಂದು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. ಆಗ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಮಾಧ್ಯಮಗಳಲ್ಲಿ ತೋರಿಸುವ ಕೆಲವೊಂದು ಜಾಹಿರಾತುಗಳು ಉದಾಹರಣೆಗೆ ತಂಪು ಪಾನೀಯ ಕುಡಿದು ನೀರಿಗೆ ಹಾರುವುದು, ಗುಟುಕ ತಂಬಾಕುಗಳಂತಹ ಜಾಹೀರಾತುಗಳಿಂದ ಯುವಕರು ಮತ್ತು ಮಕ್ಕಳ ಮೇಲೆ ಅನೇಕ ಪ್ರಭಾವ ಬೀರುತ್ತಿದೆ, ``ಗ್ರಾಹಕರೇ ಎಚ್ಚರ ಎನ್ನುವ ಬದಲು ಮಾರಾಟಗಾರರೇ ಎಚ್ಚರ” ಎಂಬ ಸಂದೇಶ ಸಾರುವ ಅವಶ್ಯಕತೆ ಇದೆ ಎಂದರು.
ವೇದಿಕೆಯಲ್ಲಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ಎಸ್.ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಹೈ ಕೋರ್ಟ್ ವಕೀಲರಾದ ರಾಜಶೇಖರ್ ಉಪಸ್ಥಿತರಿದ್ದರು.
ಕಾನೂನು ವಿದ್ಯಾರ್ಥಿ ಶ್ರೀನಿವಾಸ್ ಪ್ರಾರ್ಥಿಸಿದರು, ಸಹಾಯಕ ಪ್ರಾಧ್ಯಾಪಕ ವಿದ್ಯಾಧರ ವೇದಮೂರ್ತಿ ಟಿ. ಸ್ವಾಗತಿಸಿದರು,
ಕಾನೂನೂ ವಿದ್ಯಾರ್ಥಿ ಪ್ರಶಾಂತ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಬಿ.ಪಿ.ಬಸವನಗೌಡ, ದೈಹಿಕ ಶಿಕ್ಷಕ ಪವನ್ ಸೇರಿದಂತೆ ಕಾಲೇಜಿನ ಬೋಧಕ ಭೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Read also : Davanagere | ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಎಸ್ಎಎಸ್ಸೆಸ್ ಕೇಂದ್ರದ 15 ಯೋಗಪಟುಗಳು ಭಾಗಿ