ಶಿಕ್ಷಕ ಎನ್ನುವುದು ಕೇವಲ ಪಾಠ ಬೋಧಿಸುವ ವ್ಯಕ್ತಿಯ ಹೆಸರು ಅಲ್ಲ ಅದು ವ್ಯಕ್ತಿತ್ವ ರೂಪಿಸುವ ಶಕ್ತಿ. ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಹಂತವಾದ ಎಸ್ಸೆಸ್ಸೆಲ್ಸಿ ಸಂದರ್ಭದಲ್ಲಿ ಸರಿಯಾದ ದಿಕ್ಕು ತೋರಿಸುವ ಶಿಕ್ಷಕರು ವಿರಳ.ಅಂತಹ ಮಾರ್ಗದರ್ಶಕರಲ್ಲಿ ಎನ್ ಎಫ್ ಕಿತ್ತೂರ ಅವರ ಹೆಸರು ಗೌರವದಿಂದ ಉಚ್ಚರಿಸಲಾಗುತ್ತದೆ.
ಪ್ರಸ್ತುತ ವರ್ಷ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಪರೀಕ್ಷಾ ಪಲಿತಾಂಶ ಸುಧಾರಣೆ ಕುರಿತು ದೂರ ದರ್ಶನ ಚಂದನ ವಾಹಿನಿಯಲ್ಲಿ ಫೋನ್- ಇನ್- ನೇರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪೋಷಕರ ಹಾಗೂ ಮಕ್ಕಳ ನೇರ ಪ್ರಶ್ನೆಗಳಿಗೆ ಸಮರ್ಪಕವಾಗಿ, ಸರಾಗವಾಗಿ ಉತ್ತರಿಸಿ, ಸರ್ವರ ಮನ ಗೆದ್ದದ್ದು ಅವರ ಉತ್ತಮ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ.
ಸುಮಾರು ಎರಡು ದಶಕಗಳಿಂದ ಪ್ರೌಢಶಾಲಾ ಮಟ್ಟದಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಬೆಳಗಾವಿ ಶಹರದ ಪ್ರೇಶಿಯಸ್ ಬ್ಲಾಸಂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಆತಂಕ ಮತ್ತು ಭವಿಷ್ಯದ ಚಿಂತನೆಗಳನ್ನು ಅರಿತು ಅವರಿಗೆ ಆತ್ಮವಿಶ್ವಾಸ ತುಂಬುವುದು ಅವರ ವಿಶೇಷತೆ. ಪಾಠ ಬೋಧನೆಯ ಜೊತೆಗೆ ಸಮಯ ನಿರ್ವಹಣೆ ಪ್ರಶ್ನೆಪತ್ರಿಕೆ ಎದುರಿಸುವ ವಿಧಾನ ಸಾಮಾನ್ಯ ಜ್ಞಾನ ವೃದ್ಧಿ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ತರಬೇತಿಗಳನ್ನು ನೀಡುತ್ತಾರೆ.
ವಿದ್ಯಾರ್ಥಿಗಳಲ್ಲಿ ಚಿಂತನೆ ಶಕ್ತಿ ಬೆಳೆಸಲು ಕ್ವಿಜ್ ಕಾರ್ಯಕ್ರಮಗಳು, ಚರ್ಚಾ ವೇದಿಕೆಗಳು, ಪ್ರೇರಣಾತ್ಮಕ ಉಪನ್ಯಾಸಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋ ಜಿಸುತ್ತಾರೆ. ಶಿಕ್ಷಣವೆಂದರೆ ಅಂಕಗಳ ಸಾಧನೆ ಮಾತ್ರವಲ್ಲ, ಜೀವನ ಮೌಲ್ಯಗಳ ಅರಿವು ಎಂಬ ಸಂದೇಶವನ್ನು ಅವರು ತಮ್ಮ ಕಾರ್ಯಶೈಲಿಯಿಂದ ಸಾರುತ್ತಾರೆ.
ಶಿಕ್ಷಕರಾಗಿರುವುದರ ಜೊತೆಗೆ ಅವರು ಉತ್ತಮ ವಾಗ್ಮಿಗಳು. ಆಕಾಶವಾಣಿ ಧಾರವಾಡ ಹಾಗೂ ಕೆ ಎಲ್. ಇ. ವೇಣುಧ್ವನಿ, ನಮ್ಮೂರು ಬಾನುಲಿ ಎಫ್ ಎಂ, ಸಮುದಾಯ ಬಾನುಲಿ ಕೇಂದ್ರಗಳಲ್ಲಿ ಹಾಗೂ ಹರಿಹರದ ರೇಡಿಯೋ ಕಿಡ್ಸ್ ಕೇಂದ್ರಗಳಲ್ಲಿ ಹಲವು ವಿಶೇಷ ಭಾಷಣಗಳನ್ನು ನೀಡಿದ್ದಾರೆ. ಬಸವ ತತ್ವ, ಬುದ್ಧನ ಸಂದೇಶ, ನಾಡಿನ ಸಂಸ್ಕೃತಿ ಮತ್ತು ಯುವಜನರ ಜವಾಬ್ದಾರಿ ಕುರಿತಾಗಿ ಅವರು ನೀಡಿದ ಉಪನ್ಯಾಸಗಳು ಶ್ರೋತೃಮನ್ನಣೆ ಪಡೆದಿವೆ. ಅವರ ಮಾತುಗಳಲ್ಲಿ ಸರಳತೆ ಸ್ಪಷ್ಟತೆ ಮತ್ತು ಆಳವಾದ ಅಧ್ಯಯನದ ಮೆರಗು ಕಾಣಿಸುತ್ತದೆ.
Read also : ಮಧುಮೇಹ, ಬಿಪಿ, ಹೃದಯದ ಸಮಸ್ಯೆ ಇದೆಯಾ? ನಿಮ್ಮನ್ನು ಕಾಡಬಹುದು ‘ಸರ್ಪಸುತ್ತು’ ಎಂಬ ಭೀಕರ ನೋವು! 50 ದಾಟಿದವರು ಇದನ್ನು ಓದಲೇಬೇಕು
ಸಾಹಿತ್ಯ ಕ್ಷೇತ್ರದಲ್ಲಿಯೂ ಎನ್. ಎಫ್.ಕಿತ್ತೂರ ಅವರು ಸಕ್ರಿಯರು. ನೂರಾರು ಕವನಗಳನ್ನು ರಚಿಸಿರುವ ಅವರು ಕಂಬಸಾಲಿನಲ್ಲಿ ಕವನಗಳ ರಚನೆಯ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ವಿವಿಧ ಸಂಕಲನಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ಶಿಕ್ಷಣ ಸಮಾಜ ಮತ್ತು ಮಾನವೀಯ ಮೌಲ್ಯಗಳ ಕುರಿತು ಅವರ ಬರಹಗಳು ಓದುಗರಲ್ಲಿ ಚಿಂತನೆ ಮೂಡಿಸುತ್ತವೆ.
ಅವರ ಸೇವೆಗೆ ಹಲವಾರು ಗೌರವ- ಪ್ರಶಸ್ತಿಗಳು ಲಭಿಸಿವೆ.
ಗುಡ್ ವೀಲ್ಸ್ ಶಿಕ್ಷಣ ಸಂಸ್ಥೆಯಿಂದ ಶಾಲಾ ಮಟ್ಟದಲ್ಲಿ ಬೆಸ್ಟ್ ಆಫ್ ಬೆಸ್ಟ್ ಶಿಕ್ಷಕ ಪ್ರಶಸ್ತಿ, ಕವಿವಾಣಿ ಸಾಹಿತ್ಯ ಪರಿಷತ್ತು ಬೆಂಗಳೂರಿನಿಂದ, ಶಿಕ್ಷಣ ಸೇವಾ ಪ್ರಶಸ್ತಿ,
ಸುಜ್ಞಾನ ವಿದ್ಯಾಪೀಠ ಹಾಗೂ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ವತಿಯಿಂದ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಮತ್ತು ಕರ್ನಾಟಕ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಈ ಸನ್ಮಾನಗಳು ಅವರ ಪರಿಶ್ರಮ ನಿಷ್ಠೆ ಮತ್ತು ಸಮರ್ಪಣೆಯ ಪ್ರತಿಫಲಗಳಾಗಿವೆ.
ಬೆಳಗಾವಿಯ ಆಜಮ್ ನಗರದ ಅನ್ನಪೂರ್ಣವಾಡಿಯಲ್ಲಿ
ವಾಸವಾಗಿರುವ ಎನ್ ಎಫ್ ಕಿತ್ತೂರ ಅವರು ಸರಳ ಜೀವನ ಮತ್ತು ಉನ್ನತ ಚಿಂತನೆ ಹೊಂದಿರುವ ಶಿಕ್ಷಕರು.
ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿ ಅವರಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಬೆಳೆಸುವುದು ಅವರ ವೈಶಿಷ್ಟ್ಯ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಜೀವನ ದರ್ಶನ ನೀಡುವ ಶಿಕ್ಷಕರು ಅಗತ್ಯ. ಅಂತಹ ಅಗತ್ಯವನ್ನು ಪೂರೈಸುತ್ತಿರುವ ಎನ್ ಎಫ್ ಕಿತ್ತೂರ ಅವರು ನಿಜಕ್ಕೂ ಶಿಕ್ಷಣ ಕ್ಷೇತ್ರದ ಅಮೂಲ್ಯ ಸಂಪತ್ತು. ಅವರ ಸೇವೆ ಮತ್ತು ಮಾರ್ಗದರ್ಶನ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಕಾಶಮಾನಗೊಳಿಸುತ್ತಿದೆ.
