ಚಿತ್ರದುರ್ಗ: ಪತ್ರಕರ್ತರಿಗೆ ಸ್ವತಂತ್ರ ಇಲ್ಲದ ಪತ್ರಿಕೋದ್ಯಮ ಅಪಾಯದ ಹಂಚಿನಲ್ಲಿದೆ ಎಂದು ಖ್ಯಾತ ಪತ್ರಕರ್ತ ಮ್ಯಾಗ್ಗೆಸೆ ಪ್ರಶಸ್ತಿ ಪುರಸ್ಕೃತರಾದ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಎಸ್‌ಆರ್‌ಎಸ್ ಸಮೂಹ ಸಂಸ್ಥೆಯ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ದೇಶದ ಪತ್ರಿಕಾ ಸ್ವಾತಂತ್ರ‍್ಯ ಸಂಪೂರ್ಣ ದಮನ
ಮೋದಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ದೇಶದ ಪತ್ರಿಕಾ ಸ್ವಾತಂತ್ರ‍್ಯ ಸಂಪೂರ್ಣ ದಮನವಾಗಿದೆ. ವಿಶ್ವಗುರು ಎಂದುಕೊಳ್ಳುವ ಮೋದಿ ಹತ್ತು ವರ್ಷಗಳಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿಯನ್ನೇ ನಡೆಸದೇ ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಗೆ ತೂರಿದ್ದಾರೆ. ಮೋದಿ ಮಾಧ್ಯಮ ರಂಗಕ್ಕೆ ಮಾಡಿದ ಒಂದೇ ಒಳ್ಳೆಯ ಕೆಲಸವೆಂದರೆ ಕೋವಿಡ್ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರವನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತಂದಿರುವುದು. ಇದು ಒಳ್ಳೆಯ ಬೆಳವಣಿಗೆ. ಆದರೆ ಅಗತ್ಯ ಸೇವೆಗಳ ವ್ಯಾಪ್ತಿಗೆ ಪತ್ರಕರ್ತರು ಸೇರಿದರೂ ಸಾವಿರಾರು ಪತ್ರಕರ್ತರು ಕೆಲಸವನ್ನು ಕಳೆದುಕೊಂಡರು.
ಮೋದಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿಯೇ ನಿಲುವು
ಮಾಧ್ಯಮ ಸಂಸ್ಥೆಗಳ ಮಾಲೀಕರ ಈ ಕಾನೂನು ಬಾಹಿರ ವರ್ತನೆಯನ್ನು ಕೇಂದ್ರ ಸರ್ಕಾರ ಗಮನಿಸಲೇ ಇಲ್ಲ. ಅಗತ್ಯ ಸೇವೆಯ ವ್ಯಾಪ್ತಿಯಲ್ಲಿರುವವರನ್ನು ಕೆಲಸದಿಂದ ತೆಗೆಯುವಂತಿಲ್ಲ. ಹೀಗೆ ಮೋದಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿಯೇ ತನ್ನ ನಿಲುವನ್ನು ಪ್ರರ್ಶಿಸುತ್ತ ಹೋಗುತ್ತಿದೆ ಎಂದು ಟೀಕಿಸಿದರು.
ಪತ್ರಕರ್ತರ ಸೇವಾ ಭದ್ರತೆ ಪರಿಗಣಿಸದೇ ಬಹುಡೊಡ್ಡ ಅನಾಚಾರ
ಕಾರ್ಪೋರೇಟ್ ಮಾಲೀಕರುಗಳು ಪತ್ರಕರ್ತರ ಸೇವಾ ಭದ್ರತೆಯನ್ನೂ ಪರಿಗಣಿಸದೇ ಬಹುಡೊಡ್ಡ ಅನಾಚಾರವನ್ನು ಎಸಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮತ್ತು ನಂತರದ ವರ್ಷಗಳಲ್ಲಿ ದೇಶದ ಸುಮಾರು ೩೫೦೦ ಪತ್ರಕರ್ತರನ್ನು ಕೆಲಸದಿಂದ ತೆಗೆಯಲಾಗಿದೆ. ಭಾರತೀಯ ಪ್ರೆಸ್ ಕೌಂನ್ಸಿಲ್ ಈ ಬಗ್ಗೆ ವಿವರಣೆ ಕೇಳಿದಾಗ ಸರಿಯಾದ ಉತ್ತರವನ್ನೂ ಕೊಟ್ಟಿಲ್ಲ. ಮಾಲೀಕರುಗಳ ಇಂತಹ ಧೋರಣೆಗೆ ಪೂರಕವಾಗಿ ಇತ್ತೀಚಿನ ವರ್ಷಗಳಲ್ಲಿ ಹವ್ಯಾಸಿ ಪತ್ರಕರ್ತ ಎಂಬ ಹಣೆ ಪಟ್ಟಿಯೊಂದಿಗೆ ಉದ್ಯೋಗ ನೀಡಲಾಗುತ್ತಿದೆ. ಇದು ಆರೋಗ್ಯಕರ ಮಾಧ್ಯಮಕ್ಕೆ ವ್ಯತಿರಿಕ್ತವಾದ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲ ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿ ಸಿಲುಕಿವೆ. ಪತ್ರಕರ್ತರು ಬರವಣಿಗೆಯ ಸ್ವಾತಂತ್ರ‍್ಯ ತನ್ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯ ಎರಡನ್ನೂ ಕಳೆದುಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಾವು ನೋವುಗಳ ಲೆಕ್ಕಾಚಾರ ಕೇಂದ್ರ ಸರ್ಕಾರ ತಪ್ಪಾಗಿ ನೀಡಿದೆ
ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ ಸಾವು ನೋವುಗಳ ಲೆಕ್ಕಾಚಾರವನ್ನೂ ಕೇಂದ್ರ ಸರ್ಕಾರ ತಪ್ಪಾಗಿ ನೀಡಿತು. ೪೭ಲಕ್ಷ ಜನ ಮೃತಪಟ್ಟಿದ್ದರೂ ‘ವಿಶ್ವಗುರು ‘ ಪ್ರತಿಪಾದಿಸಿದ ೪ಲಕ್ಷ ೮೦ ಸಾವಿರ ಅಂಕಿಯನ್ನೇ ಬಿಂಬಿಸಲಾಯಿತು. ಇದನ್ನು ಪ್ರಶ್ನಿಸಿದವರೇ ತಪ್ಪಿತಸ್ಥರು ಎಂಬಂತಹ ವಾತಾವರಣವನ್ನು ಸೃಷ್ಟಿಸಲಾಯಿತು. ಇದು ಮಾಧ್ಯಮವನ್ನು ದಮನ ಮಾಡುವ ವ್ಯವಸ್ಥಿತ ಹುನ್ನಾರ. ನಿಜವಾದ ವಿಷಯವನ್ನು ಜಗತ್ತಿಗೆ ತಿಳಿಸಬೇಕು ಎಂಬ ಪ್ರಾಮಾಣಿಕ ಪತ್ರಕರ್ತರೂ ಕೂಡ ‘ಮೋದಿ ಪ್ರಿಯ’ ಬಂಡವಾಳಶಾಹಿ ಮಾಲೀಕರಿಂದಾಗಿ ಅಸಹಾಯಕ ಮೌನ ತಳೆಯಬೇಕಾಯಿತು ಎಂದು ಸಾಯಿನಾಥ್ ಸೂಚ್ಯವಾಗಿ ಹೇಳಿದರು.
ಸಮಾಜದ ಒಳಿತಿಗಾಗಿ ಧ್ವನಿ ಎತ್ತಬೇಕಿದೆ
ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕಾದ ಹೊಣೆ ಪತ್ರಕರ್ತರ ಮೇಲಿದೆ. ಕೆಲವು ಸಂಧರ್ಭಗಳಲ್ಲಿ ಧೈರ್ಯವಾಗಿ ಸಂಪಾದಕೀಯಗಳ ಮುಖಾಂತರ ಸಮಾಜದ ಒಳಿತಿಗಾಗಿ ಧ್ವನಿ ಎತ್ತಬೇಕಿದೆ. ಹೀಗಾಗದೇ ಇರುವುದು ದುರಂತ. ಫೆ.೧೨ರಂದು ಹರಿಯಾಣದಲ್ಲಿ ರೈತರ ಮೇಲೆ ಡ್ರೋಣ್ ಮೂಲಕ ಅಶ್ರವಾಯು ಸಿಡಿಸಿದ್ದನ್ನೂಕೂಡ ಒಂದೇ ಒಂದು ಪತ್ರಿಕೆ ಸಂಪಾದಕೀಯದ ಮೂಲಕ ಖಂಡಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜನರ ಹಿತ ಕಾಪಾಡುವುದಕ್ಕೆ ಮೊದಲ ಆಧ್ಯತೆ ನೀಡುವುದು ಪತ್ರಿಕಾ ಧರ್ಮದ ಮೊದಲ ಆಧ್ಯತೆ
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಮಾತನಾಡಿ, ವಾಣಿಜ್ಯಕರಣ ಮತ್ತು ಖಾಸಗೀಕರಣ ಭರಾಟೆಯಲ್ಲಿ ಪತ್ರಕರ್ತರು ಇಡೀ ಸಮಾಜದ ರಕ್ಷಣೆ ಮಾಡುತ್ತಾರೆ. ಆದರೆ ಪತ್ರಕರ್ತರಿಗೆ ಸೇವಾ ಭದ್ರತೆಯೇ ಇಲ್ಲದಂತಾಗಿದೆ. ಆಗಂತ ಹಣವೇ ಬೇಡ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಹೊಣೆಗಾರಿಕೆ ಇರುವ ಲಾಭದಾಯಕ ಉದ್ಯಮ ಇರಬೇಕು. ಜನರ ಹಿತ ಕಾಪಾಡುವುದಕ್ಕೆ ಮೊದಲ ಆಧ್ಯತೆ ನೀಡುವುದು ಪತ್ರಿಕಾ ಧರ್ಮದ ಮೊದಲ ಆಧ್ಯತೆ ಆಗಬೇಕು ಎಂದು ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ದತ್ತಿನಿಧಿ ಪ್ರಶಸ್ತಿಗಾಗಿ ಪತ್ರಕರ್ತರು ಅರ್ಜಿ ಹಾಕುವಂತಿಲ್ಲ. ಸಂಘವೇ ಅವರ ಸೇವೆಯನ್ನು ಗುರುತಿಸಿ ನೀಡಲಿದೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಎಸ್‌ಆರ್‌ಎಸ್ ಸಮೂಹ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ಇತರರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸ್ವಾಗತಿಸಿದರು.
`
ಕೆಯುಡಬ್ಲ್ಯೂಜೆ ದತ್ತಿನಿಧಿ’ ಪ್ರಶಸ್ತಿ ಪ್ರದಾನ
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾದ್ಯಕ್ಷ ಆರ್.ರವಿ. ಸಂಯುಕ್ತ ಕರ್ನಾಟಕ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಮೋಹನ್ ಹೆಗಡೆ, ವಾರ್ತಾಭಾರತಿ ಪತ್ರಿಕೆಯ ಸುದ್ದಿ ಸಂಪಾದಕರಾದ ಬಿ.ಎಂ.ಬಶೀರ್ ಅವರಿಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ, ಆರ್.ಜಯಕುಮಾರ್ ಅವರಿಗೆಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ,
ಕಲಬುರಗಿ ವಿಜಕುಮಾರ್ ವಾರದ ಅವರಿಗೆ ಮಹಾದೇವಪ್ರಕಾಶ್ ಪ್ರಶಸ್ತಿ, ಬೆಳಗಾವಿ ಕುಂತಿನಾಥ ಶ್ರೀಕಲಮನಿ ಅವರಿಗೆ ಗೊಮ್ಮಟ ಮಾಧ್ಯಮ ಪ್ರಸಸ್ತಿ, ಮೈಸೂರು ಸಿ.ಕೆ.ಮಹೇಂದ್ರ ಅವರಿಗೆಪಿ.ಆರ್.ರಾಮಯ್ಯ ಪ್ರಸಸ್ತಿ, ಭದ್ರಾವತಿಎನ್.ಬಾಬು ಅವರಿಗೆ ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಸಸ್ತಿ, ವಿ.ವೆಂಕಟೇಶ್ ಅವರಿಗೆ ಡಿವಿಜಿಪ್ರಶಸ್ತಿ, ಡಿ.ಆರ್.ಅಶೋಕ್ ರಾಮ್ ಅವರಿಗೆ ಎಸ್.ಕೆ.ವೀರಣ್ಣಗೌಡ ಪ್ರಸಸ್ತಿ,
ಯಾದಗಿರಿನಾಮದೇವ ವಾಟ್ಕರ್ ಅವರಿಗೆ ಎಸ್.ಎಸ್.ರಂಗಸ್ವಾಮಿ ಪ್ರಶಸ್ತಿ, ಸಿ.ಜಿ.ಮಂಜುಳ ಅವರಿಗೆಸಿ.ಆರ್.ಕೃಷ್ಣರಾವ್ ಪ್ರಸಸ್ತಿ. ರಾಜಶೇಖರಕೋಟಿ ಪ್ರಶಸ್ತಿಗೆ ಚಿಕ್ಕಪ್ಪನಹಳ್ಳಿ ಷಣ್ಮುಖ,ದಾವಣಗೆರೆ ಕನ್ನಡಿಗ ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಆರ್.ರವಿಗೆ ಎಂ.ನಾಗೇಂದ್ರರಾವ್ ಪ್ರಶಸ್ತಿ, ಮೈಸೂರು ಮಲ್ಲಿಗೆ ಮಾಚಮ್ಮಅವರಿಗೆ ಯಶೋಮ್ಮ ನಾರಾಯಣ ಪ್ರಸಸ್ತಿ, ಬಾಗಲಕೋಟೆ ಶಶಿಕುಮಾರ್ ಕೆರೂರ ಪ್ರಸಸ್ತಿ. ಕೋಲಾರ ಗೋಪಿಕಾಮಲ್ಲೇಶ್ ಅವರಿಗೆ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ,
ಹುಬ್ಬಳ್ಳಿ ಮೋಹನ್ ಹೆಗಡೆಗೆ ಜಯಶೀಲರಾವ್ ಪ್ರಶಸ್ತಿ,ರಾನೇಬೆನ್ನೂರು ಮನೋಹರ ಮಲ್ಲಾಡದ ಅವರಿಗೆ ಪಿ.ರಾಮಯ್ಯ ಪ್ರಸಸ್ತಿ. ಚಾಮರಾಜನಗರದ ಆರ್.ಸಿ.ಪುಟ್ಟರಾಜುಗೆ ಗುರುಲಿಂಗಸ್ವಾಮಿ ಹೊಳಿಮಠ ಪ್ರಸಸ್ತಿ. ಸನತ್‍ಕುಮಾರ್‍ಬೆಳಗಲಿ ಅವರಿಗೆ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ,
ಎಚ್.ಕೆ.ಬಸವರಾಜುಅವರಿಗೆ ಮ.ರಾಮಮೂರ್ತಿ ಪ್ರಶಸ್ತಿ, ಹಾಸನ ಬಿ.ಎಂ.ನಂದೀಶ್‍ಗೆ ಕಿಡಿ ಶೇಷಪ್ಪ ಪ್ರಸಸ್ತಿ, ಪ್ರಭುದೇವ ಶಾಸ್ತ್ರಿಮಠದ ಅವರಿಗೆ ಗರುಡಗಿರಿ ನಾಗರಾಜ ಪ್ರಶಸ್ತಿ. ವಿಶೇಷ ಪ್ರಶಸ್ತಿಯನ್ನು ಶ.ಮಂಜುನಾಥ್,ರವಿಮಲ್ಲಾಪುರ, ಎಸ್.ಬಿ.ರವಿಕುಮಾರ್ (ರವಿ ಉಗ್ರಾಣ) ಹೆಚ್.ರಾಮಚಂದ್ರ ಅವರಿಗೆನೀಡಲಾಯತು.