ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ನನ್ನೂರು. ಮೌಢ್ಯ, ಅನಕ್ಷರತೆ, ಬಡತನಗಳೇ ಮೈವೆತ್ತಿ ನಿಂತ ಊರಲ್ಲಿ, ಹಗಲಿಗಿಂತಲೂ ಇಲ್ಲಿನ ರಾತ್ರಿಗಳು ರಂಗೇರುತ್ತವೆ. ಹಗಲೆಲ್ಲ ಪವರ್ಕಟ್ ಆಗಿ ರಾತ್ರಿ ನಡೆವ ಕಾರ್ಖಾನೆಗಳಂತೆ ಊರ ಕೇರಿಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ. ಇಲ್ಲಿ ಮಳೆ ಬಿದ್ದರೂ ಬೀಳದಿದ್ದರೂ ಅರೆಹೊಟ್ಟೆಗಾಗುವಷ್ಟು ಮಾತ್ರ ಬೆಳೆಯುವ ಬರಡು ನೆಲದ ಊರಿನಲ್ಲಿ ದೇವದಾಸಿ ಪದ್ದತಿಯೆಂಬ ಮೌಢ್ಯಕ್ಕೆ ಬಲಿಯಾದ ಜನರು ಇನ್ನೂ ಅದರಿಂದ ಹೊರಬರಲಾಗುತ್ತಿಲ್ಲ.
ಹಸಿವು ಎಂಬ ಪದಕ್ಕೆ ಮೌಢ್ಯವೇ ಹೊಟ್ಟೆ ತುಂಬಿಸುತ್ತಿದೆ
ಹಸಿವು ಎಂಬ ಪದಕ್ಕೆ ಈ ಮೌಢ್ಯವೇ ಹೊಟ್ಟೆತುಂಬಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ. ಈ ಊರಿನ ಪಕ್ಕದಲ್ಲಿರುವುದೇ ಸೊಂಡೂರು. ಕೆಂಪು ಮನುಷ್ಯರು ಯುದ್ಧೋಪಾದಿಯಲ್ಲಿ ಸೈನ್ಯಕ್ಕೆ ಹೋಗುವ ಸೈನಿಕರಂತೆ ಮೈನ್ಸ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರೇ ಹೆಚ್ಚು. ಸೊಂಡೂರು,ತೋರಣಗಲ್ಲು,ಹೊಸಪೇಟೆಯಂತಹ ಊರುಗಳ ಸುತ್ತುವರಿದಿರುವ ನೀಲಿಬೆಟ್ಟಗಳ ಗರ್ಭಗಳಲ್ಲಿ ಹೀಗೊಂದು ರಾಜಕಾರಣದ ದಿಕ್ಕು ಅಡಗಿರುವುದೆಂದು ಯಾರಿಗೆ ತಾನೆ ಗೊತ್ತಿತ್ತು?
ಎಲೆಕ್ಷನ್ನು ಎಂಬುದೇ ದೊಡ್ಡ ಸಂಭ್ರಮ
ನನ್ನೂರಿನಂತಹ ಊರುಗಳಲ್ಲಿ ಪ್ರಜಾಪ್ರಭುತ್ವದ ನೆನಪು ಬರುವುದೇ ಮತ್ತೆ ಎಲೆಕ್ಷನ್ನು ಬಂದಾಗ!. ಮನೆ ಮನೆಗಳ ಮುಂದೆ ತರಹೇವಾರಿ ಸ್ಟೀಲಿನ ಪಾತ್ರೆಗಳನ್ನು,ಕ್ಯಾರಿಯರ್ಗಳನ್ನು ಇಟ್ಟು , ಹೋಗುವ, ಕುಡಿಯಲು ಕೇಸ್ಗಟ್ಟಲೆ ಬಾಟಲುಗಳನ್ನು ಸಪ್ಲೈ ಮಾಡುವ ಈ ಎಲೆಕ್ಷನ್ನು ಎಂಬುದೇ ದೊಡ್ಡ ಸಂಭ್ರಮವಾಗಿ ಬಿಡುತ್ತದೆ.
ಈ ಸಡಗರ,ಸಂಭ್ರಮಗಳಲ್ಲಿ ಊರಮ್ಮನ ಜಾತ್ರೆಯನ್ನು,ಕೊತ್ಲದಯ್ಯನ ಆಚರಣೆಯನ್ನು,ವೀರಭದ್ರ ದೇವರ ಗುಗ್ಗುಳವನ್ನೂ ಕೂಡ ಮರೆತಿರುವುದೂ ಪರಿಸ್ಥಿತಿಯ ದುರಂತ. ಹೀಗೆ ಒಮ್ಮೆ ಆಯ್ಕೆಯಾಗಿ ಹೋದವನು ಮತ್ತೆ ಬರುತ್ತಿದ್ದುದು ಓಟು ಕೇಳಲೆಂದೆ.ಒಂದು ಕಾಲದಲ್ಲಿ ಆ ಪಕ್ಷದ ಹೆಸರಿನಲ್ಲಿ ಕತ್ತೆ ನಿಂತರೂ ಗೆದ್ದುಬರುತ್ತೆ ಎಂಬುದಾಗಿ ಸರಾಗವಾಗಿ ಹೇಳಬಹುದಿತ್ತು.
ಪೋರ ಪೋರಾ..
ಎಮ್ಮೆಲ್ಲೆ ಹತ್ರ ಹಳ್ಳಿಗೆ ಬಸ್ಸು ಬಿಡುವಂತೆಯೋ,ಶಾಲೆ ತೆರೆಯಿರೆಂದೋ,ಕೇಳಲು ಹೋದ ಬಡ ಮತದಾರರನ್ನು ಆ ಶಾಸಕ “ನಿಂದೊಂದೆ ಊರೇನ್ ನನಿಗೆ?ನಾನ್ ತಾಲೂಕಿಗೇ ಎಮ್ಮೆಲ್ಲೆ…ಪೋರ ಪೋರಾ (ತೆಲುಗು;ಹೋಗು ಹೋಗು)”ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಬೈದು ಕಳಿಸುತ್ತಿದ್ದ.
ಎಷ್ಟೇ ಆದರೂ ಮಾವಾಡು(ನಮ್ಮೋನು)ಅಂದುಕೊಂಡು ಜನ ಸುಮ್ಮನಾಗುತ್ತಿದ್ದರು. ದಿನಗಟ್ಟಳೆ ಓಡಾಡಿದರೂ ಒಂದ್ ಕಪ್ಪು ಕಾಫೀ ಕೂಡ ಸಿಗುತ್ತಿರಲಿಲ್ಲ.ಆ ಶಾಸಕ ಸತ್ಯಸಂಧನೇನೂ ಆಗಿರದೆ ಆತ ತನ್ನ , ಮಕ್ಕಳ ಹೆಸರಲ್ಲಿ, ಹೆಂಡತಿ ಹೆಸರಲ್ಲಿ ಹೊಲ,ಮನೆಗಳನ್ನೂ, ಮಾಡಿಕೊಳ್ಳುವ ಸಾಮಾನ್ಯ ಕಳ್ಳನಾಗಿದ್ದ .
ಸಣ್ಸಣ್ ಹುಡುಗ್ರೆಲ್ಲ ಲೀಡ್ರಗಳಾಗಿ ಹೋದ್ರು
ಇದಾಗಿ ಹದಿನೈದು ವರುಷಗಳೇ ಸರಿದುಹೋಗಿವೆ.ಜಿಲ್ಲೆಯ ರಾಜಕಾರಣದ ಚಿತ್ರಣವೇ ಬದಲಾಗಿಹೋಯ್ತು. ಸಣ್ಸಣ್ ಹುಡುಗ್ರೆಲ್ಲ ಲೀಡ್ರಗಳಾಗಿಹೋದ್ರು. ಎಲ್ಲೆಲ್ಲೂ ಮಣ್ಣು ಮಾರುವವರದೇ ಕಾರುಬಾರು. ಬೆಟ್ಟ ಗುಡ್ಡಗಳ ಅದಿರಿನ ಗಣಿಗಾರಿಕೆಯಿಂದ ರೊಕ್ಕದ ಅಬ್ಬರ ಹೆಚ್ಚಾಯಿತು. ಸಕ್ರಮ ಗಣಿಗಾರಿಕೆ ಅಕ್ರಮ ಗಣಿಗಾರಿಕೆಯತ್ತ ಮುಖಮಾಡಿತು. ಸಾವಿರ ಸಾವಿರ ಕೋಟಿ ರೂಪಾಯಿಗಳು ಧಣಿಗಳ ಮನೆಯಲ್ಲಿ ಶೇಖರಣೆಗೊಂಡವು. ಬರಿ ಟಿಫನ್ನಿಗೆ ಬೆಂಗ್ಳೂರಿಗೆ ಹೋಗುವ, ಮಧ್ಯಾಹ್ನದ ಊಟಕ್ಕೆ ಬೊಂಬಾಯಿಗೆ ವಿಮಾನದಲ್ಲಿ ಹಾರಾಡುವ ಗಣಿಧಣಿಗಳ ಬಗ್ಗೆ ಜನರು ಅಚ್ಚರಿಯಿಂದ ನೋಡುವಂತಾಯಿತು.
ಊರ ಜಾತ್ರೆಗಳಿಗೂ ಗಣಿ ಧಣಿಗಳು ದುಡ್ಡನ್ನು ನೀರಿನಂತೆ ಹರಿಸಿದರು. ಶುಕ್ರವಾರದ ಸಾಬರ ನಮಾಜು ಮಾಡುವ ಮಸೀದಿಗಳಿಗೂ ಬಿಸಿ ಬಿಸಿ ಬಿರಿಯಾನಿ ಸಪ್ಲೈಯಾಗತೊಡಗಿತು. ಹೊಸಪೇಟೆ ಬಳ್ಳಾರಿಯಂತಹ ನಗರಗಳಲ್ಲಿನ ಆಟೋ ಓಡಿಸುವವರಿಗೆ ಆಟೋಗಳನ್ನು ಉಚಿತವಾಗಿ ಕೊಡಲಾಯಿತು.ಅಜ್ಜನ ವಯಸ್ಸಿನವರಿಂದ ಹಿಡಿದು ಇವತ್ತಿನ ಹುಡುಗರವರೆಗೂ ಗಣಿರಾಜರುಗಳ ಚಿತ್ರವಿರುವ ಟೀ ಷರಟುಗಳನ್ನು ನೀಡಲಾಯಿತು.
ಈ ಭರಾಟೆಯಲ್ಲಿ ಜನರು ತಾವು ಕಳೆದುಕೊಂಡಿರುವುದನ್ನು ಮರೆತುಬಿಟ್ಟರು. ಕೆಲವರು ಹೊಲಗದ್ದೆಗಳನ್ನು ಬೀಳುಬಿಟ್ಟರು.ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಮಣ್ಣು ತುಂಬಲು ಮೈನ್ಸಿನ ಕೆಲಸಕ್ಕೆ ಹೋಗತೊಡಗಿದರು. ಲಾರಿ ಟಿಪ್ಪರುಗಳ ಗದ್ದಲದಲ್ಲಿ ಅದಿರು ಅಗೆಯುವ ಗದ್ದಲಕ್ಕೆ ಇಡೀ ಜಿಲ್ಲೆಯೇ ಅದುರಿ ಹೋದಂತಾಯಿತು.ಹೀಗೆ ಚುನಾವಣೆಯಲ್ಲಿ ಆರಿಸಿಹೋದವರು ಹಿಂದಿನ ಎಮ್ಮೆಲ್ಲೆಯಂತೆ ಬೈಯ್ಯುತಿರಲಿಲ್ಲ.
ಅಸಲಿಗೆ ಈಗಿನ ಎಮ್ಮೆಲ್ಲೆ,ಎಂ.ಪಿ,ಹೋಗಲಿ,ಗ್ರಾಮ ಪಂಚಾಯಿತಿ ಮೆಂಬರು ಕೂಡ ಜನರ ಕೈಗೇ ಸಿಗುತ್ತಿರಲಿಲ್ಲ.ಬಣ್ಣಬಣ್ಣದ ಕನ್ನಡಕಗಳ ಧರಿಸಿ ತರಹೇವಾರಿ ಕಾರುಗಳಲ್ಲಿ ಓಡಾಡುವ, ನೆತ್ತಿ ಮ್ಯಾಲಿನ ವಿಮಾನಗಳಲ್ಲಿ ಹಾರಾಡುವವರ ಕಲರ್ ಕಲರಿನ ಕತೆಗಳನ್ನು ಕೇಳುತ್ತಲೆ ಜನ ಕಾಲಕಳೆದರು.
ಹೀಗೆ ಜನರ ಕೈಗೆ ಸಿಗದ ಇವರ ಕಾಣಲೆಂದು ಮನವಿಪತ್ರ ಹಿಡಿದು ಬೆಂಗಳೂರಿಗೆ ಹೋದರೆ ಸಾಕಿತ್ತು.ಭವ್ಯ ಬಂಗಲೆಯಲ್ಲಿ ಭರ್ಜರಿ ಸ್ವಾಗತ ಕಾದಿರುತಿತ್ತು.ಓಟರ ಲಿಸ್ಟನ ನಂಬರು ಕೊಟ್ಟರೆ ಸಾಕು ,ಟಿಪನ್ನು,ಊಟದ ವ್ಯವಸ್ಥೆ ಮಾಡಲಾಗುತಿತ್ತು. ತಾವು ಯಾರು, ಬಂದ ಉದ್ದೇಶವನ್ನು ಹೇಳಿಕೊಳ್ಳಲು,ತಾವು ಆರಿಸಿ ಕಳುಹಿಸಿದ ಶಾಸಕನ ಮುಖ ಕೂಡ ನೋಡಲಾಗದಿದ್ದರೂ ಅವರ ಕಡೆ ಮಂದಿಯ ಭರ್ಜರಿ ಆತಿಥ್ಯಕ್ಕೆ ಜನ ಮನಸೋತಿದ್ದರಲ್ಲಿ ಆಶ್ಚರ್ಯವೇನಿಲ್ಲ.ಇಲ್ಲಿಗೇ ಮುಗಿಯದೆ ಅವರನ್ನು ವೈಭವೋಪೇತ ಬಸ್ಸಿನಲ್ಲಿ ಒಂದು ರೌಂಡು ಬೆಂಗಳೂರೆಂಬ ಮಾಯಾನಗರಿಯನ್ನು ತೋರಿಸಲಾಗುತಿತ್ತು. ಆತಿಥ್ಯ ಪಡೆದ ಬಡ ಮತದಾರನಿಗೆ ವಾಪಸು ಬರುವಾಗ ಐನೂರರ ಗಾಂಧಿ ನೋಟು ಕೊಡಲಾಗುತಿತ್ತು.
ಮಾಯಾಲೋಕದಲ್ಲಿ ಮಸುಕಾಗಿ ಹೋಗಿ ಬಿಡುತ್ತಿದ್ದವ
ಹಿಂದಿನ ಎಮ್ಮೆಲ್ಲೆಯ “ಪೋರ ..ಪೋರಾ..” ಎಂದು ಗದರಿಸಿ ಒಂದು ಕಪ್ಪು ಕಾಫೀನೂ ಕೊಡದೆ ಇರುವ ‘ಸಾಮಾನ್ಯ ಕಳ್ಳ’ನಿಗಿಂತ ಕಣ್ಣಿಗೇ ಕಾಣದಿದ್ದರೂ,ಕೈಗೆ ಸಿಗದಿದ್ದರೂ ಜನರಿಗೆ ಗಣಿಧಣಿಯೆಂಬ ಈ ‘ದರೋಡೆಕೋರ’ ಹೆಚ್ಚು ಅಪ್ಯಾಯಮಾನವಾಗಿ ಕಾಣಿಸಿಬಿಟ್ಟ.ಅಷ್ಟು ದೂರ ಊರಿನ ಸಮಸ್ಯೆಯನ್ನು ಹೊತ್ತು,ತುಂಬು ಗರ್ಭಿಣಿ ಹೆಂಡತಿ ದೂರದಿಂದ ನೀರಿನ ಕೊಡ ಹೊತ್ತು ಸಾಗುವ ದೃಶ್ಯಗಳು …ಎಲ್ಲವೂ ಬೆಂಗಳೂರೆಂಬ ಗಣಿಧಣಿಯ ಮಾಯಾಲೋಕದಲ್ಲಿ ಮಸುಕಾಗಿ ಹೋಗಿ ಬಿಡುತ್ತಿದ್ದವು.
ಹುಯ್ಯೋ …ಹುಯ್ಯೋ… ಮಳೆರಾಯ ಎಂಬಂತೆ ಎಲೆಕ್ಷನ್ನು ಮತ್ತೆ ಮತ್ತೆ ಬರಲಿ ಎಂದು ಇಲ್ಲಿನ ಜನ ಬಯಸುತ್ತಾರೆ.ಇನ್ನು ತಿಂಗಳೊಪ್ಪತ್ತಿನಲ್ಲಿ ಮತ್ತೆ ಚುನಾವಣೆ ಬರುತ್ತದೆ. ಜನರಿಗೆ ನಾಗರಪಂಚಮಿ,ಊರಮ್ಮ,ಗುಳೆಲಕ್ಕಮ್ಮನ ಜಾತ್ರೆಗಳ ಹಾಗೆ ಚುನಾವಣೆ ಎಂಬುದೂ ಇಂತಹ ಸಂಭ್ರಮಗಳ ಪಟ್ಟಿಯಲ್ಲಿ ಸೇರಿಹೋಗಿರುವುದು ಚೋದ್ಯವೇ ಸರಿ.
ಐದ್ರುಪಾಯಿಕೊಡಪಾ…’
ಪ್ರಾಮಾಣಿಕತೆ ನಂಬಿಕೆ ವಿಶ್ವಾಸಗಳೆಲ್ಲವೂ ಕೆಂಪು ಮಣ್ಣಿನೊಂದಿಗೆ ಎಲ್ಲಿಗೋ ರಫ್ತಾಗಿಹೋಗಿರುವಂತೆ ತೋರುವ,ಗಣಿಗಾರಿಕೆ ಸದ್ದಡಗಿ ಹೋದ ಊರುಗಳ ಅಗಾಧ ಮೌನ ಕಣ್ಣಲ್ಲಿ ನೀರು ತರಿಸುತ್ತದೆ. ಒಂದು ಕಾಲದ ಹೊಲದೊಡೆಯರು ಬಳ್ಳಾರಿಯ ಬಸ್ಟ್ಯಾಂಡುಗಳಲ್ಲಿ ‘ಊರಿಗೋಗಾಕ ಬಸ್ಚಾರ್ಜಿಗಿಲ್ಲ ..ಐದ್ರುಪಾಯಿಕೊಡಪಾ…’ ಎಂದು ಕೇಳುವಾಗ ಕರುಳು ಚುರುಕೆನ್ನುತ್ತದೆ. ಕಟ್ಟಿಗೆ ಮಾರಿ ಕಾಡಿನ ಹಣ್ಣುಗಳ ಮಾರಿ ಜೀವಿಸಿದ ಯಾಡೀ… ಸೊಂಡೂರಿನ ಬಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡುವುದನ್ನು ನೋಡುವಾಗ ಸಂಕಟವಾಗುತ್ತದೆ.
ನೆಲಕೆ ನಂಜು
ಗಾಯವಾದರೆ ಮಾಯಬಹುದೇನೋ………..ಆದರೆ ಆಗಿರುವುದು ಗಾಯವಲ್ಲ..ನೆಲಕೆ ನಂಜು ಆಗಿದೆ.ವಾಸಿಯಾಗುವುದೆಂತೋ ..?ಜನರು ಮತದ ಮೂಲಕವೇ ಉತ್ತರಿಸಬೇಕಿದೆ.
ಬಿ.ಶ್ರೀನಿವಾಸ