ದಾವಣಗೆರೆ ಆ.23: ಮಧ್ಯಸ್ಥಗಾರಿಕೆ ಮತ್ತು ರಾಜಿ ಸಂಧಾನದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ ಹೇಳಿದರು.
ಕರ್ನಾಟಕ ರಾಜ್ಯ ಮಧ್ಯಸ್ಥಿಕೆ ಕೇಂದ್ರ ಮತ್ತು ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯ ಮಧ್ಯಸ್ಥಗಾರ-ವಕೀಲರಿಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿವಿಲ್ ಪ್ರಕ್ರಿಯ ಸಮಿತಿ ಕರ್ನಾಟಕ ತಿದ್ದುಪಡಿ ಪ್ರಕಾರ ಕಲಂ 89ಎ ಅನ್ನು ಸೇರ್ಪಡೆ ಮಾಡಿದೆ. ಆ ಪ್ರಕಾರ ನ್ಯಾಯಾಲಯದಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ರಾಜಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಷ್ಟೇ ಅಲ್ಲದೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕ ಕೇಂದ್ರಗಳನ್ನು ಆಯೋಜಿಸಲಾಗಿದ್ದು, ನುರಿತ ವಕೀಲರ ನೇಮಕ ಮಾಡಿಕೊಂಡು ಅವರ ಮುಖೇನ ಜಾರಿಯಲ್ಲಿರುವ ಪ್ರಕರಣಗಳ ಮಧ್ಯಸ್ಥಿಕೆ ನಡೆಸಿ ರಾಜೀ ಮೂಲಕ ಇತ್ಯರ್ಥಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಮಧ್ಯಸ್ಥಿಕೆಗಾರಿಕೆ ಪ್ರಕ್ರಿಯೆಯಲ್ಲಿ ಪಕ್ಷಗಾರರಿಗೆ ಯಾವುದೇ ಒತ್ತಡ ಅಥವಾ ಬಾಹ್ಯ ಪ್ರೇರಣೆ ಇಲ್ಲದೆ ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗುವುದು. ಮಧ್ಯಸ್ಥಗಾರರು ಒಬ್ಬ ಮೂರನೇ ವ್ಯಕ್ತಿಯಾಗಿದ್ದು ಅವರು ಪಕ್ಷಗಾರರನ್ನು ಪ್ರತ್ಯೇಕವಾಗಿ ಮತ್ತು ಜಂಟಿಯಾಗಿ ವಿಚಾರಿಸಿ ಯೋಗ್ಯ ಮಾರ್ಗದರ್ಶನ ನೀಡುವರು ಎಂದ ಅವರು, ನ್ಯಾಯಾಲಯದ ನಿರ್ದೇಶನದಂತೆ ನಡೆಯುವ ಮಧ್ಯಸ್ಥಿಕ ಪ್ರಕ್ರಿಯೆ ಪಾರದರ್ಶಕ ನ್ಯಾಯಯುತ ಮತ್ತು ಪಕ್ಷಗಾರರ ಸ್ವಂತ ಮನಸ್ಸಿನಿಂದ ನಡೆಯುವ ಕಾರಣ ಎರಡು ಪಕ್ಷಗಾರರಿಗೆ (win-win situation) ಗೆಲ್ಲುವ ಅವಕಾಶ ಇದೆ ಎಂದು ತಿಳಿಸಿದರು.
ಸುಪ್ರಿಂಕೋರ್ಟ್ ನಿರ್ದೇಶನದಂತೆ ಈಗಾಗಲೇ ಜುಲೈ 2025 ರಿಂದ ಅಕ್ಟೋಬರ್ 2025 ರವರೆಗೆ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಪ್ರಸ್ತುತ ದಿನಮಾಗಳಲ್ಲಿ ಮೊದಲಿನ ರೀತಿ ಗ್ರಾಮ ಮಟ್ಟದಲ್ಲಿ ರಾಜಿ ಪಂಚಾಯಿತಿಗಳು ನಡೆಯುತ್ತಿಲ್ಲ. ಯಾರಿಗೂ ಕೂಡ ಇಂಥ ಸಂಧಾನ ಬೈಠಕ್ ಗಳನ್ನು ಮಾಡಲು ಸಮಯವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಆದರೂ ಕೂಡ ಗಾಂಧಿ ಭಾರತದ ಪರಿಕಲ್ಪನೆಯಂತೆ ನ್ಯಾಯಾಲಯಕ್ಕೆ ಬರುವ ಪಕ್ಷಗಾರರ ಮಧ್ಯ ಬಾಂಧವ್ಯವನ್ನು ಬೆಳೆಸಿ ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಗಾರಿಕೆ ಪ್ರಕ್ರಿಯೆ ಒಂದು ಉತ್ತಮ ಸಾಧನವಾಗಿದೆ ಎಂದು ತಿಳಿಸಿದರು.
ವಿಶೇಷ ತರಬೇತಿದಾರರಾದ ಸುಧಾ ಎಸ್.ಎನ್. ಮತ್ತು ಶ್ರೀ ಲಕ್ಷ್ಮೀಶರಾವ್ ರವರು ಮೂರೂ ಜಿಲ್ಲೆಗಳ ಮಧ್ಯಸ್ಥಗಾರ ಹಾಗೂ ಸಂಧಾನಕಾರರಿಗೆ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು.