ಕಳೆದೊಂದು ವಾರದಿಂದ ದಿಲ್ಲಿಯ ಕಾಂಗ್ರೆಸ್ ವರಿಷ್ಟರಿಗೆ ಹಲವು ಸಂದೇಶಗಳು ರವಾನೆಯಾಗುತ್ತಿವೆ.ಆದರೆ ವರಿಷ್ಟರ ಕಿವಿಗೆ ಅವು ಹಿತಕರವಾಗಿ ಕೇಳಿಸುತ್ತಿಲ್ಲ.ಅಂದ ಹಾಗೆ ಇಂತಹ ಸಂದೇಶಗಳಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಎಪಿಸೋಡು ಕಾರಣ ಎಂಬುದು ರಹಸ್ಯವಲ್ಲ.
ಇವತ್ತು ಮೇಲ್ನೋಟಕ್ಕೆ ರಾಹುಲ್ ಗಾಂಧಿ ಹೇಳಿಕೆಗೆ ಉಲ್ಟಾ ಹೊಡೆದರು ಎಂಬ ಕಾರಣಕ್ಕಾಗಿ ರಾಜಣ್ಣ ಅವರು ಸಂಪುಟದಿಂದ ವಜಾ ಆಗಿದ್ದಾರೆ.ಅದರೆ ಅಳಕ್ಕಿಳಿದು ನೋಡಿದರೆ ಅವರು ಸುರ್ಜೇವಾಲ ಅವರಿಗೆ ತಿರುಗೇಟು ಹೊಡೆದಿದ್ದರು ಎಂಬುದೇ ಅವರ ವಜಾ ಹಿಂದಿನ ಮೂಲ ಕಾರಣ.
ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ನಡುವಣ ಕೊಂಡಿಯಾಗಿ ನೇಮಕಗೊಂಡಿರುವ ಸುರ್ಜೇವಾಲ ಸ್ವಯಂ ಅಗಿ ಶಾಸಕರು,ಸಚಿವರು ಮತ್ತು ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಿದರಲ್ಲ? ಇದನ್ನು ಸಚಿವ ರಾಜಣ್ಣ ಪ್ರಶ್ನಿಸಿದ್ದರು. ಎಐಸಿಸಿ ಉಸ್ತುವಾರಿಗೆ ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿದ ಸನ್ಮಾನವನ್ನೇ ಇಲ್ಲಿ ಸುರ್ಜೇವಾಲ ಅವರಿಗೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು.
ಯಾವಾಗ ಸಚಿವ ರಾಜಣ್ಣ ಈ ರೀತಿ ಮುಗಿಬಿದ್ದರೋ? ಇದಾದ ನಂತರ ದಿಲ್ಲಿ ವರಿಷ್ಟರು ಎಚ್ಚರಿಕೆಯಿಂದ ಹೆಜ್ಜೆ ಇಡತೊಡಗಿದರು. ವಾಸ್ತವವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಸಿದ್ಧರಾಮಯ್ಯ ಅವರ ಪರವಾಗಿಯೇ ಇದ್ದವರು.
ಆದರೆ ಯಾವಾಗ ರಾಜಣ್ಣ ಅವರು ಸುರ್ಜೇವಾಲ ಅವರ ಮೇಲೆ ಮುಗಿಬಿದ್ದರೋ? ಇದಾದ ನಂತರ ಅವರು ಸುರ್ಜೇವಾಲ ಪರ ನಿಂತರು.ಅಷ್ಟೇ ಅಲ್ಲ.ಮತಗಳ್ಳತನದ ವಿರುದ್ದ ರಾಹುಲ್ ಗಾಂಧಿ ಆಡಿದ ಮಾತಿಗೆ ರಾಜಣ್ಣ ಉಲ್ಟಾ ಹೊಡೆದ ಕೂಡಲೇ ಖೆಡ್ಡಾ ರೂಪಿಸಲು ಸುರ್ಜೇವಾಲಾ ಅವರಿಗೆ ಸಹಾಯ ಮಾಡಿದರು.
ದಿಲ್ಲಿ ಮೂಲಗಳ ಪ್ರಕಾರ: ರಾಜಣ್ಣ ಎಪಿಸೋಡಿನ ಬಗ್ಗೆ ರಾಹುಲ್ ಗಾಂಧಿಯವರಿಗೆ ಕನ್ವಿನ್ಸು ಮಾಡಿದವರೇ ಕೆ.ಸಿ.ವೇಣುಗೋಪಾಲ್. ಕಾರಣ? ಒಂದು ಸಲ ಉಸ್ತುವಾರಿ ಹೊಣೆ ಹೊತ್ತುಕೊಂಡವರ ಪವರ್ರು ಕಡಿಮೆಯಾದರೆ ಇದೇ ಸಂಪ್ರದಾಯ ಬೇರೆ ರಾಜ್ಯಗಳಲ್ಲೂ ಶುರುವಾಗುತ್ತದೆ.
ಅದರಲ್ಲೂ ಹೈಕಮಾಂಡ್ ನ ಬೇಕು-ಬೇಡಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಉಸ್ತುವಾರಿಗಳನ್ನು ಹೈಕಮಾಂಡ್ ನೇಮಕ ಮಾಡಿರುತ್ತದೆ. ಹೀಗಿದ್ದಾಗ ಅವರಿಗೆ ಒಂದು ರಾಜ್ಯದಲ್ಲಿ ಅವಮಾನವಾದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸುವುದು ಹೈಕಮಾಂಡ್ ತಾನೇ? ಹೀಗಾಗಿಯೇ ವೇಣುಗೋಪಾಲ್ ಅವರು ಧ್ವನಿ ಬದಲಿಸಿ, ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ರಾಹುಲ್ ಮೂಲಕ ಸಿದ್ಧರಾಮಯ್ಯ ಅವರಿಗೆ ಹೇಳಿಸಿದರು.
ಇವತ್ತು ಕೆ.ಸಿ.ವೇಣುಗೋಪಾಲ್ ಏನು ಹೇಳುತ್ತಾರೋ? ರಾಹುಲ್ ಗಾಂಧಿ ಅದನ್ನು ಕೇಳುತ್ತಾರೆ.ಅರ್ಥಾತ್ ವೇಣುಗೋಪಾಲ್ ಅವರ ಇಶಾರೆಯಿಲ್ಲದೆ ರಾಹುಲ್ ಗಾಂಧಿ ಒಂದು ಹೆಜ್ಜೆ ಮುಂದಿಡುವುದಿಲ್ಲ. ರಾಜಣ್ಣ ಎಪಿಸೋಡಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರಿಗೂ ಇದು ಸ್ಪಷ್ಟವಾಗಿದೆ.
ರಾಜಣ್ಣ ಎಪಿಸೋಡಿನ ಪರಿಣಾಮ ಏನು? (Political analysis)
ಅಂದ ಹಾಗೆ ಮಂತ್ರಿ ಮಂಡಲದಿಂದ ಕೆ.ಎನ್.ರಾಜಣ್ಣ ವಜಾ ಆದರಲ್ಲ?ಇದಾದ ನಂತರ ಡಿಸಿಎಂ ಡಿಕೆಶಿ ಕ್ಯಾಂಪಿನಲ್ಲಿ ಉತ್ಸಾಹ ಗರಿಗೆದರಿದೆ. ಅಧಿಕಾರ ಹಂಚಿಕೆಯ ಮಾತಿಗೆ ಸಿದ್ದರಾಮಯ್ಯ ದಿಲ್ಲಿಯಲ್ಲೇ ಗುದ್ದು ಕೊಟ್ಟ ನಂತರ ಮಂಕಾಗಿದ್ದ ಈ ಕ್ಯಾಂಪು ಪುನ: ಮೇಲೆದ್ದಿದೆಯಲ್ಲದೆ, ಡಿಸೆಂಬರ್ ನಲ್ಲಿ ಡಿಕೆಶಿ ಸಿಎಂ ಆಗುವುದು ಗ್ಯಾರಂಟಿ ಅಂತ ಹೇಳತೊಡಗಿದೆ.
ಹೀಗೆ ಅದು ಅಧಿಕಾರ ಹಂಚಿಕೆಯ ಮಾತನ್ನು ಪುನ: ಪ್ರಸ್ತಾಪಿಸಲು ರಾಜಣ್ಣ ವಜಾ ಎಪಿಸೋಡು ಕೊಟ್ಟ ಶಕ್ತಿಯೇ ಕಾರಣ. ಅದರ ಪ್ರಕಾರ:ಅಧಿಕಾರ ಹಂಚಿಕೆಯ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದವರೇ ರಾಜಣ್ಣ. ಎರಡೂವರೆ ವರ್ಷಗಳ ನಂತರ ಡಿಕೆಶಿ ಸಿಎಂ ಅಗುತ್ತಾರೆ ಎಂಬ ಪ್ರಸ್ತಾಪವಾದರೆ,ಇಲ್ಲ,’ಇಲ್ಲ,ಅಧಿಕಾರ ಹಂಚಿಕೆಯ ಮಾತೇ ಇಲ್ಲ.ಐದು ವರ್ಷಗಳ ಕಾಲವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ’ ಅಂತ ರಾಜಣ್ಣ ತಿರುಗೇಟು ಹೊಡೆಯುತ್ತಿದ್ದರು.
ಮೂಲಗಳ ಪ್ರಕಾರ:ಕರ್ನಾಟಕದಲ್ಲಿ ಸುರ್ಜೇವಾಲ ಅವರ ಬಾಸಿಸಂ ಎಪಿಸೋಡು ಶುರುವಾಯಿತಲ್ಲ?ಇದು ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ನಡೆಯುತ್ತಿರುವ ಷಡ್ಯಂತ್ರ ಎಂಬ ತೀರ್ಮಾನಕ್ಕೆ ಬಂದಿದ್ದ ರಾಜಣ್ಣ ಅವರು ದಿಲ್ಲಿಗೇ ನುಗ್ಗಲು ತಯಾರಿ ನಡೆಸಿದ್ದರು.
ಹೀಗೆ ದಿಲ್ಲಿಗೆ ನುಗ್ಗಿ ವರಿಷ್ಟರನ್ನು ಭೇಟಿ ಮಾಡಲು ತೀರ್ಮಾನಿಸಿದ್ದ ರಾಜಣ್ಣ ಅವರು:’ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂದಾದರೆ ಸರ್ಕಾರವನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವುದು ಒಳ್ಳೆಯದು.ಡಿಕೆಶಿ ಸಿಎಂ ಆಗಬೇಕು ಎಂಬುದಾದರೆ ಅವರ ನೇತೃತ್ವದಲ್ಲೇ ಪಕ್ಷ ಚುನಾವಣೆ ಎದುರಿಸಿ ಗೆಲ್ಲಲಿ’ಎಂದು ಹೇಳಲು ಸಜ್ಜಾಗಿದ್ದರು.
ಆದರೆ ಹೀಗೆ ಸಜ್ಜಾದ ರಾಜಣ್ಣ ದಿಲ್ಲಿಗೆ ನುಗ್ಗುವ ಮುನ್ನವೇ ಸಂಪುಟದಿಂದ ಗೇಟ್ ಪಾಸ್ ಪಡೆದಿದ್ದಾರೆ. ಹೀಗೆ ಅವರು ಗೇಟ್ ಪಾಸ್ ಪಡೆದ ಬೆಳವಣಿಗೆಯಿಂದ ಖುಷಿಯಾಗಿರುವ ಡಿಕೆಶಿ ಕ್ಯಾಂಪು:ಇದು ಭವಿಷ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಜ್ಜಾಗಿದೆ ಎಂಬುದರ ಸಂಕೇತ.
ನಾವು ಹೇಳಿದಂತೆ ಕೇಳಬೇಕು.ಇಲ್ಲದಿದ್ದರೆ ಕ್ರಮ ಗ್ಯಾರಂಟಿ ಎಂಬುದು ವರಿಷ್ಟರ ಸಂದೇಶ. ಇದಕ್ಕೆ ಯಾರೇ ವ್ಯತಿರಿಕ್ತವಾಗಿ ಮಾತನಾಡಿದರೂ ವರಿಷ್ಟರು ಸಹಿಸುವುದಿಲ್ಲ.ರಾಜಣ್ಣ ಎಪಿಸೋಡೇ ಅದಕ್ಕೆ ಸಾಕ್ಷಿ ಎನ್ನುತ್ತಿದೆ. ಆದರೆ ಡಿಕೆಶಿ ಕ್ಯಾಂಪಿನ ಈ ಉತ್ಸಾಹದ ನಡುವೆ ಸಿಎಂ ಸಿದ್ಧರಾಮಯ್ಯ ಬ್ರಿಗೇಡ್ ಬೇರೆ ರೀತಿ ಯೋಚಿಸುತ್ತಿದೆ. ಬರೀ ಯೋಚಿಸುವುದಷ್ಟೇ ಅಲ್ಲ,ದಿಲ್ಲಿಗೆ ಹೋಗಿ ವರಿಷ್ಟರಿಗೆ ಆತಂಕದ ಸಂದೇಶವನ್ನು ರವಾನಿಸಲು ನಿರ್ಧರಿಸಿದೆ.
ಅದರ ಪ್ರಕಾರ:ರಾಜಣ್ಣ ವಜಾ ಎಪಿಸೋಡಿನ ನಂತರ ಕರ್ನಾಟಕದ ವಾಲ್ಮೀಕಿ ಮತ ಬ್ಯಾಂಕು ಕುದಿಯುತ್ತಿದೆ. ಇವತ್ತು ತುಮಕೂರು, ಚಿತ್ರದುರ್ಗ,ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರ್ಣಾಯಕವಾಗಿರುವ ವಾಲ್ಮೀಕಿ ಮತ ಬ್ಯಾಂಕು ಈ ಬೆಳವಣಿಗೆಯಿಂದ ಬಿಜೆಪಿ ಕಡೆ ಹೊರಳಿಕೊಳ್ಳುವ ಸಾಧ್ಯತೆ ಇದೆ.
ಇವತ್ತು ಬಿಜೆಪಿಯಲ್ಲಿ ರೆಡ್ಡಿ-ಶ್ರೀರಾಮುಲು ಡೆಡ್ಲಿ ಕಾಂಬಿನೇಷನ್ ಮುರಿದು ಬಿದ್ದಿರುವುದೇನೋ ನಿಜ.ಆದರೆ ಇವರನ್ನು ಒಂದು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದು ವೇಳೆ ಈ ಡೆಡ್ಲಿ ಕಾಂಬಿನೇಷನ್ ಪುನ: ಮೇಲೆದ್ದು ನಿಂತರೆ ವಾಲ್ಮೀಕಿ ಮತ ಬ್ಯಾಂಕು ಬಿಜೆಪಿ ಕಡೆ ಹೊರಳಿಕೊಳ್ಳುವುದು ಕಷ್ಟವಲ್ಲ. ಹಾಗಾಗಬಾರದು ಎಂದರೆ ರಾಜಣ್ಣ ಎಪಿಸೋಡಿನ ಹಿಂದೆ ನಡೆದಿರುವ ಷಡ್ಯಂತ್ರಗಳನ್ನು ಗಮನಿಸಬೇಕು.ಆಗಿರುವ ಡ್ಯಾಮೇಜನ್ನು ಸರಿಪಡಿಸುವ ಕೆಲಸವಾಗಬೇಕು ಎಂಬುದು ಸಿದ್ಧರಾಮಯ್ಯ ಕ್ಯಾಂಪಿನ ವರಸೆ.
ಇನ್ನು ಕಳೆದ ಎರಡು ವರ್ಷಗಳಿಂದ ಶಾಮನೂರು ಶಿವಸಂಕರಪ್ಪ ಸೇರಿದಂತೆ ಬಲಿಷ್ಟ ವರ್ಗಗಳ ಹಲವು ನಾಯಕರು ಕಾಂಗ್ರೆಸ್ ಹೈಕಮಾಂಡ್ ವಿರುದ್ದವೇ ಗುಡುಗಿದ್ದಾರೆ.ಆದರೆ, ಅವರಿಗೆ ಒಂದು ನೋಟೀಸೂ ಕೊಡದ ಹೈಕಮಾಂಡ್, ದುರ್ಬಲ ವರ್ಗಗಳ ನಾಯಕರ ಮೇಲೆ ಪ್ರಹಾರ ಮಾಡುವುದು ಎಷ್ಟು ಸರಿ? ಎಂಬುದು ಅದರ ವರಾತ.ಹಾಗಂತಲೇ ಕಳೆದ ಎರಡು ವರ್ಷಗಳಿಂದ ಏನೇನು ನಡೆದಿದೆ? ಎಂಬುದರ ವಿವರವನ್ನು ಪಟ್ಟಿ ಮಾಡಿರುವ ಸಿದ್ದು ಬ್ರಿಗೇಡ್ ಸಧ್ಯದಲ್ಲೇ ದೆಹಲಿಗೆ ತೆರಳಲಿದೆ.ಮತ್ತು ಅದರ ನೇತೃತ್ವವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಹಿಸಿಕೊಳ್ಳಲಿದ್ದಾರೆ.
ರಘು ಮೂರ್ತಿಗೆ ಲಕ್ಕು? (Political analysis)
ಈ ಮಧ್ಯೆ ರಾಜಣ್ಣ ಅವರ ವಜಾ ನಂತರ ತೆರವಾಗಿರುವ ಜಾಗಕ್ಕೆ ಚಳ್ಳಕೆರೆ ಶಾಸಕ ರಘು ಮೂರ್ತಿ ಅವರನ್ನು ತರಲು ಸಿದ್ದು ಕ್ಯಾಂಪು ಬಯಸಿದೆ. ಇವತ್ತು ಕ್ಷೇತ್ರದ ಅಭಿವೃದ್ದಿಯ ವಿಷಯದಲ್ಲಿ ರೋಲ್ ಮಾಡೆಲ್ ಅಗಿರುವ ರಘು ಮೂರ್ತಿ ಈ ಹಿಂದೆ ಬಿಜೆಪಿ ಅಲೆ ಇದ್ದ ಕಾಲದಲ್ಲೂ ಜಗ್ಗದೆ ಗೆದ್ದು ಬಂದವರು.
ವಾಲ್ಮೀಕಿ ಸಮುದಾಯದ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಬಿ.ಶ್ರೀರಾಮುಲು ಅಂತವರ ಹೊಡೆತಕ್ಕೂ ಬಗ್ಗದ ರಘು ಮೂರ್ತಿ 2018 ರಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಈ ಸಲವೂ ನಿರಾಯಾಸವಾಗಿ ಗೆದ್ದು ಬಂದಿರುವ ರಘುಮೂರ್ತಿ ಅವರಲ್ಲಿ ಭವಿಷ್ಯದ ನಾಯಕನನ್ನು ಕಂಡಿರುವ ಸಿದ್ದು ಕ್ಯಾಂಪು ರಾಜಣ್ಣ ತೆರವು ಮಾಡಿದ ಜಾಗಕ್ಕೆ ಅವರು ಬರಲಿ ಅಂತ ಬಯಸಿದೆ.
ಪರಮೇಶ್ವರ್ ಬೆನ್ನ ಹಿಂದೆ ರಾಮಬಾಣ (Political analysis)
ಕುತೂಹಲದ ಸಂಗತಿ ಎಂದರೆ,ರಾಜಣ್ಣ ಎಪಿಸೋಡಿನ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರು ಮುನ್ನೆಲೆಗೆ ಬಂದಿದೆ. ಅಂದ ಹಾಗೆ ಪರ್ಯಾಯ ನಾಯಕತ್ವದ ರೇಸಿನಲ್ಲಿ ಈ ಹಿಂದೆಯೂ ಪರಮೇಶ್ವರ್ ಅವರ ಹೆಸರು ಕೇಳಿ ಬಂದಿತ್ತು. ಮತ್ತು ಇದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ಪರಮೇಶ್ವರ್ ಅವರೊಂದಿಗೆ ಸೀಕ್ರೆಟ್ ಮೀಟಿಂಗುಗಳನ್ನು ನಡೆಸುತ್ತಿದ್ದರು. ಆದರೆ ಒಂದು ಹಂತದಲ್ಲಿ ಪರ್ಯಾಯ ನಾಯಕತ್ವದ ರೇಸಿನಿಂದ ಪರಮೇಶ್ವರ್ ಹೆಸರು ಹಿಂದೆ ಸರಿದಿತ್ತಲ್ಲದೆ ಕ್ರಮೇಣ ಆ ಕುರಿತ ಮಾತೇ ತಣ್ಣಗಾಗಿತ್ತು.
ಆದರೆ ಈಗ ವರಿಷ್ಟರ ಕಿವಿಗೆ ತಲುಪಿರುವ ಮಾಹಿತಿಯ ಪ್ರಕಾರ,ಪರ್ಯಾಯ ನಾಯಕತ್ವದ ರೇಸಿನಲ್ಲಿ ಪರಮೇಶ್ವರ್ ಹೆಸರು ಮುನ್ನೆಲೆಗೆ ಬಂದಿದೆ. ಅಂದ ಹಾಗೆ ಅಧಿಕಾರ ಹಂಚಿಕೆಯ ಮಾತಿಗೆ ಇವತ್ತೂ ಸಿದ್ಧರಾಮಯ್ಯ ಒಪ್ಪುವುದಿಲ್ಲ.ಆದರೆ ಅಧಿಕಾರ ಬಿಟ್ಟುಕೊಡಿ ಅಂತ ರಾಹುಲ್ ಗಾಂಧಿ ಕೇಳಿಕೊಂಡರೆ ಉಲ್ಟಾ ಹೊಡೆಯುವ ಮನ:ಸ್ಥಿತಿಯೂ ಅವರಲ್ಲಿಲ್ಲ. ಹೀಗಾಗಿ ಸನ್ನಿವೇಶ ಬಿಗಡಾಯಿಸಿದರೆ ಅವರು ನಾಯಕತ್ವ ಬದಲಾವಣೆಯ ವಿಷಯದಲ್ಲಿ ಒಂದು ಷರತ್ತು ಹಾಕಲಿದ್ದಾರೆ.ಅದೆಂದರೆ ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ತೀರ್ಮಾನವಾಗಬೇಕು ಎಂಬುದು.
ಒಂದು ವೇಳೆ ತಾವು ಈ ಪ್ರಪೋಸಲ್ಲನ್ನು ಒಪ್ಪಿದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿದ್ದು ಬ್ರಿಗೇಡ್ ಅಭ್ಯರ್ಥಿಯಾಗಲಿದ್ದಾರೆ. ಒಂದು ವೇಳೆ ತಾವು ಇದನ್ನು ನಿರಾಕರಿಸಿದರೆ ಸರ್ಕಾರ ಅಲುಗಾಡಲಿದೆ ಎಂಬುದು ವರಿಷ್ಟರಿಗಿರುವ ಮಾಹಿತಿ. ಹೀಗೆ ದಿಲ್ಲಿಗೆ ತಲುಪಿರುವ ಮಾಹಿತಿ ಮುಂದೆ ಯಾವ್ಯಾವ ತಿರುವು ಪಡೆಯುತ್ತದೋ?ಅದು ಬೇರೆ ವಿಷಯ.ಆದರೆ ಇದರ ನಡುವೆ ಪರಮೇಶ್ವರ್ ಹೆಸರು ಮುನ್ನೆಲೆಗೆ ಬಂದಿದೆಯಲ್ಲ? ಅದೇ ಸಧ್ಯದ ವಿಶೇಷ.
ವಿಜಯೇಂದ್ರ ಅವರಿಗೆ ನಡ್ಡಾ ಹೇಳಿದ್ದೇನು? (Political analysis)
ಇನ್ನು ವೆಬ್ ಸೀರೀಸ್ ನಂತಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ವಿಷಯ ಬಿಹಾರ ವಿಧಾನಸಭೆ ಚುನಾವಣೆಯವರೆಗೆ ಸೆಟ್ಲಾಗುವಂತೆ ಕಾಣುತ್ತಿಲ್ಲ. ಹಾಲಿ ಅಧ್ಯಕ್ಷರು ಬದಲಾಗುವುದು ಗ್ಯಾರಂಟಿ ಎಂಬ ಮಾತು ಕೇಳಿ ಕೇಳಿ ರೋಸತ್ತು ಹೋಗಿರುವ ಬಿ.ವೈ.ವಿಜಯೇಂದ್ರ ಅವರು ಮೊನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಸಂಪರ್ಕಿಸಿದ್ದರಂತೆ.
‘ಸಾರ್,ಪಕ್ಷದ ಅಧ್ಯಕ್ಷರ ಘೋಷಣೆ ವಿಷಯ ಪೆಂಡಿಂಗ್ ಇದ್ದರೆ ಹೇಗೆ?ದಿನ ಬೆಳಗಾದರೆ ಅಧ್ಯಕ್ಷರು ಬದಲಾಗುತ್ತಾರೆ ಅಂತ ಯಾರೋ ಹೇಳುತ್ತಿದ್ದರೆ ಕೆಲಸ ಮಾಡುವುದು ಹೇಗೆ?ಅಂತ ಈ ಸಂದರ್ಭದಲ್ಲಿ ಕೇಳಿದರೆ ಜಗತ್ ಪ್ರಕಾಶ್ ನಡ್ಡಾ ಅಚ್ಚರಿ ವ್ಯಕ್ಯಪಡಿಸಿದರಂತೆ. ಅಲ್ಲ, ನಿಮ್ಮನ್ನು ಅಧ್ಯಕ್ಷರು ಅಂತ ತಾನೇ ಈ ಹಿಂದೆ ಘೋಷಿಸಿದ್ದು! ಹೀಗಿರುವಾಗ ಇನ್ನೇನಿದೆ ಗೊಂದಲ?ವಿರೋಧಿಗಳು ಏನಾದರೊಂದು ಹೇಳುತ್ಯಲೇ ಇರುತ್ತಾರೆ.ಹಾಗಂತ ಯೋಚಿಸುತ್ತಾ ಕೂತರೆ ಹೇಗೆ?ಇವತ್ತು ನೀವೇ ರಾಜ್ಯ ಬಿಜೆಪಿಯ ಅಧ್ಯಕ್ಷರು.ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗುತ್ತಿರಿ ಅಂತ ನಡ್ಡಾ ಕಟ್ಟು ನಿಟ್ಟಾಗಿ ಹೇಳಿದ ಮೇಲೆ ವಿಜಯೇಂದ್ರ ಕೂಲ್ ಆಗಿದ್ದಾರೆ.
ಅಲ್ಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ವಿಷಯ ಬಿಹಾರ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸೆಟ್ಲಾಗುವುದಿಲ್ಲ ಎಂಬುದು ನಿಕ್ಕಿಯಾಗಿದೆ. ಯಾಕೆಂದರೆ ಬಿಹಾರ ವಿಧಾನಸಬೆ ಚುನಾವಣೆ ಮುಗಿಯುವವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಯ್ಕೆ ವಿಷಯ ಸೆಟ್ಲಾಗುವುದಿಲ್ಲ.ಅದು ಸೆಟ್ಲಾಗುವವರೆಗೆ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ತಾನದ ವಿಷಯವೂ ಸೆಟ್ಲಾಗುವುದಿಲ್ಲ.
ಆರ್.ಟಿ.ವಿಠ್ಠಲಮೂರ್ತಿ