ದಾವಣಗೆರೆ (Davanagere): ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಹುದ್ದೆಯ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಎನ್‌ಎಚ್‌ಎಂ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಹಲವಾರು ವರ್ಷಗಳಿಂದ ಕಡಿಮೆ ವೇತನ ಪಡೆಯುತ್ತಿರುವ ಪಿಎಚ್‌ಸಿಒ ಸಿಬ್ಬಂದಿಗಳಿಗೆ ತುಂಬಾ ಅನ್ಯಾಯವಾಗಿದ್ದು, ಈ ಆದೇಶವನ್ನು ಮರು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉದ್ಯೋಗಾಕಾಂಕ್ಷಿಗಳ ಸಂಘದ ನೇತೃತ್ವದಲ್ಲಿ ಪಿಎಚ್‌ಸಿಒ ಸಿಬ್ಬಂದಿಗಳು ಮನವಿ ಸಲ್ಲಿಸಿದರು.
ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಾಸಕರನ್ನು ಭೇಟಿ ಮಾಡಿದ ಸಿಬ್ಬಂದಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಹುದ್ದೆಗಳಿಗೆ ಜಿಎನ್‌ಎಂ( ಡಿಪ್ಲೊಮಾ, ಪದವಿ ಕೋರ್ಸ್, ಬಿಎಸ್ಸಿ ನರ್ಸಿಂಗ್) ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನಮೂದಿಸಿದ್ದು, ಇದರಿಂದ ಪಿಎಚ್‌ಸಿಒ ಸಿಬ್ಬಂದಿಗಳಿಗೆ ಅನ್ಯಾಯವಾಗಿದೆ. ಕೂಡಲೇ ಮರು ಪರಿಶೀಲನೆ ನಡೆಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಈ ನೇಮಕಾತಿಯನ್ನು ವಿಶೇಷ ಅಡಿಯಲ್ಲಿ ನೇರ ನೇಮಕಾತಿಯನ್ನು ಮಾಡಿಕೊಳ್ಳಲು ಉಲ್ಲೇಶ (೨) ರಲ್ಲಿ ಇರುವ ಆದೇಶದಂತೆ ೨೦೧೭ರಲ್ಲಿ ಯಾವ ರೀತಿ ನೇಮಕಾತಿ ಆಗಿದೆಯೋ ಅದೇ ರೀತಿ ನೇರ ನೇಮಕಾತಿ ಮಾಡಬೇಕು. ಈ ವಿಶೇಷ ನೇಮಕಾತಿಯಲ್ಲಿ ಎನ್‌ಎಚ್‌ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಚ್‌ಸಿಒ ಸಿಬ್ಬಂದಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಕನಿಷ್ಠ ೧ರಂತೆ ಮುಂದುವರೆದು ಗರಿಷ್ಠ ೧೦ ವರ್ಷದವರೆಗೆ ನೀಡಬೇಕು.
ಎನ್‌ಎಚ್‌ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಕೃಪಾಂಕ ವರ್ಷಕ್ಕೆ ೩ ರಂದು ಒಂದು ಬಾರಿ ನೇಮಕಾತಿಗೆ ಅನ್ವಯಿಸುವಂತೆ ಉಲ್ಲೇಖ ೩ರ ಆದೇಶದ ಹಾಗೆಯೇ ನೇಮಕಾತಿ ಮಾಡಿದಂತೆ ಮಾಡಬೇಕು ಹಾಗೂ ಎಎನ್‌ಎಂ ತರಬೇತಿಯ ಅಂಕಗಳ ಆಧಾರದ ಮೇಲೆಯೇ ನೇಮಕಾತಿ ಮಾಡಿಕೊಳ್ಳಬೇಕು. ಈ ಮಾನದಂಡದಲ್ಲಿ ಸರ್ಕಾರ ನೇಮಕಾತಿ ಮಾಡಿದರೆ ಅತೀ ಕಡಿಮೆ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಚ್‌ಸಿಒ ಸಿಬ್ಬಂದಿಗಳಿಗೆ ನ್ಯಾಯ ಒದಗಿಸದಂತೆ ಆಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಎನ್.ಎಂ.ರೂಪ, ಆರ್.ಸುಧಾ, ಶಹಾನ, ಉಮಾ ಬಾಯಿ, ಕಮಲಬಾಯಿ, ರುದ್ರಮ್ಮ, ಸ್ವರೂಪ, ಬಿ.ಎನ್.ಲತಾ, ರೇಖಾ, ಶಿವು ಬಾಯಿ, ತಿಪ್ಪಮ್ಮ ಸೇರಿದಂತೆ ಪದಾಧಿಕಾರಿಗಳು ಇದ್ದರು.