ದಾವಣಗೆರೆ (Davanagere) : ಪ.ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊAಡು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ರಥಯಾತ್ರೆಗೆ ಅಡ್ಡಿಪಡಿಸಿ, ಹೋರಾಟಗಾರರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿಯ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಕ್ರಾಂತಿಕಾರಿ ರಥಯಾತ್ರೆ ಪ್ರಯುಕ್ತ ಮೇ.25 ರಂದು ಮೈಸೂರಿನ ಚಾಮುಂಡಿ ಬೆಟ್ಟದಿಂದ ಅರೆಬೆತ್ತಲೆಯಾಗಿ ಶಾಂತಿಯುತ ಪಾದಯಾತ್ರೆ ಕೈಗೊಂಡಿದ್ದ ವೇಳೆ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕಾರು ಜನ ಕಲ್ಲು ತೂರಲು ಪ್ರಯತ್ನಿಸಿದ್ದು, ಅಂತಹವರನ್ನು ಕಾನೂನು ಪ್ರಕಾರ ಬಂಧಿಸುವ ಬದಲು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದ್ದು ಏಕೆ ಎಂಬ ಪ್ರಶ್ನೆಗೆ ಪೊಲೀಸ್ ಇಲಾಖೆ ಉತ್ತರಿಸಬೇಕು ಎಂದು ಸಮಿತಿ ಮುಖಂಡರು ಒತ್ತಾಯಿಸಿದರು.
ಬಂಧನಕ್ಕೆ ನಿಖರ ಕಾರಣವನ್ನು ಪೊಲೀಸ್ ಇಲಾಖೆ ನೀಡುತ್ತಿಲ್ಲ. ಪಾದಯಾತ್ರೆಗೆ ಅಡ್ಡಿ ಮಾಡುವವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಬೇಕಾಗಿದ್ದ ಪೊಲೀಸ್ ಇಲಾಖೆಯು ರಥಯಾತ್ರೆಗೆ ಅಡ್ಡಿಪಡಿಸಿದೆ. ತಪ್ಪಿತಸ್ಥರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ಟ್ರಾಫಿಕ್ ಸಮಸ್ಯೆ ನೆಪವೊಡ್ಡಿ, ಕ್ರಾಂತಿಕಾರಿ ರಥಯಾತ್ರೆಯಲ್ಲಿದ್ದವರನ್ನು ಕಾರಣವಿಲ್ಲದೆ ಬಂಧಿಸಿದ್ದು ಸರಿಯಲ್ಲ. ಪೊಲೀಸರು ಹೋರಾಟಗಾರರ ಮೇಲೆ ಬಲಪ್ರಯೋಗ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಜಾರಿಯಾಗುವವರೆಗೆ ಬಡ್ತಿ ಮೀಸಲಾತಿ ತಡೆಹಿಡಿಯಬೇಕು. ತುಳಿತಕ್ಕೊಳಗಾದ ಮಾದಿಗ ಸಮಾಜಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಮಾದಿಗರ ಹೋರಾಟ ಹತ್ತಿಕ್ಕುವ ದುಸ್ಸಾಹಸವನ್ನು ಯಾರೂ ಮಾಡಬಾರದು. ಹೋರಾಟವನ್ನು ದಮನ ಮಾಡಲು ಯತ್ನಿಸಿದರೆ ಜೂನ್ 9 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದ ಐತಿಹಾಸಿಕ, ಬೃಹತ್ ಸಮಾವೇಶದ ಮೂಲಕ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು. ಕ್ರಾಂತಿಕಾರಿ ರಥಯಾತ್ರೆ ಮುಗಿಯುವವರೆಗೂ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
Read also : ಎಸ್ಸಿ ಪಟ್ಟಿಗೆ ವೀರಶೈವ ಜಂಗಮರು ಸೇರ್ಪಡೆ: ತಡೆಯಲು ವಕೀಲರು ಆಗ್ರಹ
ಸಮಿತಿ ಜಿಲ್ಲಾಧ್ಯಕ್ಷ ಸಿ.ಬಸವರಾಜ, ಮುಖಂಡರಾದ ಹೆಗ್ಗೆರೆ ರಂಗಪ್ಪ, ದುಗ್ಗಪ್ಪ, ಹೆಚ್.ಡಿ.ಉದಯಪ್ರಕಾಶ, ಡಿ.ನಾಗರಾಜ, ಕೆ.ಸಿ.ನಿರಂಜನಮೂರ್ತಿ, ಬಿ.ಮಂಜುನಾಥ, ಕೆ.ಕಿರಣ, ಹನುಮಂತಪ್ಪ, ಅಂಜಿನಪ್ಪ, ಸಂತೋಷ, ಕೆ.ಮಂಜುನಾಥ, ಜಿಗಳಿ ಹಾಲೇಶ, ಸದಾನಂದ ಚಿಕ್ಕನಹಳ್ಳಿ, ಬಿ.ಮಂಜುನಾಥ ಇತರರು ಹಾಜರಿದ್ದರು.