ದಾವಣಗೆರೆ : ಸೋರಿಯಾಸಿಸ್ ಒಂದು ಸಮಗ್ರ ರೋಗವಾಗಿದ್ದು, ಇದು ಕೇವಲ ಚರ್ಮಕ್ಕಷ್ಟೇ ಸೀಮಿತವಾಗಿರುವುದಿಲ್ಲ.  ಬೇರೆ ಅಂಗಗಳಿಗೂ ಪರಿಣಾಮ ಬೀರುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಂ.ಸಿ.ರೂಪ ತಿಳಿಸಿದರು.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ  ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ  ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಲಾಗಿದ್ದ ” ಸಹರೋಗಗಳು(ಸೋರಿಯಾಸಿಸ್) – ಸರಣಿ ಕ್ರಿಯೆಯ ಬಗ್ಗೆ ಅರಿವು ಮೂಡಿಸುವುದು” ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೃದಯ ಸಂಬಂಧಿ ಖಾಯಿಲೆ, ಮಧುಮೇಹ ಮತ್ತು ಮಾನಸಿಕ ಖಾಯಿಲೆಗಳನ್ನು ಸೋರಿಯಾಸಿಸ್ ಪ್ರಚೋದಿಸಬಹುದು ಅಥವಾ ಈ ಸಹ ರೋಗಗಳು ಹತೋಟಿಯಲ್ಲಿ ಇಲ್ಲದಿದ್ದರೆ ಸೋರಿಯಾಸಿಸ್ ಅನ್ನು ಉಲ್ಬಣಿಸಬಹುದು. ಹಾಗಾಗಿ ಈ ಅಭಿಯಾನವು ಕೇವಲ ಚರ್ಮ ರೋಗಕ್ಕಷ್ಟೇ ಸೀಮಿತವಾಗದೇ ಶೀಘ್ರ ರೋಗ ನಿರ್ಣಯ ಮತ್ತು ಚಿಕಿತ್ಸೆಯನ್ನು ಈ ರೋಗಗಳಿಗೆ ನೀಡಿವು ಮೂಲಕ ರೋಗಿಗಳ ಯೋಗಕ್ಷೇಮ ಮತ್ತು ಸಮಗ್ರ ಆರೈಕೆ ಮಾಡಬಹುದಾಗಿದೆ ಎಂದರು.
ಸೋರಿಯಾಸಿಸ್ ಖಾಯಿಲೆಗೆ ಪ್ರಪಂಚದಾದ್ಯಂತ  ಸರಿ ಸುಮಾರು 2-3% ಪೀಡಿತ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಸೋರಿಯಾಸಿಸ್ ಪೀಡಿತರ ಪ್ರಮಾಣವು 0.44% ರಿಂದ 2.8% ರ ವರೆಗೆ ಇರುವುದಾಗಿ ತಿಳಿದು ಬಂದಿದೆ. ಸೋರಿಯಾಸಿಸ್ ಒಂದು ಸ್ವಯಂ ದೇಹದ ಮೇಲೆ ತನ್ನ ಪ್ರತಿರಕ್ಷಣಾ ವ್ಯವಸ್ಥೆಯು ದಾಳಿ ಮಾಡುವ ಸ್ಥಿತಿಯಾಗಿದ್ದು, ಅದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಗೆ ಅನೇಕ ಕಾರಣಗಳು ಇದ್ದು ಅದರಲ್ಲಿ ಪ್ರಮುಖವಾಗಿ ಆತ್ಮಘಾತಿ ಪ್ರಕ್ರಿಯೆ, ಕೆಲವು ಸೋಂಕುಗಳು ಕಾರಣಗಳಿದ್ದು, ಅದರಲ್ಲಿ ಅನುವಂಶಿಯತೆ ಕೂಡ ಒಂದು ಎಂದು ತಿಳಿಸಿದರು.
ವ್ಯಕ್ತಿಯ ಹುಟ್ಟಿನಿಂದ ಯಾವುದೇ ವಯಸ್ಸಿನಲ್ಲಿ ಹಾಗೂ ವೃದ್ದಾಪ್ಯದಲ್ಲೂ ಕಾಣಿಸಿಕೊಳ್ಳಬಹುದು. ಗಂಡು ಅಥವಾ ಹೆಣ್ಣು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಸೋರಿಯಾಸಿಸ್ ಸಾಂಕ್ರಾಮಿಕ ರೋಗವಾಗಿರುವುದಿಲ್ಲ. ಬಹಳಷ್ಟು ರೋಗಿಗಳಲ್ಲಿ ಚಳಿಗಾಲದಲ್ಲಿ ಉಲ್ಭಣಿಸುತ್ತದೆ. ಇದಕ್ಕೆ ಶಾಸ್ವತ ಪರಿಹಾರ ಚಿಕಿತ್ಸೆ ಇಲ್ಲದಿದ್ದರೂ, ರೋಗ ನಿಯಂತ್ರಣಕ್ಕೆ ಮತ್ತು ತೀವ್ರತೆ ತಡೆಗಟ್ಟಲು ಉತ್ತಮ ಚಿಕಿತ್ಸಾ ವಿಧಾನಗಳು ಲಭ್ಯವಿದೆ ಎಂದರು.
ಈ ಸ್ಥಿತಿಯನ್ನು ನೀವು ಒಬ್ಬರೇ ಎದುರಿಸಬೇಕಾಗಿಲ್ಲ. ಸೋರಿಯಾಸಿಸ್ ನೊಂದಿಗೆ ಬದುಕುತ್ತಿರುವ ಅನೇಕರು ನಿಮ್ಮೊಂದಿಗೆ ಇದ್ದಾರೆ. ತಜ್ಞ ವೈದ್ಯರ ಸಹಾಯವನ್ನು ಪಡೆಯಿರಿ. ಸೋರಿಯಾಸಿಸ್ ಬಗ್ಗೆ ಜಾಗೃತಿಗೆ ಹೆಜ್ಜೆ ಇಡೋಣ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಆರೋಗ್ಯ ಸಮಾಜಕ್ಕಾಗಿ ಶ್ರಮಿಸೋಣ, ಸೋರಿಯಾಸಿಸ್ ನಿಂದ ಬಳಲುವವರಿಗೆ ಸಹಾಯ, ತಿಳುವಳಿಕೆ, ಪ್ರೋತ್ಸಾಹ ನೀಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ, ಹಿರಿಯ ಮಕ್ಕಳ ತಜ್ಞರಾದ ಡಾ.ಬಾಣಾಪುರ ಮಠ, ಡಾ.ಸುರೇಶ ಬಾಬು, ಆಸ್ಪತ್ರೆ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಮೃತ್ಯುಂಜಯ, ಡಾ.ಮಧು ಪೂಜಾರ್, ಡಾ.ರೇವಪ್ಪ, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 
			     
			 
                                