ದಾವಣಗೆರೆ, ಜು. 18: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಡ್ಯಾಂ ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 4. 4 ಅಡಿ ನೀರು ಸಂಗ್ರಹವಾಗಿದೆ. ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 42,165 ಕ್ಯೂಸೆಕ್ ಇದೆ. ಡ್ಯಾಂನ ನೀರಿನ ಮಟ್ಟ 153 (ಗರಿಷ್ಠ ಮಟ್ಟ : 186) ಅಡಿಯಿದೆ. ಒಟ್ಟಾರೆ 36. 740 ಟಿಎಂಸಿ ನೀರು ಸಂಗ್ರಹವಾಗಿದೆ.
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂಗೆ ಕಳೆದ 24 ಗಂಟೆ ಅವಧಿಯಲ್ಲಿ ಸುಮಾರು 3 ಅಡಿಯಷ್ಟು ನೀರು ಹರಿದು ಬಂದಿದೆ. ಡ್ಯಾಂನ ಒಳಹರಿವು 69,226 ಕ್ಯೂಸೆಕ್ ಇದೆ. ಹೊರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ.
ಪ್ರಸ್ತುತ ಡ್ಯಾಂ ನೀರಿನ ಮಟ್ಟ 1787. 80 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1757. 30 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಸುಮಾರು 30 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ!
ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. ಸದ್ಯ 71 ಸಾವಿರ ಕ್ಯೂಸೆಕ್ ಒಳಹರಿವಿದ್ದು, ಒಳಹರಿವಿನಷ್ಟೆ ನೀರನ್ನು ಹೊರ ಬಿಡಲಾಗುತ್ತಿದೆ. ಅಂಜನಾಪುರ, ಅಂಬ್ಲಿಗೋಳ ಡ್ಯಾಂಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿವೆ. ನೀರು ಹೊರ ಹೋಗುತ್ತಿದೆ.
ಮಳೆ ವಿವರ
ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ 110 ಮಿಲಿ ಮೀಟರ್, ಯಡೂರು 124ಮಿ.ಮೀ., ಹುಲಿಕಲ್ 158 ಮಿ.ಮೀ., ಮಾಸ್ತಿಕಟ್ಟೆ 165 ಮಿ.ಮೀ., ಚಕ್ರಾ 210 ಮಿ.ಮೀ., ಸಾವೇಹಕ್ಲು 106 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ 44.80 ಮಿ.ಮೀ., ಭದ್ರಾವತಿ 23. 70 ಮಿ.ಮೀ., ತೀರ್ಥಹಳ್ಳಿ 82. 90 ಮಿ.ಮೀ., ಸಾಗರ 91. 30 ಮಿ.ಮೀ., ಶಿಕಾರಿಪುರ 43 ಮಿ.ಮೀ., ಸೊರಬ 68. 90 ಮಿ.ಮೀ. ಹಾಗೂ ಹೊಸನಗರದಲ್ಲಿ108 ಮಿ.ಮೀ. ಮಳೆಯಾಗಿದೆ.