ದಾವಣಗೆರೆ: ರಕ್ಷಾ ಬಂಧನ ಸೋದರ-ಸೋದರಿಯರ ಪವಿತ್ರ ಬಂಧನವನ್ನು ಸಾರುವ ಹಬ್ಬವಾಗಿದೆ. ಸಹೋದರಿಯರು ಸಹೋದರರಿಗೆ ವಿಜಯದ ವೀರ ತಿಲಕವನ್ನು ಹಚ್ಚಿ ರಕ್ಷಾ ಬಂಧನವನ್ನು ಕಟ್ಟುತ್ತಾರೆ ಎಂದು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ ಅಭಿಪ್ರಾಯಪಟ್ಟರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶ್ರೀಸತ್ಯ ಸಾಯಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಾವಣ ಬಂತೆಂದರೆ ಎಲ್ಲರ ಮನೆ ಮನಗಳಲ್ಲಿ ಸಡಗರ ಸಂಭ್ರಮ ಮೂಡುತ್ತದೆ. ಅಕ್ಕ-ತಂಗಿಯರು ತಮ್ಮ ಸಹೋದರರಿಗೆ ಯಾವ ತೊಂದರೆಯೂ, ಅಪತ್ತು ಬಾರದಿರಲಿ, ಅವರು ಸುಖವಾಗಿರಲೆಂದು ಹಾರೈಸಿ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಇತಿಹಾಸ ಪುರಾಣ ಕಾಲದಿಂದಲೂ ಆಚರಣೆಯಲ್ಲಿರುವ ರಕ್ಷಾ ಬಂಧನದ ಮಹತ್ವದ ಪ್ರಶಂಗಗಳನ್ನು ಮಕ್ಕಳಿಗೆ ವಿವರಿಸಿದರು.
ಇದು ಒಂದು ಹೃದಯ ಸ್ಪರ್ಶಿಯಾದ ಆಚರಣೆಯಾಗಿದೆ. ರಾಖಿ ಎಂದರೆ ಕಂಕಣ ಬದ್ಧರಾಗುವುದು. ಇದೊಂದು ಮಧುರವಾದ ಬಾಂಧವ್ಯ. ಈ ಸಹೋದರ-ಸಹೋದರಿ ಸಂಬಂಧ ಮುಂದುವರೆಯಲಿ, ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ರಾಖಿ ಹಬ್ಬ ಬಂತೆಂದರೆ ಸಾಕು ಅಣ್ಣ-ತಂಗಿಯರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ. ಅಣ್ಣ-ತಂಗಿಯ ಬಾಂಧವ್ಯ ಎಂದರೆ ಅದು ಬೆಲೆ ಕಟ್ಟಲಾಗದ ಸಂಬಂಧ. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ ಎಂದು ರಾಖಿ ಹಬ್ಬದ ಮಹತ್ವವನ್ನು ಮಕ್ಕಳಿಗೆ ವಿವರಿಸಿದರು.
Read also : ಗಾಂಜಾ ಸೇವೆನೆ ಇಬ್ಬರ ವಿರುದ್ದ ಪ್ರಕರಣ ದಾಖಲು
ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಮಾತನಾಡಿ, ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ಹಬ್ಬದ ಬಳಿಕ ಬರುವ ಮತ್ತೊಂದು ಪವಿತ್ರ ಹಬ್ಬ ಈ ರಕ್ಷಾ ಬಂಧನ. ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಾದ ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವ ಮೂಲಕ ಸಹೋದರ-ಸಹೋದರಿಯರಾದರು.
ಕಾರ್ಯಕ್ರಮದಲ್ಲಿ ಶಾಲಾ ಸಹಶಿಕ್ಷಕಿ ಬಿ.ಶ್ರೀದೇವಿ ರಕ್ಷಾ ಬಂಧನದ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಗೀತ ಶಿಕ್ಷಕಿ ವಿದ್ಯಾ ಹೆಗಡೆ ರಕ್ಷಾ ಬಂಧನ ಸಾರುವ ಗೀತೆಗಳನ್ನು ಹಾಡಿದರು. ಸಹಶಿಕ್ಷಕರಾದ ಎನ್.ಎ.ಸಿ.ವಿಯಯ್, ಎಂ.ಎಂ.ಪಟೇಲ್, ಹೇಮಲತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾ ಬಂಧನ ಹಬ್ಬದ ಸಂಕೇತವಾಗಿದೆ.-ಎ.ಆರ್.ಉಷಾರಂಗನಾಥ್, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ.