ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಹೆಸರಿನ ರಾಮನಮಲಿಯವರು ನಿವೃತ್ತ ಲೋಕೋಪಯೋಗಿ ಇಲಾಖೆ ನೌಕರ,ಅವರ ಹೆಸರಿನ ವೈಶಿಷ್ಟ್ಯದಂತೆಯೇ ಅವರ ಬದುಕು ಕೂಡ….
ಕಾಮಗಾರಿ ,ಬಿಲ್ಲುಗಳು ಮುಂತಾದ ಗಿಜಿಗುಡುವ ಕೆಲಸಗಳಲ್ಲಿ ಸದಾ ಬಿಸಿಯಾಗಿರುವ ಲೋಕೋಪಯೋಗಿ ಇಲಾಖೆಗೂ ಮತ್ತು ಸಾಹಿತ್ಯ ಕ್ಷೇತ್ರಕ್ಕೂ ನಂಟು ಕಡಿಮೆ,ಇಂತಹ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಸಾಹಿತ್ಯದ ಸದಭಿರುಚಿ ಹಾಗೂ ಸೂಕ್ಷ್ಮ ಸಂವೇದನೆಗಳನ್ನು ಹೊಂದಿ ಕಳೆದ ೧೬ ವರ್ಷಗಳ ಹಿಂದೆ ನಿವೃತ್ತರಾಗಿ ಇಂದಿಗೂ ಸಮಾಜಮುಖಿಯಾಗಿ ಚಿಂತನೆ ಮಾಡುವ ರಾಮನಮಲಿ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದು ತಮ್ಮ ಕರ್ಮಭೂಮಿಯಾಗಿಸಿಕೊಂಡ ಹರಪನಹಳ್ಳಿಯಲ್ಲಿ ಸಾಹಿತ್ಯ ಸಂಘಟನೆಯಲ್ಲಿ ಮುಂಚೂಣಿಯ ಹೆಸರು ರಾಮನವಲಿಯವರದು.
ಋತುಮಾನದ ಕವಿ
ಸಂಡೂರಿನ ಸಮೃದ್ಧವಾದ ಬೆಟ್ಟಗಳ ಸಾಲಿನಲ್ಲಿರುವ ರಾಮನ ಮಲೆ ಎಂದು ಕರೆಯುವ ಗುಡ್ಡಗಳಲ್ಲಿ ರಾಮದೇವರ ಗುಡಿ ಮತ್ತು ಮಸೀದಿ ಇದೆ ಅಲ್ಲಿನ ದೇವರಿಗೆ ಹಿಂದುಗಳು ಮತ್ತು ಮುಸ್ಲಿಮರು ಸೇರಿ ಮೊಹರಂ ಹಬ್ಬದಲ್ಲಿ ಅಲಾವಿ ಕುಣಿಯುತ್ತಾರೆ, ಅಲ್ಲಿನ ರಾಮನಮಲಿ ದೇವರಿಗೆ ನಡೆದುಕೊಳ್ಳುವ ಮುಸ್ಲಿಮರು ತಮ್ಮ ಮಕ್ಕಳಿಗೆ ರಾಮನಮಲಿ ಎಂದು ಹೆಸರಿಡುವುದುಂಟು ಎಂಬ ಬಗ್ಗೆ ಕೇಳಿದ್ದೇನೆ ,ಅಂತಹ ಹೆಸರಿನ ಭಾವೈಕ್ಯದ ಪ್ರತೀಕವೇ ಡಿ ರಾಮನಮಲಿಯವರು ಮಧ್ಯಮ ಬಡವರ್ಗದ ಕುಟುಂಬಕ್ಕೆ ಸೇರಿದವರು ,ಹರಪನಹಳ್ಳಿಯ ಭಾಗದಲ್ಲಿ ಋತುಮಾನದ ಕವಿ ಎಂದೇ ಸಾಹಿತ್ಯ ವಲಯದಲ್ಲಿ ಗುರುತಿಸುತ್ತಾರೆ.
ಸದಾ ಸಮಾಜ ಜೀವಿ
ಸಮುದಾಯ ಸಾಂಸ್ಕೃತಿಕ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಸಂಘಟನೆಗಳಲ್ಲಿ ಸಕ್ರಿಯ ರಾಗಿದ್ದು ತಮ್ಮನ್ನು ತಾವು ಸಾಹಿತ್ಯ ,ಸಂಘಟನೆಗಳಿಗೆ ಸಮರ್ಪಿಸಿಕೊಂಡು ಸಮಾನ ಮನಸ್ಕ ಸಂಗಾತಿಗಳ ಜೊತೆ ಸದಾ ಸಮಾಜ ಜೀವಿಯಾಗಿ ಬದುಕುತ್ತಿರುವ ರಾಮನಮಲಿಯವರ ಜೊತೆ ಹರಪನಹಳ್ಳಿಯಲ್ಲಿ ಅನೇಕ ಪ್ರಗತಿಪರ ,ಜೀವ ಪರ ಜೊತೆಗಾರರ ದಂಡೆ ಇತ್ತು ,ಅವರ ಸಂಗಾತಿಗಳಲ್ಲಿ ಬಹುತೇಕ ಹಿರಿಯರು ಇಂದು ನಮ್ಮೊಡನೆ ಇಲ್ಲ .
ಸೂಕ್ಷ್ಮ ಸಂವೇದನೆಯ ಪ್ರತಿಭಾವಂತರು
ಸಮುದಾಯ ಸಾಂಸ್ಕೃತಿಕ ಸಂಘಟನೆಯಲ್ಲಿ ರಂಗ ತರಬೇತಿ ಶಿಬಿರಗಳು ,ಬೀದಿ ನಾಟಕಗಳು ಮುಂತಾದ ಚಟುವಟಿಕೆಗಳಲ್ಲಿ ಸದಾ ಮುಂದೆ ಇರುತ್ತಿದ್ದ ಪಂಚಪ್ಪ ಮೇಷ್ಟ್ರು ,ಎಸಿ ಚಿಕ್ಕಮಠ ,ಡಿ ಬಿ ಬಡಿಗೇರ್ ಸರ್ ,ಎಎಂ ನಾಗಭೂಷಣಯ್ಯ ,ಇಸ್ಮಾಯಿಲ್ ಎಲಿಗಾರ ಸರ್ ,ಪ್ರೊಫೆಸರ್ ಎಂ ತಿಮ್ಮಪ್ಪ ,ಬಸವಂತಪ್ಪ ಜಿ ,ಲಕ್ಷ್ಮಣಗಂಟಿ ,ಹೆಚ್ ಎಂ ಗೌಸ್,ಇನ್ನು ಹಲವು ಹಿರಿ ಕಿರಿಯ ಗೆಳೆಯರೊಂದಿಗೆ ಕ್ರಿಯಾಶೀಲವಾಗಿದ್ದು ಸಾಂಸ್ಕೃತಿಕ ಹಾಗೂ ಸಾಹಿತ್ತಿಕ ಅಭಿರುಚಿಯ ರಾಮನಮಲಿ ಅವರು ಸೂಕ್ಷ್ಮ ಸಂವೇದನೆಯ ಪ್ರತಿಭಾವಂತರು.
ಋತುಮಾನ ಅವರ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ೧೯೯೮ರಲ್ಲಿ ಅವರ ಹುಟ್ಟೂರಾದ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಬಿಡುಗಡೆ ಮಾಡಿದ್ದು ,ಒಂದು ರೀತಿಯಲ್ಲಿ ಊರ ಹಬ್ಬದಂತೆ ಇಡೀ ಊರಿನ ಜನರು ಸಡಗರದಿಂದ ಭಾಗವಹಿಸಿದ್ದು ,ಅವತ್ತಿನ ಸಿಹಿ ಅಡಿಗೆ ಎಂದರೆ ಅಪ್ಪಟ ಗ್ರಾಮೀಣ ಸಿಹಿ “ಮಾಲ್ದಿ “ನಮಗೆಲ್ಲ ಉಣ ಬಡಿಸಿದ್ದು ಅಂದಿನ ಕಾರ್ಯಕ್ರಮಕ್ಕೆ ನದಾಫ್ ಹಿರೇಹಾಳ್ ಇಬ್ರಾಹಿಂಸಾಬ್ ,ಕುಂ ವೀರಭದ್ರಪ್ಪ ಮುಂತಾದ ಸಾಹಿತಿಗಳು ಹಾಗೂ ವಿಚಾರವಾದಿಗಳು ಉಪಸ್ಥಿತರಿದ್ದುದ್ದಕ್ಕೆ ನಾವು ಗೆಳೆಯರೆಲ್ಲರೂ ಸಾಕ್ಷಿಯಾಗಿದ್ದು ನೆನಪಾದಾಗಲೆಲ್ಲ ಇತ್ತೀಚಿಗೆ ಮನುಷ್ಯ ಸಂಬಂಧಗಳು ಜಡಗೊಂಡು,ಬದುಕು ಕ್ಲೀಷೆಯಾಗಿದೆ ಎಂದೆನಿಸಿದೆ.
ರಾಮನಮಲಿಯವರ “ಋತುಮಾನ” ಕವನ ಸಂಕಲನದಲ್ಲಿನ ಕವಿತೆಗಳು ಪ್ರಸ್ತುತ ದಿನಮಾನಗಳಲ್ಲಿಯೂ ಕೂಡ ಸಂವೇದನಾಶೀಲ ಮನುಷ್ಯರನ್ನು ಮನುಷ್ಯತ್ವಕ್ಕಾಗಿ ಕಾಡದೇ ಬಿಡುವುದಿಲ್ಲ ,ಋತುಮಾನ ಕವನ ಸಂಕಲನದಲ್ಲಿನ ಅವರ ಒಂದು ಕವನವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹೇ ರಾಮ
ಹೇ ರಾಮ ರಘುಕುಲ ಸೋಮ
ನೀ ಎತ್ತ ಹೋದೆ ಘನ ಶಾಮ
ಪಿತೃವಾಕ್ಯ ಪರಿಪಾಲನೆಗೆ
ನೀ ತೆಪ್ಪನೆ ಹೋದೆ ವನವಾಸಕೆ
ನೀನು ಅಯೋಧ್ಯೆಯಲ್ಲಿ ಜನಿಸಿದ್ದು
ಭಾರತದಲ್ಲಿ ರಾಮಾಯಣ ಆಗಿದ್ದು
ಎಲ್ಲವೂ ನಿತ್ಯ ಸತ್ಯ ಇರಬಹುದು
ನೀ ಕಾಡಿಗೆ ಹೋಗುವಂದು ಪ್ರಜೆಗಳ
ಕಣ್ಣೀರ್ ಕೋಡಿ ಹರಿಸಿದ್ದಿ
ಅವರ ಹೃದಯದಲ್ಲಿ ನೆಲೆಸಿದ್ಧಿ
ನಿನ್ನ ಹೆಸರಲ್ಲಿ ಇಂದು
ರಕ್ತದ ಕೋಡಿ ಹರಿದಿದೆ
ಭಗ್ನವಾಗಿವೆ ಹಿಂದೂ ಮುಸ್ಲಿಂ ಭಾವನೆಗಳು
ರಾಮರಹಿಮರ ಹೃದಯ ಬೆಸೆಯಲು
ರಾವಣ ರಾಜಕಾರಣಿಗಳ ಸದೆಬಡಿಯಲು
ನೀ ಮತ್ತೊಮ್ಮೆ ಹುಟ್ಟಿ ಬಾ, ಭಾವೈಕ್ಯದ ಮಂದಿರದಲ್ಲಿ
ಇಂತಹ ಕವಿತೆಗಳನ್ನ ಬರೆಯುವ ಮೂಲಕ ಅವರ ಹೆಸರಿನಂತಿಯೇ ಭಾವೈಕ್ಯ ಮನಸ್ಸಿರುವುದು ಸ್ಪಷ್ಟವಾಗುತ್ತದೆ.
ವಿದ್ಯಾರ್ಥಿ ಸಂಘಟನೆಗಳಾದ ಎಸ್ ಎಫ್ ಐ ,ಎ ಐ ಎಸ್ ಎಫ್ ಸಮುದಾಯ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕ್ರಮಗಳಿಗೆ ಚೆಂದಾ ಎತ್ತುವಾಗ ಸಂಘಟಕರ ಪಟ್ಟಿಯಲ್ಲಿ ಮೊದಲ ಹೆಸರು ಕಾಣಸಿಗುತ್ತಿದ್ದದ್ದೇ ರಾಮನವಲಿ ಅವರದು, ಸಂಘಟನಾ ಗುಂಪಿನಲ್ಲಿ ಇದ್ದವರ ಪೈಕಿ ಒಂದೇ ಹೀರೋ ಹೋಂಡಾ ಬೈಕ್ ರಾಮನವಲಿಯವರದು ಅದು ಸಂಗಾತಿಗಳೆಲ್ಲರ ಸಾಮೂಹಿಕ ಬೈಕಿನಂತೆಯೇ ಇತ್ತು ,ನನ್ನಂತ ಕೆಲವು ಗೆಳೆಯರ ಬೈಕ್ ಓಡಿಸುವ ತರಬೇತಿಯು ಅವರ ಹೀರೋ ಹೋಂಡಾ ಮೋಟರ್ ಬೈಕಿನಲ್ಲಿಯೇ, ಭೌತಿಕ ವಸ್ತುಗಳನ್ನು ಅಷ್ಟಾಗಿ ಪ್ರೀತಿಸದ ರಾಮನವಲಿಯವರು ತಮ್ಮ ವಸ್ತುಗಳನ್ನ ಇನ್ನೊಬ್ಬರಿಗೆ ಕೊಡುವುದರಲ್ಲಿ ತುಂಬಾ ಧಾರಾಳ ಗುಣ.
ರಾಮನಮಲಿ ಅವರು ನಿವೃತ್ತರಾದ ನಂತರ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ‘ಭಾಗ’ ಕಥಾಸಂಕಲನ ,ಮೊಬೈಲ್ ಎಂಬ ಮೋಹಿನಿ ಪ್ರಬಂಧ ಸಂಕಲನ ,ಕಾಳವ್ವನ ಕೋಳಿ ಕಥಾ ಸಂಕಲನದ ಜೊತೆಗೆ ಇನ್ನು ಹಲವಾರು ಕೃತಿಗಳನ್ನು ರಚಿಸಿ ನಿರಂತರವಾದ ಓದು ಹಾಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ,ಹಿರಿಯರೊಬ್ಬರು ಹೇಳಿದಂತೆ ನೀತಿ ಪಾಠಕ್ಕಾಗಿ ಕಥೆ ಬರೆಯಲಾಗದು ಆದರೆ ಕಥೆ ಒಂದರಲ್ಲಿ ಜೀವನ ಮೌಲ್ಯಗಳು ಸಹಜ ಸಂದೇಶ ಒಂದಿದ್ದರೆ ಅದನ್ನು ಹತ್ತಿಕ್ಕಲು ಬಾರದು ಎನ್ನುವ ಮಾತಿನಂತೆ ರಾಮನಮಲಿಯವರ ಕಥೆಗಳು ಜನಸಾಮಾನ್ಯರ ಬದುಕಿನಲ್ಲಿ ನಡೆಯುವ ಸಾಮಾನ್ಯ ಮತ್ತು ಸರಳ ಸಂಗತಿಗಳು ಅದೇ ಅವರ ಕಥೆಗಳ ವೈಶಿಷ್ಟ್ಯಗಳು.
ಕವಿತೆ ವಿಚಿತ್ರ ಶಕ್ತಿಯಾಗಿ ಉನ್ಮಾದವಾಗಿ ನೆಳಲು ಬೆಳಕಿನ ಆಟವಾಗಿ ,ಮನುಷ್ಯನ ಸಂವೇದನೆಗಳನ್ನು ಕೆಣಕುತ್ತಲೇ ಬಂದಿದೆ ಕವಿತೆಯನ್ನು ಓದಿದ ನಂತರವೇ ಮನುಷ್ಯ ಕವಿಯಾಗುತ್ತಾನೆ ಅಂತೇಯೇ ರಾಮನಮಲಿಯವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಅಭಿರುಚಿ ಹೊಂದಿ ಸಮಾಜದಲ್ಲಿ ಸದಾ ಜೀವಂತಿಕೆ ಪಡೆದವರು.
ರಾಮನಮಲಿಯವರ ಹುಟ್ಟಿದ ಊರು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ನೆಲವೇ ಅಂತದ್ದು, ಸಾಹಿತ್ಯಕ, ಸಾಂಸ್ಕೃತಿಕ ,ಸಂಘಟನೆಗಳ, ಜೀವಪರ ಆಲೋಚನೆಗಳನ್ನು ಹೊಂದಿದ ಅನೇಕ ಸಾಹಿತಿಗಳಿಗೆ ಆ ಊರು ಜನ್ಮ ನೀಡಿದೆ.
ಬದುಕು ಅನೇಕ ಸಂಕಟ ತಲ್ಲಣಗಳಿಂದ ತಳಮಳಿಸುತ್ತಾ ಇರುತ್ತೆ ಏನು ಮಾಡಿದರೆ ಸರಿ ಏನು ಮಾಡಿದರೆ ತಪ್ಪು ಅಂತ ತಿಳಿಯುವುದರಲ್ಲಿಯೇ ವಯಸ್ಸು ಕರಗಿ ಹೋಗಿರುತ್ತೆ ಅಂತಹದ್ದರಲ್ಲಿ ೭೦ಕ್ಕೂ ಹೆಚ್ಚು ವಸಂತಗಳನ್ನು ದಾಟಿ ಈಗಲೂ ಯುವಕರು ಹಾಗೂ ಸಂಗಾತಿಗಳಿಗೆ ಅಚ್ಚುಮೆಚ್ಚಾಗಿರುವ ರಾಮನಮಲಿಯವರು ಹೊಸ ಪೀಳಿಗೆಗೆ ಜೀವಸೆಲೆಯ ಸ್ಪೂರ್ತಿಯಾಗಿದ್ದಾರೆ ಎನ್ನಬಹುದು.
ಹಿರಿಯರಾದ ರಾಮನಮಲಿಯವರು ಸೃಜನಶೀಲ ಬರವಣಿಗೆಯ ಮೂಲಕ ಹೊಸತನವನ್ನು ನೀಡುತ್ತಾ, ತೆರೆದ ಮನಸ್ಸಿನ ಪ್ರಾಮಾಣಿಕತೆಯೊಂದಿಗೆ ಯಾವುದನ್ನು ಬರೆಯಲು ಹಿಂಜರಿಯದೆ ಯಾರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಎಗ್ಗಿಲ್ಲದೆ,ಪೂರ್ವಗ್ರಹವಿಲ್ಲದೆ ಸೃಜನಶೀಲ ಸಾಹಿತ್ಯ ಇನ್ನೂ ಹೆಚ್ಚು ಹೊರಹೊಮ್ಮಿ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಹೀಗೆಯೇ ಮುಂದುವರೆದು,ಪ್ರಸ್ತುತ ಸಂವೇದನೆ ಕಳೆದುಕೊಳ್ಳುತ್ತಿರುವ ಜಗತ್ತಿನಲ್ಲಿ ಭವಿಷ್ಯದ ತಲೆಮಾರುಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಬಸವರಾಜ ಸಂಗಪ್ಪನವರ್ ಹರಪನಹಳ್ಳಿ