ದಾವಣಗೆರೆ : ರಾಣಿ ಅಬ್ಬಕ್ಕನ ದೇಶಪ್ರೇಮ, ದಿಟ್ಟತನದ ಹೋರಾಟ, ತ್ಯಾಗದ ಮನೋಭಾವ ಎಂದೆಂದಿಗೂ ನಮಗೆಲ್ಲರಿಗೂ ಪ್ರೇರಣೆ ಎಂದು ಎನ್ ರವಿಕುಮಾರ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ದಕ್ಷಿಣ ಪ್ರಾಂತ ವತಿಯಿಂದ ದಾವಣಗೆರೆಯ ಅಭಿನವ ಶ್ರೀಮದ್ ರೇಣುಕಾ ಮಂದಿರದಲ್ಲಿ ಆಯೋಜಿಸಿದ್ದ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರ ರಾಣಿ ಅಬ್ಬಕ್ಕ ಅವರ 500 ನೇ ಜಯಂತ್ಯೋತ್ಸವ ಅಂಗವಾಗಿ ನಡೆದ ರಥಯಾತ್ರೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ಅವರು ದೇಶ ಕಂಡ ಬಹುದೊಡ್ಡ ದಿಟ್ಟ ಹೋರಾಟಗಾರ್ತಿ, ಅಂದಿನ ರಾಜಧಾನಿ ಉಳ್ಳಾಲದ ಮೇಲೆ ಪೋರ್ಚುಗಿಸರು ದಾಳಿ ಮಾಡಿದಾಗ ಆ ವಿದೇಶಿಯ ಸೈನಿಕರನ್ನು ಒಬ್ಬ ಧೀರ ಮಹಿಳೆಯಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿ ಯುದ್ಧವನ್ನು ಗೆದ್ದು ತನ್ನ ರಾಜ್ಯದ ಜನರನ್ನು ರಕ್ಷಿಸಿದ್ದು ಇತಿಹಾಸ. ರಾಣಿ ಅಬ್ಬಕ್ಕನ ದೇಶಪ್ರೇಮ, ದಿಟ್ಟತನದ ಹೋರಾಟ, ಅವರ ತ್ಯಾಗದ ಮನೋಭಾವ ಎಂದೆಂದಿಗೂ ನಮಗೆಲ್ಲರಿಗೂ ಪ್ರೇರಣೆ. ಇಂದಿನ ನಮ್ಮ ಯುವ ಪೀಳಿಗೆ ಅವರ ಆದರ್ಶ, ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ದೇಶವನ್ನು ಸುಭದ್ರವಾಗಿರಲು ಸಾಧ್ಯ. ನಮ್ಮ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಣಿ ಅಬ್ಬಕ್ಕ ಅವರ ಬಗ್ಗೆ ಇನ್ನೂ ಹೆಚ್ಚಿನ ಜನಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಮತ್ತು ರಥಯಾತ್ರೆ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
Read also : ಒಳಮೀಸಲಾತಿ ಜಾರಿ : ಸೆ.13 ರಂದು ವಿಜಯೋತ್ಸವ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ಹಾಗೂ ಮಾರ್ಗದರ್ಶಕರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ , ಖ್ಯಾತ ವೈದ್ಯರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ವಿಜಯಲಕ್ಷ್ಮಿ ದೇಶಮಾನೆ , ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಕಮಲೇಶ್ ಅವರು ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.