ದಾವಣಗೆರೆ : ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ, ಅಪಹರಿಸಿ, ಬಲವಂತವಾಗಿ ವಿವಾಹವಾಗಿ ಅತ್ಯಾಚಾರ ಎಸಗಿದ್ದ ಆರೋಪಿಗೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ-1 ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಡಿಸೆಂಬರ್ 18, 2022 ರಂದು ದಾವಣಗೆರೆಯ ವಿದ್ಯಾರ್ಥಿ ಭವನ ಬಸ್ ನಿಲ್ದಾಣದಿಂದ 16 ವರ್ಷದ ಅಪ್ರಾಪ್ತ ಬಾಲಕಿ ಕಾಣೆಯಾಗಿದ್ದ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದರು.
ತನಿಖೆ ನಡೆಸಿದ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ. ಆರ್. ಚೌಬೆ, ಆರೋಪಿ ಅರುಣ ಎಂ. ಎಂಬಾತ ಬಾಲಕಿಯನ್ನು ಬೆಂಗಳೂರು ಮೆಜೆಸ್ಟಿಕ್ ಹಾಗೂ ಅಲ್ಲಿಂದ ಟೆಕಲ್ ಎಂಬ ಊರಿಗೆ ಕರೆದೊಯ್ದಿರುವುದನ್ನು ಪತ್ತೆ ಹಚ್ಚಿದ್ದರು.
ಆರೋಪಿ ಅರುಣ ಬಾಲಕಿಗೆ ಪ್ರೀತಿಯ ಆಮಿಷ ಒಡ್ಡಿ, ಮನೆಯವರಿಗೆ ತಿಳಿಸದೆ ಬರುವಂತೆ ಪುಸಲಾಯಿಸಿದ್ದನು. ಟೆಕಲ್ ಗ್ರಾಮದ ಗಣೇಶ ದೇವಸ್ಥಾನದಲ್ಲಿ ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಿದ್ದನು. ನಂತರ ಎ2 ಆರೋಪಿ ಚಂದ್ರಶೇಖರ್ ಸಹಾಯದಿಂದ ಭೈರತನಹಳ್ಳಿಯಲ್ಲಿ ರೂಮ್ ಪಡೆದು, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದನು.
Read also : ನಗರದ ವಿವಿಧ ಪ್ರದೇಶಗಳಲ್ಲಿ ಜ.24 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು, ಆರೋಪಿ ಅರುಣ ಎಂ.(22 ) ಮೇಲಿನ ಪೋಕ್ಸೋ ಐಪಿಸಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಹೊರಿಸಲಾದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ. 40,000 ರೂ ದಂಡ ವಿಧಿಸಿ ತೀರ್ಪು ನೀಡಿದರು.
ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಧೀಶರು ಸೂಚಿಸಿದರು.
