ಹಾಸ್ಯ ಇನ್ನೊಬ್ಬರ ಭಾವನೆಗಳು ಹಾಗೂ ಮನಸ್ಸು ಅರಳಿಸಬೇಕೆ ಹೊರತು ಇನ್ನೊಬ್ಬರ ಮನಸ್ಸು ಕೆರಳುವಂತೆ ಇರಬಾರದು,ಕೆಲವೊಂದು ಹಾಸ್ಯ ಅಶ್ಲೀಲ ಭಾಷೆ ಹಾಗೂ ಸಂಭಾಷಣೆಗಳನ್ನು ಒಳಗೊಂಡಿರುತ್ತದೆ ಇಂತಹ ಸಾಹಿತ್ಯದಿಂದ ಸಮಾಜದ ಅಂಕುಡೊಂಕು,ಒರೆಕೋರೆ ತಿದ್ದುವುದಾಗಲಿ ಅಥವಾ ಅಂತಹ ಸಾಹಿತ್ಯದಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗಲಾರದು.
ಸಾಹಿತ್ಯ ಮರೆಯಾಗಿಲ್ಲ
ಕನ್ನಡ ಸಾಹಿತ್ಯಕ್ಕೆ ಬೀಚಿಯವರ ಕೊಡುಗೆ ಅನನ್ಯ ಅದರಲ್ಲೂ ವಿಶೇಷವಾಗಿ ಹಾಸ್ಯ ಸಾಹಿತ್ಯ ಪ್ರಕಾರದಲ್ಲಿ ಬೀಚಿಯವರ ಕೃತಿಗಳು ಜನಮಾನಸದಲ್ಲಿ ಸದಾಕಾಲ ಉಳಿಯುವಂತಹವು, ಬೀಚಿಯವರು ನಮ್ಮೊಂದಿಗೆ ಇಂದು ಇಲ್ಲದಿದ್ದರೂ ಅವರ ಸಾಹಿತ್ಯ ಮರೆಯಾಗಿಲ್ಲ ಆ ಮೂಲಕ ಅವರ ನೆನಪು ಸದಾ ಹಸಿರಾಗಿದೆ.
ಹರಪನಹಳ್ಳಿಯಲ್ಲಿ ಹುಟ್ಟಿದ ಭೀಮಸೇನರಾವ್ ಬಳ್ಳಾರಿಯ ಬೀಚಿ ಎಂದೇ ಪ್ರಸಿದ್ಧರಾಗಿದ್ದಾರೆ ಬೀಚಿಯವರು ಹಾಸ್ಯ ಸಾಹಿತ್ಯ ಬೆಳವಣಿಗೆಗೆ ತನ್ನದೇ ಆದಂತಹ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ,
ಮಹಾನ್ ಮಾನವತಾವಾದಿ
ಬೀಚಿಯವರನ್ನು ಹಾಸ್ಯ ಸಾಹಿತಿ ಎಂದಷ್ಟೇ ಹೇಳಿದರೆ ಸಾಲದು ಅವರೊಬ್ಬ ಮಹಾನ್ ಮಾನವತಾವಾದಿ ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ,ನೋವು,,ಕಷ್ಟ-ನಷ್ಟಗಳ ನಡುವೆ ಮಾನವೀಯ ಮೌಲ್ಯಗಳನ್ನ ಹಾಗೂ ಸಮಾಜದಲ್ಲಿರುವ ಗೊಡ್ಡು ಸಂಪ್ರದಾಯಗಳು ,ಅಂದ ಶ್ರದ್ದೆ ಹಾಗೂ ಶೋಷಣೆಗಳನ್ನ ತುಂಬಾ ವಿಡಂಬನಾತ್ಮಕವಾಗಿ ಬರೆದು ಮಾನವೀಯ ಮುಖ ತೋರಿಸಿದವರು ಬೀಚಿಯವರು.
ತಮ್ಮ ಹಾಸ್ಯ ಸಾಹಿತ್ಯದ ಮೂಲಕ ಕರ್ನಾಟಕದ ಉದ್ದಗಲಕ್ಕೂ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ರಾಯಸಂ ಭೀಮಸೇನರಾವ್ ಅವರು ನಮ್ಮನ್ನು ಅಗಲಿ 44 ವರ್ಷಗಳಾಗಿವೆ, ಆದರೆ ಅವರ ಸಾಹಿತ್ಯ ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ.
1913 ಏಪ್ರಿಲ್ 23ರಂದು ಹರಪನಹಳ್ಳಿಯಲ್ಲಿ ಜನಿಸಿದ ರಾಯಸಂ ಭೀಮಸೇನ್ ರಾವ್ ರವರು ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಗಳಾಗಿ ಸಾಹಿತಿಗಳಾಗಿ ಅದರಲ್ಲಿಯೂ ಹಾಸ್ಯ ಸಾಹಿತಿಯಾಗಿ ಕನ್ನಡದ ಜನಮನದಲ್ಲಿ ಇನ್ನೂ ಅಚ್ಚಳಿಯದೇ ನಿಂತಿರುವ ಹಾಸ್ಯ ಸಾಹಿತಿ ಬೀಚಿಯವರು.
.
ಬೀಚಿ ಯವರು ಸರ್ಕಾರಿ ನೌಕರರಾಗಿ ಇದ್ದುಕೊಂಡು ಸರ್ಕಾರವನ್ನು ವ್ಯಂಗ್ಯ ಹಾಗೂ ಮೊನಚು ಮಾತುಗಳಿಂದ ಲೇವಡಿ ಮಾಡುವುದರ ಮುಖೇನ ಅರಿತವಾದ ಲೇಖನಿಯಿಂದ ಬರೆದ ವ್ಯಂಗ್ಯ ಬರಹಗಳಿಂದ ಸಮಾಜದ ರಾಜಕೀಯದ ಅನೇಕ ದೋಷ ಹಾಗೂ ದುರ್ಗುಣಗಳನ್ನು ಜನರು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುವಂತೆ ಮಾಡಿದ್ದಾರೆ,ಅವರಿಗೆ ವೈಯುಕ್ತಿಕವಾಗಿ ಎಂತಹ ಕಷ್ಟ ಬಂದರೂ ಕೂಡ ಬೇರೆಯವರ ಮುಂದೆ ತಲೆತಗ್ಗಿಸಿ ದೈನೇಶಿ ಪರಿಸ್ಥಿತಿ ತಂದುಕೊಂಡ ವ್ಯಕ್ತಿಯಲ್ಲ.
ನಗುವುದು ನಗುವು ಸಹಜ ಧರ್ಮ,ನಗಿಸುವುದು ಪರಧರ್ಮ, ನಗುವ ಕೇಳುತಾ ನಗುವುದೇ ಧರ್ಮ, ನಗುವ ನಗಿಸುವ ,ನಗಿಸಿ ನಗುತ ಬಾಳುವ ವರವೆಮಿಗೆ ನೀನು ಬೇಡಿಕೊಳ್ಳು ಮಂಕುತಿಮ್ಮ, ನಗುವ ನಗಿಸುವ ,ನಗಿಸಿ ನಗುತ ಬಾಳುವ ವರವ ಪಡೆದುಕೊಂಡು ಬಂದವರು ಬೀಚಿಯವರು, ಜೀವನದಲ್ಲಿ ಕಷ್ಟಕಾರ್ಪಣ್ಯಗಳು ದುಃಖ ದುಮ್ಮಾನಗಳು ಅನೇಕ ಜಂಜಾಟಗಳು ಇರುವುದರಿಂದಲೇ ಅದು ಜೀವನ ,ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುವವರು ಇರುತ್ತಾರೆ.
ಒಂದು ಹೊತ್ತಿನ ತುತ್ತಿಗಾಗಿ ದಿನ ಕಳೆಯುವರು ಇದ್ದಾರೆ .ಇವೆಲ್ಲವೂ ಕೂಡ ಜೀವನದ ಮುಖಗಳು ,ಬೀಚಿಯವರು ಜೀವನದ ಎಲ್ಲಾ ದೃಷ್ಟಿಕೋನಗಳಿಂದಲೂ ಬದುಕನ್ನು ನೋಡಿರುವ ಸೂಕ್ಷ್ಮಮತಿಗಳು, ಹೊರಗಿನ ಕಣ್ಣಿಗೆ ನಗು ಗೋಚರವಾಗುತ್ತದೆ ಆ ನಗುವಿನ ಗರ್ಭದಲ್ಲಿ ಅಡಗಿದ ಜೀವನದ ಚಿಂತೆ ,ಪ್ರತಿಕ್ರಿಯೆಗಳು ಕಾಣುವುದಿಲ್ಲ, ನಗುವುದು ನಗೆ ಬಂದಾಗ ,ನಗುವುದು ಪ್ರಕೃತಿಯ ಧರ್ಮ, ನಗೆ ಬಾರದೆ ಯಾರು ನಗುವುದಿಲ್ಲ ಎಂಬುದು ಬೀಚಿಯವರ ಸಾಹಿತ್ಯದ ಸಾರ.
ಚುಚ್ಚಿ ನಗುವುದು ,ಅಣಕವಾಡಿ ನಗುವುದು ,ನಕ್ಕಂತೆ ಮಾಡಿ ಸುಮ್ಮಸುಮ್ಮನೆ ನಟನೆ ಮಾಡಿ ನಗುವುದು ಇವೆಲ್ಲಾ ನಗೆಯ ವಿಕಾರಿಗಳೇ ಹೊರತು ನಗೆಯ ವಿಚಾರಗಳೆಲ್ಲ. ಅಳಲಾರದ ಮನುಷ್ಯನು ಒಮ್ಮೆ ನಗುತ್ತಾನೆ ನಗಲೇಬೇಕಾದಾಗ ನಗುವುದು ಹಾಸ್ಯ ಸಾಹಿತ್ಯದ ಲಕ್ಷಣ.
ಬೀಚಿ ಕನ್ನಡಿಗರಿಗೆ ಹೆಚ್ಚು ಪ್ರಿಯವಾಗಲಿಲ್ಲ
ತಮ್ಮ ಸಾಹಿತ್ಯದಲ್ಲಿ ವಾಸ್ತವದ ಕಹಿ ಸತ್ಯಕ್ಕೆ ಬಿಚ್ಚಿಟ್ಟಿದ್ದರಿಂದಲೇ ಬೀಚಿಯವರು ಕನ್ನಡಿಗರಿಗೆ ಹೆಚ್ಚು ಪ್ರಿಯವಾಗಲಿಲ್ಲ ಕನ್ನಡಿಗರು ಇವರನ್ನು ಅವರ ಕೃತಿಗಳ ಮೌಲ್ಯವನ್ನು ಸಾಕಷ್ಟು ಗುರುತಿಸಲಿಲ್ಲವೆಂಬುದು ನನ್ನ ಅಭಿಮತ ,ಈ ಬಗ್ಗೆ ಅವರಿಗೆ ಕಿಂಚಿತ್ತು ವ್ಯಥೆ ಇರಲಿಲ್ಲ ಒಂದೆಡೆ ನನ್ನ ಸಾಹಿತ್ಯದ ಕುರಿತು “ತಲೆ ಇದ್ದವರು ತಲೆಕೆರೆದುಕೊಂಡಾರು,ಮಡಿವಂತರು ಮೂಗು ಮುಚ್ಚಿಕೊಳ್ಳಲಿ ,ಆದರೆ ಮೂಗಿನಲ್ಲಿ ವಾಸನೆ ಇದ್ದರೆ…? ಎಂಬುದಾಗಿ ಬೀಚಿಯವ ಬರದಿದ್ದಾರೆ.
ಭೀಮಸೇನರಾಯರು ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ 1913 ರ ಏಪ್ರೀಲ್ 23ರಂದು ಸಂಪ್ರದಾಯದ ಕುಟುಂಬದಲ್ಲಿ ಜನಿಸಿದರು ಚಿಕ್ಕಂದಿನಲ್ಲಿಯೇ ಮಾತು ಪಿತೃಗಳನ್ನು ಕಳೆದುಕೊಂಡ ಬೀಚಿಯವರು ತನ್ನ ಸಹೋದರ ಮಾವನ ಆಶ್ರಯದಲ್ಲಿ ಬೆಳೆದವರು ಬೀಚಿಯವರು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಬಹಳ ಸ್ವಾರಸ್ಯಮಯವಾಗಿ ಹಾಗೂ ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು.
ಬೀಚಿಯವರು ತಮ್ಮದೇ ಆದ ವಿಶಿಷ್ಟವಾದ ನೆಗೆ ಚುಟುಕುಗಳ ,ಮೂಲಕ ಕನ್ನಡಿಗರಿಗೆಲ್ಲ ಚಿರಪರಿಚಿತರು ಓದುವ ಹವ್ಯಾಸವೇ ಇಲ್ಲದ ಮಂದಿಗೂ ಬೀಚಿಯವರು ತಮ್ಮ ಜೋಕುಗಳ ಮೂಲಕ ಓದುವ ಹವ್ಯಾಸ ಹಚ್ಚಿದವರು ಇದೇನು ಒಂದು ಸಾಮಾನ್ಯ ಸಾಧನೆಯೇ..?
ಆದರೆ ಇಷ್ಟೇ ಬೀಚಿಯವರ ಉದ್ದೇಶವಾಗಿರಲಿಲ್ಲ, ಅವರೇ ಹೇಳಿದಂತೆ ಓದುವ ಅಭಿರುಚಿ ಇಲ್ಲದವರಿಗೆ ಓದುವ ಹುಚ್ಚನ್ನು ಹಿಡಿಸಲು ಹಾಸ್ಯ ಸಾಹಿತ್ಯ ಸುಲಭೋಪಾಯ ಆದರೆ ಅದು ಇಷ್ಟಕ್ಕೆ ನಿಂತರೆ ಉದ್ದೇಶ ವ್ಯರ್ಥ ವಾಗುತ್ತದೆ,ಅದರ ಮೂಲಕ ಕ್ರಮೇಣ ಓದುಗನನ್ನು ಮಹತ್ತರ ವಿಷಯಗಳ ಕಡೆಗೆ ಕೊಂಡೊಯ್ಯಬೇಕು ನಾನು ನನ್ನ ತಿಮ್ಮನ ತಲೆಯಿಂದ ಓದುಗನನ್ನು ಲೋಕಾಯತದವರಿಗೆ (materialism) ಕೊಂಡೊಯ್ದರೆ ಮಾತ್ರ ನಾನು ಸೃಷ್ಟಿಸಿದ ಸಾಹಿತ್ಯ ಸಾರ್ಥಕ ಎಂಬುದು ಬೀಚಿಯವರ ಅಭಿಪ್ರಾಯವಾಗಿತ್ತು.
ಬೀಚಿಯವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ರೇಡಿಯೋ ನಾಟಕಗಳು, ಮಾತ್ರೆಗಳು, ತಿಮ್ಮನ ತಲೆ ,ದಾಸ ಕೂಟ ,ಹುಚ್ಚು ಹುರುಳು, 11ನೇ ಅವತಾರ, ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಬೆಂಗಳೂರು ಬಸ್ಸು ,ಹೆಣ್ಣು ಕಾಣದ ಗಂಡು, ಸತ್ತವನು ಎದ್ದು ಬಂದಾಗ, ಚಿನ್ನದ ಕಸ, ಕಾಣದ ಸುಂದರಿ, ಕಲ್ಲು ಹೇಳಿತು ,ತಿಂಮನ ರಸಾಯನ, ದೇವನ ಹೆಂಡ, ಏರದ ಬಳೆ, ಮೇಡಮ್ಮನ ಗಂಡ, ಆಟೋ, ಎಲ್ಲಿರುವೆ ತಂದೆ ಬಾರೋ ,ಬಂಗಾರದ ಕತ್ತೆ ,ಎಲ್ಲರೂ ಸಂಪನ್ನರೇ, ಟೆಂಟ್ ಸಿನಿಮಾ, ಬ್ರಹ್ಮಚಾರಿಯ ಮಗ, ಬೆಳ್ಳಿ ತಿಮ್ಮ 108 ಹೇಳಿದ, ಮೂರು ಹೆಣ್ಣು ಐದು ಜಡೆ, ಮುರಿದ ಬೊಂಬೆ ,ಹುಲಿಯ ಬೆನ್ನ ಮೇಲಿಂದ, ಸುನಂದೂಗೆ ಏನಂತೆ, ಕಮಲಮ್ಮನ ಕುಂಕುಮ ಬಲ, ಆರು ಏಳು ಸ್ತ್ರೀ ಸೌಖ್ಯ, ಸೀತು ಮದುವೆ,ಲೇವಡಿ ಟೈಪಿಸ್ಟ್ ,ಆರಿದ ಚಹಾ, ಸಕ್ಕರೆ ಮೂಟೆ, ಬೆಳ್ಳಿ ಪತ್ರಗಳು,
ಮಹಾಯುದ್ಧ, ಲಕ್ಷ್ಮಿ ಪೂಜೆ ,ದೇವರು ಕೊಟ್ಟದ್ದು, ಸಾಹುಕಾರ ಸುಬ್ಬಮ್ಮ, ಸುಬ್ಬಿ, ಕತ್ತಲಲ್ಲಿ ಬಂದವಳು ,ಹೆಂಡತಿ ನಕ್ಕಾಗ, ಬಿತ್ತಿದ್ದೆ ಬೇವು, ಕಾಮಣ್ಣ, ಕಾಮ ಲೋಕ ,ಮಾತನಾಡುವ ದೇವರುಗಳು, ಅಂದನಾ ತಿಮ್ಮ, ಸಂಪನ್ನರಿದ್ದಾರೆ ಎಚ್ಚರಿಕೆ ,ಗರತಿ ಗುಟ್ಟು ,ಕಮಲೆಯ ಓಲೆಗಳು, ಖಾದಿ ಸೀರೆ ,ದೇವರಿಲ್ಲದ ಗುಡಿ, ಮನೆತನದ ಗೌರವ ,ಉತ್ತರ ಭೂಪ ,ಕನ್ನಡ ಎಮ್ಮೆ, ಅಮ್ಮನವರ ಇಚ್ಚೆ, ನರ ಪ್ರಾಣಿ ,ನನ್ನ ಬಯಾಗ್ರಫಿ, ದೇವರಿಗೆ ಪ್ರೀತಿ. ಮುಂತಾದ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಹಾಸ್ಯ ಸಾಹಿತ್ಯ ಲೋಕದಲ್ಲಿ ನಾ ಕಸ್ತೂರಿ, ಟಿಪಿ ಕೈಲಾಸಂ ಮುಂತಾದ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುವ ರಾಯಸಂ ಭೀಮಸೇನ ರಾವ್ (ಬೀಚಿ) ಅವರ ಜನ್ಮದಿನ ಇಂದು ಅವರ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸೋಣ.
ಬಸವರಾಜ ಸಂಗಪ್ಪನವರ್ ಹರಪನಹಳ್ಳಿ