ದಾವಣಗೆರೆ : ಯುವ ಸಾಹಿತಿ ಶಿವಪ್ರಸಾದ ಕರ್ಜಗಿ ಅವರು `ಸತ್ಯ ಸಾಕ್ಷಾತ್ಕಾರದ ನುಡಿಮುತ್ತುಗಳು’ ಕುರಿತಂತೆ ಸಂಗ್ರಹಿಸಿರುವ `ಪ್ರಸಾದ ವಾಣಿ’ ಕೃತಿಯ ಬಿಡುಗಡೆ ಸಮಾರಂಭವು ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‍ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ (ಮೇ19)ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಸಿಹಿ ಪ್ರಕಾಶನ ಇವರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ. ಇದೇ ಸಂದರ್ಭದಲ್ಲಿ ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ ಸೇವಾ ಯೋಜನೆಯ ಪ್ರಾರಂಭೋತ್ಸವವೂ ನಡೆಯಲಿದ್ದು, ಹಿರಿಯ ಲೇಖಕರೂ, ವೈದ್ಯರೂ, ಥಟ್ ಅಂತ ಹೇಳಿ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಶ್ರೀಮತಿ ಶಕುಂತಲಮ್ಮ ಮತ್ತು ಪರಮೇಶಪ್ಪ ಕರ್ಜಗಿ ದಂಪತಿ `ಪ್ರಸಾದ ವಾಣಿ’ ಕೃತಿಯನ್ನು ಬಿಡುಗಡೆ ಮಾಡಲಿದ್ದು, ನಿವೃತ್ತ ಉಪನ್ಯಾಸಕ ಕೆ. ಮಂಜುನಾಥ್ ಕೃತಿಯ ಕುರಿತಂತೆ ಮಾತನಾಡುವರು.
ಈಶ್ವರೀಯ ವಿಶ್ವವಿದ್ಯಾಲಯದ ಶಿವಮೊಗ್ಗ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅನಸೂಯಾಜಿ ಅಧ್ಯಕ್ಷತೆ ವಹಿಸಲಿದ್ದು, ದಾವಣಗೆರೆ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರಸ್ತಾವಿಕ ನುಡಿಗಳನ್ನಾಡುವರು.
ಡಾ. ಬಸವಪ್ರಭು ಸ್ವಾಮೀಜಿ (ಮುರುಘಾಮಠ, ಚಿತ್ರದುರ್ಗ-ವಿರಕ್ತಮಠ, ದಾವಣಗೆರೆ), ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ (ಕೇದಾರ ಶಾಖಾ ಹಿರೇಮಠ, ಚನ್ನಗಿರಿ), ಡಾ. ಮಹೇಶ್ವರ ಶಿವಚಾರ್ಯ ಸ್ವಾಮೀಜಿ (ಪುಣ್ಯಕ್ಷೇತ್ರ, ನಂದಿಪುರ, ಹಗರಿಬೊಮ್ಮನಹಳ್ಳಿ), ಶ್ರೀಸಿದ್ದಬಸವ ಕಬೀರ ಸ್ವಾಮೀಜಿ (ಜಗದ್ಗುರು ಮರುಳಶಂಕರ ದೇವರ ಗುರು ಪೀಠ ಚಿಗರಳ್ಳಿ, ಕಲಬುರಗಿ) ಶ್ರೀ ಸ್ವಾಮಿ ನಾರಾಯಣಾನಂದ ಸರಸ್ವತಿ (ಬೆಂಗಳೂರು ದೇವನಹಳ್ಳಿಯ ದಿ ಸ್ಕೂಲ್ ಸ್ಕೂಲ್ ಆಫ್ ಏನ್ಷಿಯಂಟ್) ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.
ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಮತ್ತು ಸಾಹಿತಿ ಶಿವಯೋಗಿ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.