ದಾವಣಗೆರೆ:
ಸಮಾಜದ ಎಲ್ಲ ವರ್ಗಗಳ ಸಮಗ್ರ ಸುಸ್ಥಿರ ಅಭಿವೃದ್ಧಿ ದೂರದೃಷ್ಟಿಯಿಂದ ಕೂಡಿದ ಸಂಶೋಧನೆಗಳಿಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ದೇಶದ ಅಭಿವೃದ್ಧಿ ಅನುಷ್ಠಾನದಲ್ಲಿ ಸಂಶೋಧನೆಗಳ ಶಿಫಾರಸುಗಳು ಅವಕಾಶ ಪಡೆಯುವಂತಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಇಂದುಮತಿ ಸಲಹೆ ನೀಡಿದರು.
ನವದೆಹಲಿಯ ಐಸಿಎಸ್‍ಎಸ್‍ಆರ್ ಪ್ರಾಯೋಜಕತ್ವದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಯುವ ಪ್ರಾಧ್ಯಾಪಕರ ಸಾಮಥ್ರ್ಯ ವೃದ್ಧಿ ಮತ್ತು ಸಂಶೋಧನಾ ವಿನ್ಯಾಸ ಮತ್ತು ಸಂಶೋಧನಾ ವಿನ್ಯಾಸ ಹಾಗೂ ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಬೇಕು
ಸಮಾಜಮುಖಿ ಸಂಶೋಧನೆಗಳು ದೇಶದ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಪರಿಸರವನ್ನು ರಕ್ಷಿಸುವ, ಜನರನ್ನು ಸಂಕಷ್ಟದಿಂದ ಪಾರು ಮಾಡಿ ಸ್ವಾವಲಂಬನೆಯ ಬದುಕಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಯೋಜನೆಗಳು ಸಿದ್ಧವಾಗಬೇಕು. ಸಂಶೋಧನೆಗೆ ಸಂಗ್ರಹಿಸುವ ದತ್ತಾಂಶಗಳು ವಾಸ್ತವ ನೆಲೆಯನ್ನು ಅರ್ಥೈಸುವಂತಿರಬೇಕು. ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ
ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಜನಸ್ನೇಹಿಯಾಗಿವೆ. ಇಂಥ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಸಂಶೋಧನೆಯ ಮಾಹಿತಿ ಸಂಗ್ರಹ ಹಾಗೂ ಫಲಿತಾಂಶ ಪಡೆಯಲು ಸಹಕಾರಿಯಾಗಿವೆ. ಸಂಶೋಧನಾರ್ಥಿಗಳು ಅಧ್ಯಯನ, ಸಂಶೋಧನೆಯ ಜೊತೆಗೆ ತಂತ್ರಜ್ಞಾನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸಾಕ್ಷರತೆ ಪ್ರಭಾವ ಹೆಚ್ಚಾಗುತ್ತಿದೆ. ಇದು ಡಿಜಿಟಲ್ ಸಾಕ್ಷರತೆಯು ಅಂತರವನ್ನು ಹೆಚ್ಚಿಸುತ್ತಿದೆ. ಇದು ಬೆಳವಣಿಗೆಯ ವೇಗದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಅಧ್ಯಯನ ಅವಲೋಕನದ ಅಗತ್ಯವಿದೆ ಎಂದು ಹೇಳಿದರು.
ಪರಿಸರ ಪ್ರಜ್ಞೆ ಬೆಳೆಸಲು ಜಾಗೃತಿಯ ಆಂದೋಲನ ನಡೆಯಬೇಕು
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಸುಸ್ಥಿರತೆಯೊಂದಿಗೆ ನಾವೀನ್ಯತೆಯನ್ನೂ ಭವಿಷ್ಯದ ಚಿಂತನೆಯ ಪರಿಕಲ್ಪನೆಗಳ ಶ್ರೇಣಿಯನ್ನು ಪರಿಶೋಧಿಸುತ್ತವೆ. ಹೊಸತನ ರೂಪಿಸುವ ಜೊತೆಗೆ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯನ್ನೂ ಬೆಳೆಸಲು ಜಾಗೃತಿಯ ಆಂದೋಲನ ಆಗಬೇಕಾಗಿದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ, ಕೌಶಲ್ಯಗಳ ಕೊರತೆಗಳು ತೀವ್ರ ಹಿನ್ನಡೆಗೆ ಕಾರಣವಾಗುತ್ತಿವೆ. ಉದ್ಯೋಗ ಆಧಾರಿತ ಶಿಕ್ಷಣ ಮತ್ತು ಜೀವನ ಆಧಾರಿತ ಶಿಕ್ಷಣದ ಪರಿಕಲ್ಪನೆಯನ್ನು ಅರ್ಥ ಮಾಡಿಸಬೇಕಾಗಿದೆ. ವಾಸ್ತವದ ನೆಲೆಯಲ್ಲಿ ನಿಂತು ಭವಿಷ್ಯವನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕ ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಹುಚ್ಚೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೆ.ಬಿ.ರಂಗಪ್ಪ, ಪ್ರೊ.ಎಸ್.ಸುಚಿತ್ರಾ ಮತ್ತಿತರರರು ಉಪಸ್ಥಿತರಿದ್ದರು.