ಸೊಂಡೂರು ತಾಲೂಕು,ಚೋರನೂರು ಗ್ರಾಮದ ಜನ ಗಣಿಗಾರಿಕೆಯಲ್ಲಿ ತೊಡಗಿಕೊಂಡಿಲ್ಲ.ಆದರೆ ಗಣಿಗಾರಿಕೆ ನಡೆಯುವ ಪಕ್ಕದಲ್ಲಿಯೇ ಹೊಲಗಳು ಇರುವುದರಿಂದಾಗಿ ಬೇಸಾಯದ ಬಡ ರೈತರು ತೀವ್ರ ಕೆಮ್ಮು,ಮತ್ತು ನಿರಂತರ ಎದೆನೋವಿನಿಂದ ಬಳಲುತ್ತಾರೆ.
ಕೆಮ್ಮುವಾಗ ಕಷ್ಟಪಡುತ್ತಾರೆ.ದೇಹ ಕ್ಷೀಣಿಸುತ್ತಾ ಬರುತ್ತದೆ.ಆರು ಜನರ ಕುಮಾರಪ್ಪನ ಇಡೀ ಕುಟುಂಬಕ್ಕೆ ತಾನೊಬ್ಬನೇ ಆಧಾರ.ಈಗ ಆತನಿಗೆ ಕೆಲಸ ಮಾಡಲು ಆಗುವುದಿಲ್ಲ.ಸಣ್ಣ ಮಕ್ಕಳು ಶಾಲೆ ಬಿಟ್ಟು ಕಿರಾಣಿ ಅಂಗಡಿಯಲ್ಲಿ ಪಟ್ಣ ಕಟ್ಟಲು ಹೋಗುತ್ತಾರೆ. ಆಕಸ್ಮಾತ್ ಯಾರಾದರೂ ಲೇಬರ್ ಆಫೀಸರ್,ಇನ್ಸ್ಪೆಕ್ಟರ್ ಏನಾದರೂ ಬಂದರೆ ಅಂಗಡಿಗೆ ಸಾಮಾನು ಖರೀದಿಗೆ ಬಂದವರಂತೆ ವರ್ತಿಸಬೇಕೆಂದು ಮೊದಲೇ ತರಬೇತಿಯನ್ನೂ ನೀಡಲಾಗಿದೆ.ಆ ಹುಡುಗನ ಶಾಲೆಯ ಗೈರುಹಾಜರಿ ಆರು ಜನರ ಹಸಿವನ್ನು ಹೇಗೋ ಸ್ವಲ್ಪಮಟ್ಟಿಗೆ ಕಡಿಮೆಮಾಡಿದೆ.
ಸಿಲಿಕೋಸಿಸ್” ರೋಗ
ಗಣಿಗಾರಿಕೆಯಿಂದ ಸೊಂಡೂರು ತಾಲೂಕಿನ ಸುತ್ತಲಿನ ಹಳ್ಳಿಗಳಲ್ಲಿ “ಸಿಲಿಕೋಸಿಸ್”ರೋಗ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಸಿಲಿಕೋಸಿಸ್ ಇದೊಂದು ಶ್ವಾಸಕೋಶ ಸಂಬಂಧಿ ರೋಗವಾಗಿದ್ದು,ಸಾಮಾನ್ಯವಾಗಿ ಗಣಿಗಾರಿಕೆಯಿಂದ ಎದ್ದ ಸಿಲಿಕಾ ಧೂಳನ್ನು ಉಸಿರಾಡಿದಾಗ ಉಂಟಾಗುತ್ತದೆ.ಬಹುತೇಕ ಗಣಿಗಳಲ್ಲಿ ಕೆಲಸ ಮಾಡುವ ಜನರಿಗೆ ಇದು ಸಂಭವಿಸುತ್ತದೆ.
ಕಾಯಿಲೆಯಿಂದ ಮುಕ್ತಿಯಿಲ್ಲ
ತಾರಾನಗರ,ಸುಶೀಲಾ ನಗರ,ಕೃಷ್ಣಾನಗರ,ಭುಜಂಗ ನಗರ ಮತ್ತು ಚೋರನೂರು,ಸ್ವಾಮಿ ಹಳ್ಳಿಗಳಂತಹ ಊರುಗಳಲ್ಲಿನ ಅನೇಕರು ಗಣಿಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ,ಜಿಂದಾಲ್ ಫ್ಯಾಕ್ಟರಿಯಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಮತ್ತು ಕೆಲವರು ಕೃಷಿ ಕೂಲಿಕಾರರಾಗಿ ಬದಲಾದರೂ ಸಹ ಕಾಯಿಲೆಯಿಂದ ಮುಕ್ತಿ ಪಡೆಯಲಾಗಿಲ್ಲ. ಇಂಥಾ ಹಳ್ಳಿಗಳಲ್ಲಿ ಮುದುಕ ಮುದುಕಿ ತಂದೆ ತಾಯಿಯರು ಹರೆಯದ ಮಕ್ಕಳ ಆರೈಕೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಗಾಳಿಯಗುಣಮಟ್ಟ ಪರೀಕ್ಷೆ ನಡೆದಿಲ್ಲ
ಈ ಭಾಗದಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನೇನಾದರೂ ಆರೋಗ್ಯ ಇಲಾಖೆ ಪರೀಕ್ಷಿಸಿದೆಯಾ? ಎಂದರೆ ಅದೂ ಇಲ್ಲ,ರಾಷ್ಟ್ರೀಯ ಖನಿಜ ನೀತಿಯ ಪಾಲಿಸಿಗಳನ್ನು ಸಹ ಗಣಿ ಕಂಪೆನಿಗಳು ಅನುಸರಿಸುತ್ತಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸರಕಾರಗಳು ಮತ್ತದರ ಅಧಿಕಾರಿ ವರ್ಗ ಕಣ್ಣುಮುಚ್ಚಿ ಕುಳಿತಂತೆ ತೋರುತ್ತಿದೆ.ಸಿಲಿಕೋಸಿಸ್ ಇದೊಂದು ಔದ್ಯೋಗಿಕ ಕಾಯಿಲೆಯಾಗಿದ್ದು,ಸಿಲಿಕಾ ಧೂಳಿನ ಇನ್ಹೆಲೇಷನ್ ನಿಂದಾಗಿ ಬರುವಂತದು.ಚಿಕಿತ್ಸೆಯು ಬ್ರಾಂಕೋಡಿಲೇಟರ್ಸ್ಗಳನ್ನು ಅವಲಂಬಿಸಿದೆ.
ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ
ಹತ್ತು ಹದಿನೈದು ವರುಷಗಳ ಕಾಲದ ಅವಧಿಯಲ್ಲಿ ಮನುಷ್ಯನ ಒಳಗೇ ಅವಿತಿದ್ದು ಅವನನ್ನು ನಿಶ್ಯಕ್ತನನ್ನಾಗಿ ಮಾಡಬಲ್ಲ ಈ ಕಾಯಿಲೆಗೆ ನಿರ್ದಿಷ್ಟ ಟ್ರೀಟ್ಮೆಂಟ್ ಇಲ್ಲ.ಆದರೆ ಧೂಳನ್ನು ಉಸಿರಾಡುವುದನ್ನು ತಪ್ಪಿಸಬೇಕಷ್ಟೆ. ಧೂಳು ಇಲ್ಲದಂಗ ಅದೆಂಗ ಗಣಿಗಾರಿಕೆ ಮಾಡ್ತಾರ ಸಾಮಿ,?ಅದೇನರ ನಿಂತೋದರೆ…ನನ್ ಎದೆಯಷ್ಟೇ ಅಲ್ಲ,ನಮ್ಮ ಕುಟುಂಬವೇ ಸರ್ವನಾಶ ಆಗಿಬಿಡುತ್ತದೆ ಎಂದವನ ಮುಖ ನೋಡಿದೆ.
ಈ ಮಾತನ್ನು ಅವನು ನಗು ನಗುತ್ತಲೇ ಹೇಳಿದ್ದ!..
ಗಣಿಗಾರಿಕೆ ನಡೆದರೆ ಕೆಮ್ಮುತ್ತಲೋ,ಕುಂಟುತ್ತಲೋ…ಹತ್ತು ಹದಿನೈದು ವರುಷಗಳ ಕಾಲ ರೋಗ ಹೊತ್ತುಕೊಂಡೇ ಓಡಾಡಿ ಹೇಗೋ ಬದುಕಿ ಈ ಲೋಕ ತ್ಯಜಿಸಬಹುದು.
ಆದರೆ…. ಗಣಿಗಾರಿಕೆ ಸ್ತಬ್ದವಾದರೆ ಮಾತ್ರ ಹಸಿವಿನಿಂದ ಸಾಯಲು ತಡವೇ ಆಗುವುದಿಲ್ಲ ಎಂದು ಹೇಳುತ್ತಲೇ ಆತ ಕೆಮ್ಮತೊಡಗಿದ.
ಬಿ.ಶ್ರೀನಿವಾಸ