ಸರ್ಕಾರವು ದೋಣಿಮಲೈ ಬ್ಲಾಕ್ ಭಾಗದಲ್ಲಿ 9733 ಹೆಕ್ಟೇರ್, ನಾರ್ಥ್ ಈಸ್ಟರ್ನ್ ಬ್ಲಾಕ್ ನಲ್ಲಿ 9064 ಹೆಕ್ಟೇರ್,ರಾಮನ ಮಲೈ ಭಾಗದಲ್ಲಿ 7769 ಹಾಗೂ ಸ್ವಾಮಿ ಮಲೈ ಬ್ಲಾಕ್ ನ ಭಾಗದಲ್ಲಿ 6993 ಹೆಕ್ಟೇರುಗಳಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಿತ್ತು.ಆದರೆ ಸೊಂಡೂರಿನ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆಯ ಪ್ರಮಾಣವೂ ಕೂಡ ಇಷ್ಟೆ ಗಾತ್ರದಾಗಿತ್ತು ಎಂಬುದೂ ಸತ್ಯ. ಒಟ್ಟು ಸೊಂಡೂರಿನ ಭಾಗದಲ್ಲಿ 48 ಉದ್ಯಮಗಳಿದ್ದವು.
ಕಾನೂನು ಉಲ್ಲಂಘಿಸಿದ ಕಂಪನಿಗಳೇ ಹೆಚ್ಚು
ಅವುಗಳ ಪೈಕಿ 20ಕ್ಕೂ ಹೆಚ್ಚು ಕಾನೂನನ್ನು ಉಲ್ಲಂಘಿಸಿದ ಅಕ್ರಮ ಕಂಪೆನಿಗಳೇ ಆಗಿದ್ದವು.ಲೀಗಲ್ ಎನ್ನುವಂತಹ ಕೆಲ ಕಂಪೆನಿಗಳೂ ಸಹ ಅಗತ್ಯಕ್ಕಿಂತ ಹೆಚ್ಚೇ ಅದಿರನ್ನು ರಫ್ತು ಮಾಡುತ್ತಿದ್ದವು ಎಂಬುದು ಕೂಡ ತನಿಖೆಯ ವರದಿಯೊಂದರಲ್ಲಿ ದಾಖಲಾಗಿದೆ.
ಉಸಿರಾಡಲೂ ಕಷ್ಟಪಡುವಂತಹ ಪರಿಸ್ಥಿತಿ
ಇರುವ ಭೌಗೋಳಿಕ ಪ್ರದೇಶದಲ್ಲಿ ಗಣಿಗಾರಿಕೆಯ ದಾಳಿಯಿಂದಾಗಿ ಜನಸಂಖ್ಯೆಯ ಸಾಂದ್ರತೆಯ ಪರಿಮಾಣ ಹೆಚ್ಚಾಯಿತು. ಜನರು ಉಸಿರಾಡಲೂ ಕಷ್ಟಪಡುವಂತಹ ಪರಿಸ್ಥಿತಿ ಉಂಟಾಯಿತು.
ಧೂಳಿನ ಹಾನಿಯ ಪರಿಹಾರ”ಕ್ಕಾಗಿ ಹೋರಾಟ
ಊರುಗಳಲ್ಲಿ ಅಳಿದುಳಿದ ಹೊಲಗಳೂ ಧೂಳಿನಿಂದ ಆವೃತವಾದವು. ನಾಶವಾದ ತಮ್ಮ ಬೆಳೆ ಪರಿಹಾರಕ್ಕಾಗಿ 2007 ರಲ್ಲಿ”ಧೂಳಿನ ಹಾನಿಯ ಪರಿಹಾರ”ಕ್ಕಾಗಿ ಹೋರಾಟ ನಡೆಯಿತು. ಆಗ ಕಂಪೆನಿಗಳು ಎಕರೆಗೆ ಕೇವಲ ರೂ.4000/ಗಳನ್ನು ಮಾತ್ರ ರೈತರಿಗೆ ಕೊಟ್ಟು ಕೈ ತೊಳೆದುಕೊಂಡವು.ತಿಂಗಳಿಗೆ ಲಕ್ಷ ಲಕ್ಷ ರೂಪಾಯಿಗಳವರೆಗೂ ಆದಾಯ ಬರುವಂತೆ ಬೆಳೆಯುವ ಭೂಮಿಯನ್ನು ಲೀಜ್ ಗೆ ನೀಡಿದ್ದ ರೈತರಿಗೆ ಅದೊಂದು ಸಮಸ್ಯೆಯೆ ಆಗಲಿಲ್ಲ. ರೈತಪರ ಚಳುವಳಿಗಳೂ ಸಹ ಆಗ ಅವರ ಕಣ್ಣಿಗೆ ತಮಾಷೆಯಂತೆ ಗೋಚರಿಸಿದ್ದಂತೂ ಸತ್ಯ.
ಗಣಿಗಾರಿಕೆಯ ಉತ್ತುಂಗದ ದಿನಗಳಲ್ಲಿ ಪ್ರತಿದಿನ ಇಪ್ಪತ್ತೈದು ಸಾವಿರ ಟನ್ನಿನಷ್ಟು ಪ್ರಮಾಣದ ಅಕ್ರಮ ಅದಿರು ಸಾಗಾಟವಾಗುತ್ತಿತ್ತು!. ರೈತರಿಂದ ಲೀಜ್ ಪಡೆದ ಹೊಲಗಳನ್ನು ಕನಿಷ್ಟ ಐದೈದು ಅಡಿಗಳಷ್ಟು ಆಳಕ್ಕೆ ಯಂತ್ರಗಳು ಬಗೆದು ,ಮಣ್ಣು ಕಲ್ಲನ್ನೂ ಬಿಡದೆ,ಹಗಲೂ ರಾತ್ರಿ ಸಾಗಾಟ ಮಾಡಿದವು.
ಕೈಯ್ಯೊಳಗಿದ್ದ ದುಡ್ಡು ಕೂಡ ಖಾಲಿ
ಲೀಜ್ ಅವಧಿ ಮುಗಿದ ನಂತರ ಹೊಲಗಳನ್ನು ವಾಪಸು ಪಡೆದ ರೈತರ ಮೊಗಗಳಲ್ಲಿ ತಮ್ಮದೇ ದೇಹವು ಪೋಸ್ಟ್ ಮಾರ್ಟಮ್ ಆಗಿ ಬಂದಂತೆ ಶಾಕ್ ಗೆ ಒಳಗಾದರು.ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಕೈಯ್ಯೊಳಗಿದ್ದ ದುಡ್ಡು ಕೂಡ ಖಾಲಿಯಾಗಿತ್ತು.ಮಕ್ಕಳ ದೊಡ್ಡ ದೊಡ್ಡ ಗಾಡಿಗಳು, ಗಣಿಗಾರಿಕೆಯಲ್ಲಿ ,ರಿಟೇಲ್ ಮೈನಿಂಗ್ ನಲ್ಲಿ ದುಡಿಯುವೆನೆಂದು ಬ್ಯಾಂಕಿನಿಂದ ಸಾಲ ಮಾಡಿ ತೆಗೆದುಕೊಂಡ ಲಾರಿ,ಟಿಪ್ಪರುಗಳ ಮೌನ ಅವರನ್ನು ಭಯಭೀತರನ್ನಾಗಿಸಿತು.
ಇಲ್ಲಿನ ಆರಾಧ್ಯದೈವ ಕುಮಾರಸ್ವಾಮಿ ತನ್ನ ದರ್ಶನಕ್ಕೆ ಬರುವವರಿಗೆ,ಅವರಷ್ಟೆ ಎತ್ತರದವನಾಗಿ ಗೋಚರಿಸುತ್ತಾನಂತೆ.ದೊಡ್ಡವರ ಕಣ್ಣಿಗೆ ದೊಡ್ಡವನಾಗಿ, ಚಿಕ್ಕವರ ಕಣ್ಣಿಗೆ ಚಿಕ್ಕವನಾಗಿ ಕಾಣಿಸುತ್ತಾನೆ ಎಂಬ ಪ್ರತೀತಿಯಿದೆ.
ಆದರೆ ಡಕಾಯಿತರ ಕಣ್ಣಿಗೆ ಯಾಕೆ ಬೀಳಲಿಲ್ಲವೋ…?ಎಂಬುದು ನಿಗೂಢವಾಗಿ ಉಳಿದ ಪ್ರಶ್ನೆಗೆ ಆ ಸ್ಕಂದ ಮಹಾಶಯನೆ ಉತ್ತರಿಸಬೇಕು.
ಬಿ.ಶ್ರೀನಿವಾಸ