ಬಡವರಾಗಿ ಹುಟ್ಟಿಬಿಟ್ಟೀವಿ…ಏನ್ ಮಾಡದು ಹಂಗಾ ಒಂದಿನಾ…ಮಣ್ಣಾಕ ಹೋಗದು! ಹೀಗೆ ನಗುನಗುತ್ತಲೇ ಸಾವಿನ ಕುರಿತು ಮಾತನಾಡುವ ಆಕೆ ಕೂಡ ಗಣಿ ಕೆಲಸ ಮಾಡುವ ಕಾರ್ಮಿಕಳೆ ಆಗಿದ್ದವಳು.
ಸುಪ್ರೀಮ್ ಕೋರ್ಟಿನ ಆದೇಶದನ್ವಯ ಬಂದ್ ಆದ ಅಕ್ರಮ ಗಣಿಗಾರಿಕೆಯಿಂದಾಗಿ ಊರಿನ ಹೊರಗೆ ತಟ್ಟಿ ಹೋಟೆಲು ಇಟ್ಟುಕೊಂಡಿರುವ ಆಕೆಗೆ ಬದುಕಿನ ಮೇಲೆ ಅಂತಹ ಯಾವುದೇ ಮೋಹವಿಲ್ಲದ ಸಂತಳಂತೆ ಕಂಡಳು.
ಕಮ್ಮತೂರು !
ಒಂದು ಕಾಲದಲ್ಲಿ ಮಳೆಯಾಶ್ರಿತ ಹೊಲಗಳಲ್ಲಿ ಎಣ್ಣೆ ಕಾಳು ಬೆಳೆಗಳನ್ನೆ ಬೆಳೆದು ಬದುಕು ಕಟ್ಟಿಕೊಂಡ ಕುಟುಂಬಗಳಿದ್ದವು. ತನ್ನದೇ ಹೊಲದ ಪಹಣಿ ಹಿಡಿದು ಸರ್ವೆ ನಂಬರ್ ಸಹಿತ ತೋರಿಸುವ ಆ ಹುಡುಗ, ತನ್ನಜ್ಜ , ಅಪ್ಪನ ಕಾಲದ ಹೊಲದ ತುಂಬ ಡಿಪ್ಪಿಂಗ್ ಮಾಡಿದ ಮಣ್ಣು ತುಂಬಿರುವುದನ್ನು ತೋರಿಸಿದ. ಇಂತಹದರೊಳಗೆ ಬಿತ್ತಿ ಬೆಳೆಯುವುದಾದರೂ ಏನು ? ಎಂಬಂತೆ ಮುಖ ನೋಡಿದ.
ಬೆಳೆಯ ಸುಳಿಗೆ ಮೈನಿಂಗ್ ಮಣ್ಣು ತುಂಬಿದೆ !
ಬ್ಯಾಸಾಯ ಹೋಯಿತು. ಮೈನಿಂಗ್ ಬಂದಿತು. ಈಗ ಅವೆರೆಡೂ ಇಲ್ಲದ ಊರು ಏದುಸಿರು ಬಿಡುತಿದೆ. ಗಣಿ ಆಸ್ಪೋಟದ ದಾಳಿಗೆ ಬಿರುಕು ಬಿಟ್ಟ ಮನೆಯ ಗೋಡೆಗಳೊಂದಿಗೆ ಅವರು ಅದೆಷ್ಟು ಹೊತ್ತು ಮಾತನಾಡಿಯಾರು ? ಎಲ್ಲೋ ಅಲ್ಲೋ ಇಲ್ಲೋ ಅಳಿದುಳಿದ ಜಮೀನಿನಲ್ಲಿ ಬಿತ್ತಿ, ಮೆಕ್ಕೆಜೋಳದ ಬೆಳೆಯ ಸುಳಿಗೆ ಮೈನಿಂಗ್ ಮಣ್ಣು ತುಂಬಿದೆ !
1791 ಕೋಟಿ (D.M.F) ಮೈನಿಂಗ್ ಫಂಡ್
ಗಣಿಗಾರಿಕೆಯಿಂದ ತತ್ತರಿಸಿದ ಇಂತಹ ಊರುಗಳಿಗೆ ಮೂಲಭೂತ ಸೌಕರ್ಯಗಳಿಗಾಗಿಯೆ ಡಿಸ್ಟ್ರಿಕ್ಟ ಮೈನಿಂಗ್ ಫಂಡ್(D.M.F) ತೆಗೆದಿರಿಸಲಾಗಿದೆ. ಅದರ ಮೊತ್ತವೇ ಬರೋಬ್ಬರಿ ಸಾವಿರದ ಏಳುನೂರ ತೊಂಭತ್ತೊಂದು ಕೋಟಿ ರೂಪಾಯಿಗಳು! ಅದರಲ್ಲಿ ಒಂಭೈನೂರ ತೊಂಭತ್ತೆಂಟು ಕೋಟಿಗಳನ್ನು ಈಗಾಗಲೆ ಗಣಿಬಾಧಿತ ಹಳ್ಳಿಗಳ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂಬುದು ಸರ್ಕಾರವೇ ಕೊಡುವ ಅಂಕಿ ಅಂಶವಾಗಿದೆ.
ಡ್ಯಾಮು ಇದ್ರು ನೀರಿಲ್ಲ
ಡ್ಯಾಮು ಹತ್ರ ಐತೆ…ಆದ್ರೆ ಕುಡಿಯಾಕ ನೀರ್ ಸೈತ ಸಿಗಾದಿಲ್ಲ ಸಾ.. “ಜನ ಟೂರ್ ಸೈತ ಇಲ್ಲಿಗೆ ಬರಾದಿಲ್ಲ ಸಾ…ಯಾಕೆಂದ್ರೆ ಧೂಳಿಗೆ ಅರ್ಧ ಹೆದ್ರಕಂಬ್ತಾರೆ,ಮತ್ತೆ ಲಾರಿ ಆಕ್ಸಿಡೆಂಟಿಗೆ ಹೆದರಿ ಎಲ್ಲಿಸುದ್ದಪಾ ಅಂದು ಹಂಪಿ ಕಡೀಗೆ ಹೋಗಿಬಿಡ್ತಾರೆ..” ಎಂದು ಹೇಳುವ ಆತನ ಕಂಗಳಲ್ಲಿ , ಮೈನಿಂಗು ಇಲ್ಲ,ಟೂರಿಸಂ ಇಲ್ಲ ನಮ್ ಹಣೇಬರಾ ಇಷ್ಟೆ ಎಂದು ಹೇಳುತ್ತಿರುವ ಹಾಗಿತ್ತು. ಬಡವರಾಗಿ ಹುಟ್ಟಿ ಬಿಟ್ಟೀವಿ ಸಾ…ಮತೆ ಏನ್ ಮಾಡುಕು? ಪ್ರಶ್ನೆ ,ಮನದ ಮೂಲೆಯಲ್ಲಿ ಕಟೆಯುತ್ತಲೆ ಇದೆ.
ಬಿ.ಶ್ರೀನಿವಾಸ