ಬಳ್ಳಾರಿ ಜಿಲ್ಲೆಯಲ್ಲಿ ಬಂಡಾಯದ ಧ್ವನಿ ಹುಟ್ಟು ಹಾಕಿ ,ನಾಡಿನಾದ್ಯಂತ ಕ್ರಾಂತಿ ಪಸರಿಸಿದ ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ……
ಹುಟ್ಟಿ ಬೆಳೆದಿದ್ದು ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲೂಕು, ಉಪನ್ಯಾಸಕರಾಗಿ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಕೆಲಸ ಮಾಡುತ್ತಾ ಎಡಪಂಥೀಯ ,ದಲಿತ ,ಬಂಡಾಯದ ಚಳುವಳಿಗಳಿಗಾಗಿ ತಮ್ಮ ಇಡೀ ಬದುಕನ್ನ ಮುಡಿಪಾಗಿಟ್ಟ ಎಸ್ ಎಸ್ ಹಿರೇಮಠ್ ರವರು ನಮ್ಮನ್ನಗಲಿ 15 ವರ್ಷಗಳು ಕಳೆದಿವೆ.
ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ
ಉಚ್ಚ ಸಾಮಾಜಿಕ ವರ್ಗದಲ್ಲಿ ಹುಟ್ಟಿದ ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ (ಎಸ್ ಎಸ್ ಹಿರೇಮಠ) ತಮ್ಮ ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ ,ದಲಿತರಿಗಾಗಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ
ಅವರ ಸಂಸ್ಕೃತಿ, ಪರಂಪರೆ ಹಬ್ಬಗಳು ಮತ್ತು ಜಾತ್ರೆಗಳ ಬಗೆಗೆ ಅವರ ವಿಭಿನ್ನ ಚಿಂತನೆಗಳು ಹಾಗೂ ಹೋರಾಟದ ಮಜಲುಗಳನ್ನು ನಾಡಿಗೆ ಪರಿಚಯಿಸಿ ಅಧ್ಯಯನ ಹಾಗೂ ಆಧ್ಯಾಪನದ ಜೊತೆಗೆ ಸಂಘಟನೆ, ವೈಚಾರಿಕ ಜ್ಞಾನ, ಸಂಸ್ಕೃತಿ ಪರಂಪರೆಯ ಚರ್ಚೆ ಅಭಿವ್ಯಕ್ತಿ ಹಾಗು ಹೋರಾಟಕ್ಕೆ ಅನೇಕ ವೇದಿಕೆ ಒದಗಿಸಲು ಗಮನಾರ್ಹವಾದ ಕೆಲಸವನ್ನು ನಿರ್ವಹಿಸಿದ ಬಹುಮುಖಿ ವ್ಯಕ್ತಿತ್ವದ ಹಿರೇಮಠ ಮೇಷ್ಟ್ರು ಅನೇಕ ಹೋರಾಟಗಾರರನ್ನ ತಮ್ಮ ಗರಡಿಯಲ್ಲಿ ಪಳಗಿಸಿದ್ದಾರೆ.
ಹಿರೇಮಠ್ ಮೇಷ್ಟ್ರು ಕರ್ನಾಟಕದ ಶ್ರೇಷ್ಠ ಚಿಂತಕರು
ಅನೇಕ ವಿದ್ಯಾರ್ಥಿ ಯುವ ಜನರಿಗೆ ದ್ವಂದ್ವಮಾನ ಹಾಗೂ ಚಾರಿತ್ರಿಕ ಭೌತವಾದದ ಪಾಠ ಹೇಳಿಕೊಟ್ಟ ಹಿರೇಮಠ ಮೇಷ್ಟ್ರು, ಶೋಷಣಾ ರಹಿತ ಸಮಾಜವಾದದ ಕನಸನ್ನು ಕಂಡು ತಮ್ಮ ಉಪನ್ಯಾಸಕ ಕಾಯಕವನ್ನು ಶ್ರದ್ಧೆ ,ನಿಷ್ಠೆಯಿಂದ ನಿರ್ವಹಿಸುವುದರ ಜೊತೆಗೆ ಒಂದು ಅರೆಗಳಿಗೆ ಸಮಯ ಹಾಳು ಮಾಡದೇ,ಅಧ್ಯಯನ, ಸಂಘಟನೆ ಹಾಗೂ ಹೋರಾಟಗಳಿಗಾಗಿ ತಮ್ಮ ಬದುಕಿನ ಬಹು ಸಮಯವನ್ನು ಮೀಸಲಿಟ್ಟ ಹಿರೇಮಠ್ ಮೇಷ್ಟ್ರು ಕರ್ನಾಟಕದ ಶ್ರೇಷ್ಠ ಚಿಂತಕರ ಸಾಲಿನಲ್ಲಿ ನಿಲ್ಲುತ್ತಾರೆ.
ಉಪನ್ಯಾಸಕರಾಗಿ ಕೆಲಸ ಮಾಡಿದ ಕಡೆಗಳಲ್ಲೆಲ್ಲ ಕ್ರಾಂತಿ ಬೀಜ ಬಿತ್ತಿ ಅದು ಹೆಮ್ಮರವಾಗುವ ಕನಸು ಕಾಣುತ್ತಿದ್ದ, ಅದಮ್ಯ ಕನಸುಗಾರ ಅವರು, ಕ್ರಾಂತಿ ಹಾಗೂ ಹೋರಾಟದ ಕುರಿತಂತೆ ವಿಶಿಷ್ಟವಾದ ಚಿಕಿತ್ಸಕ ದೃಷ್ಟಿಯಿಂದ ಅವರು ಹುಡುಕಾಟ ನಡೆಸುತ್ತಿದ್ದರು.
ಅವರ ಕೃತಿಗಳಾದ ಜಾತ್ರೆಗಳು, ಹಬ್ಬಗಳು ,ಸಾಂಖ್ಯಾ ದರ್ಶನ, ಪಾಶುಪತದರ್ಶನ, ಕಾಳಮುಖದರ್ಶನ ,ಮಾದರ ಚೆನ್ನಯ್ಯನ ನಾಡಿನಲ್ಲಿ, ಮುಂತಾದ 32ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ತಮ್ಮ ನಿವೃತ್ತಿಯ ನಂತರ ಅನೇಕ ಭಾರತೀಯ ಸಾಂಸ್ಕೃತಿಕ ದರ್ಶನಗಳು ಹಾಗೂ ಶೋಷಣೆಯ ವಿವಿಧ ಮಗ್ಗಲಗಳು ಮತ್ತು ಅದಕ್ಕೆ ಪರ್ಯಾಯಗಳ ಕುರಿತು ಸಾಹಿತ್ಯ ಕೃಷಿ ಮಾಡುವ ಆಲೋಚನೆಯನ್ನು ಹೊಂದಿದ್ದ ಎಸ್ ಎಸ್ ಹಿರೇಮಠ್ ಮೇಷ್ಟ್ರು ತಮ್ಮ ತೀವ್ರವಾದ ಅನಾರೋಗ್ಯದಿಂದ ಬೇಗನೆ ವಿಧಿವಶರಾಗಿದ್ದು ಕರ್ನಾಟಕದ ಸಾಂಸ್ಕೃತಿಕ ಚಿಂತನಾ ಲೋಕಕ್ಕೆ ಆದ ಒಂದು ದೊಡ್ಡ ಆಘಾತವೆಂದೇ ಭಾವಿಸಬಹುದು.
ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳದ ಛಲಗಾರ, ಎಂಬತ್ತರ ದಶಕದಲ್ಲಿ ವಿದ್ಯಾರ್ಥಿ ಯುವಜನ ಸಂಘಟನೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆಗಳಿಗೆ ಹೊಸ ಭಾಷ್ಯ ಬರೆಯುವುದರಲ್ಲಿ ಹಿರೇಮಠರವರದು ಕರ್ನಾಟಕದಲ್ಲಿ ಪ್ರಮುಖ ಪಾತ್ರ, ಉಪನ್ಯಾಸಕ ಹಾಗೂ ಕಲಾವಿದ ಗೆಳೆಯರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಲಾಜಾಥಾ, ವಿಜ್ಞಾನ ಜಾಥಾಗಳನ್ನು ಸಂಘಟಿಸಿರೋದು ಚರಿತ್ರೆಯಲ್ಲಿ ಸೇರಿದ ಮರೆಯಲಾರದ ದಿನಗಳಾಗಿವೆ.
ಎಡ ಹಾಗೂ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ ಜಾತಿಯ ವ್ಯವಸ್ಥೆಯ ಬೇರುಗಳನ್ನು ಅರ್ಥ ಮಾಡಿಕೊಂಡು ಈ ಹಿನ್ನೆಲೆಯಲ್ಲಿ ಹೊಸ ಹೋರಾಟಗಳನ್ನು ರೂಪಿಸಬೇಕು ಎನ್ನುವ ಚಿಂತನೆ ಎಸ್ ಎಸ್ ಹಿರೇಮಠ್ ಮೇಷ್ಟ್ರು ಅವರದಾಗಿತ್ತು.
ಇಂದು ಬೇರೆ ಬೇರೆ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರೇಮಠ ಅವರ ಅನೇಕ ಶಿಷ್ಯ ಬಳಗವಿದೆ ಅದರಲ್ಲಿ ನಿಂಗಪ್ಪ ಮುದೇನೂರು, ಎ ಎಸ್ ಪ್ರಭಾಕರ , ಬಿ ಬಿ ಪೀರ ಭಾಷಾ, ಎಸ್ ವೈ ಗುರು ಶಾಂತ, ಇಂಥವರು ಇಂದು ಜನಪರ ಚಳುವಳಿ ಹಾಗೂ ಪ್ರಗತಿಪರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಹಿರೇಮಠ ಅವರ ಬೋಧನೆ ಹಾಗೂ ಅವರ ವಿಚಾರಗಳ ಪ್ರಭಾವ ಇದೆ.
ಬಂಡಾಯ ಅವರ ವ್ಯಕ್ತಿತ್ವದ ಆಶಯವಾಗಿದ್ದರೂ ಎಲ್ಲೂ ಆವೇಶ ಆಕ್ರೋಶಗಳಿಗೆ ಅವರಾಗಲಿ ಅವರ ಸಾಹಿತ್ಯವಾಗಲಿ ಈಡಾಗುತ್ತಿರಲಿಲ್ಲ,ಯಾವುದೇ ವಿಚಾರದ ಬಗ್ಗೆ ಅವರ ಚರ್ಚೆಗಳು ಕುರುಡುನಂಬಿಕೆಯಿಂದ ಕೂಡಿರದೇ, ಅದಕ್ಕೊಂದು ವೈಜ್ಞಾನಿಕ ಸೈದ್ಧಾಂತಿಕ ಸ್ಪಷ್ಟವಾದ ಕಲ್ಪನೆ ಇರುತ್ತಿತ್ತು.
ನೊಂದ ಜನರ ಧ್ವನಿ
ದಾವಣಗೆರೆ ಬಳ್ಳಾರಿ ಭಾಗದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೆಳೆಯರೊಂದಿಗೆ ಅನೇಕ ಜಾಥಾಗಳನ್ನು ಸಂಘಟಿಸಿ ಅಸ್ಪೃಶ್ಯತೆಯ ವಿರುದ್ಧ ಹಾಡು ಹಾಗೂ ಬೀದಿ ನಾಟಕಗಳನ್ನು ಆಯೋಜಿಸಿ,ಪಟ್ಟ ಭದ್ರ ಹಿತಾಸಕ್ತಿಗಳ ವಿರೋಧ ಕಟ್ಟಿಕೊಂಡು ವಯಕ್ತಿಕ ತೊಂದರೆ ಅನುಭವಿಸಿದ್ದರೂ ಕೂಡ ದೃತಿಗೆಡದೆ ಜೀವಮಾನವಿಡಿ ನೊಂದ ಜನರ ಧ್ವನಿಯಾಗಿದ್ದರು.
ಚಾರಿತ್ರಿಕ ಭೌತವಾದವನ್ನು ಅತ್ಯಂತ ವೈಜ್ಞಾನಿಕವಾಗಿ ಈ ದೇಶಕ್ಕೆ ಪರಿಚಯ ಮಾಡಿಕೊಟ್ಟಂತ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಲೇಖಕರಾದ ಡಿಡಿ ಕೋಸಾಂಬಿ, ಎಸ್ ಜಿ ಸರ್ದೇಸಾಯಿ ,ಅವರ ಪ್ರವಾಹಕ್ಕೆ ಒಳಗಾಗಿದ್ದ ಹಿರೇಮಠ ಮೇಷ್ಟ್ರು ತಮ್ಮ ಶಿಷ್ಯರಿಗೆ ಭಾರತದಲ್ಲಿ ದ್ವಂದ್ವಮಾನ ಮತ್ತು ಚಾರಿತ್ರಿಕ ಭೂತವಾದವನ್ನು E=mc2 ಒಂದೇ ಸೂತ್ರದ ಮೂಲಕ ಅತ್ಯಂತ ಸರಳವಾಗಿ ಮನದಟ್ಟು ಮಾಡುವ ರೀತಿ ಅತ್ಯಂತ ಮನೋಜ್ಞವಾದದ್ದು,
ಬದುಕಿನ ಕೊನೆಗಾಲದಲ್ಲಿ ಆಸರೆಯಾಗಬೇಕಾಗಿದ್ದ, ಮುಪ್ಪಿಗೆ ಧೈರ್ಯ ತುಂಬಬೇಕಾಗಿದ್ದ ಮಗ ಕಾಣೆಯಾಗಿ ಹೋಗಿದ್ದು ಅವರ ಬದುಕಿನ ದೊಡ್ಡ ದುರಂತ,
ಅನೇಕ ಬಡ ವಿದ್ಯಾರ್ಥಿಗಳಿಗೆ ಬದುಕಿನ ಜೀವಸೆಲೆ ತುಂಬಿದ ಹಿರೇಮಠ ಮೇಷ್ಟ್ರು ಅವರ ಆರೋಗ್ಯ ದಿಡೀರನೆ ಕೈಕೊಟ್ಟು ಬದುಕಿನ ಮುಸ್ಸಂಜೆಯಲ್ಲಿ ಕಡುಕಷ್ಟದ ದಿನಗಳನ್ನು ಕಳೆದರು. ಸಮಾಜಮುಖಿಯಾದ ಮನುಷ್ಯ ವೈಯಕ್ತಿಕ ಬದುಕನ್ನು ಕಳೆದುಕೊಂಡು ಇಡೀ ಸಮಾಜಕ್ಕೆ ಪ್ರಿಯವಾಗುತ್ತಾರೆ. ಆ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಎಸ್ ಎಸ್ ಹಿರೇಮಠ ಅವರು ಜೀವಂತ ಉದಾಹರಣೆ
ಬಸವರಾಜ ಸಂಗಪ್ಪನವರ್ ಹರಪನಹಳ್ಳಿ