ದಾವಣಗೆರೆ (Davanagere): ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಡಕುಗಳಿವೆ. ಅವುಗಳನ್ನು ಶೀಘ್ರವೇ ನಿವಾರಿಸಿ, ಸಮೀಕ್ಷೆಯ ಅವಧಿ ವಿಸ್ತರಿಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರಿಗೆ ಮನವಿ ಮಾಡಿದ್ದಾರೆ.
ಒಳಮೀಸಲಾತಿಯನ್ನು ಶೀಘ್ರವೇ ಜಾರಿಗೆ ತರಬೇಕು ಎಂಬ ಸರ್ಕಾರದ ಕಾಳಜಿ ಮತ್ತು ಬದ್ಧತೆ ಸ್ವಾಗತಾರ್ಹ. ಆದರೆ ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗಳಿಗೆ ಕೇವಲ ೩ ಗಂಟೆ ತರಬೇತಿ ನೀಡಲಾಗಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಗಾಗಿ ರೂಪಿಸಿರುವ ಆ್ಯಂಡ್ರಾಯ್ಡ್ ಅಪ್ಲಿಕೇಷನ್‌ನಲ್ಲಿ ಕೆಲ ಸಮಸ್ಯೆಗಳಿವೆ. ಹಳೆಯ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಈ ಅಪ್ಲಿಕೇಷನ್ ಡೌನ್‌ಲೋಡ್ ಆಗುವುದಿಲ್ಲ. ಡೌನ್‌ಲೋಡ್ ಆದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕೇಳಿ ಬಂದಿವೆ.
ಅಲ್ಲದೇ ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ನೀವು ಪರಿಶಿಷ್ಟ ಜಾತಿಗೆ ಸೇರಿದವರೆ ಎಂದು ಕೇಳಿ, ಪರಿಶಿಷ್ಟ ಜಾತಿಗೆ ಸೇರಿದ್ದರೆ ಅವರ ಮಾಹಿತಿ ಕಲೆ ಹಾಕಬೇಕು. ಕೆಲವು ಗಣತಿದಾರರು ಪ್ರಾಮಾಣಿಕವಾಗಿ ತಮಗೆ ವಹಿಸಿದ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ಗಣತಿದಾರರು ಒಳಮೀಸಲಾತಿ ಸಮೀಕ್ಷೆ ಎನ್ನುವ ಬದಲು ಜಾತಿಗಣತಿ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಇದನ್ನು ಸರಿಪಡಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅನಕ್ಷರಸ್ಥರು ಬಹಳ ಮಂದಿ ಇದ್ದಾರೆ. ಅವರಿಗೆ ಒಳಮೀಸಲಾತಿ ಸಮೀಕ್ಷೆ ಬಗ್ಗೆ ತಿಳಿದಿರುವುದಿಲ್ಲ.
ಒಳಮೀಸಲಾತಿ ಸಮೀಕ್ಷೆ ಬಗ್ಗೆ ತಿಳಿ ಹೇಳಿ ಗಣತಿದಾರರು ಅವರಿಂದ ಮಾಹಿತಿ ಸಂಗ್ರಹಿಸಬೇಕು. ಆಯಾ ಸಮಾಜದ ಮುಖಂಡರು ಗಣತಿದಾರರೊಂದಿಗೆ ತೆರಳಿ ಅವರ ಕುಟುಂಬದ ಸಂಪೂರ್ಣ ಮಾಹಿತಿ ನೀಡುವ ಕೆಲಸ ಮಾಡಬೇಕು. ಗಣತಿದಾರರು ಕೂಡ ಯಾವುದೇ ತಪ್ಪು ಮಾಹಿತಿ ಸಂಗ್ರಹಿಸದೆ ನಿಖರ ಮಾಹಿತಿ ಸಂಗ್ರಹಿಸಲು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ.
ಪಡಿತರ ಚೀಟಿಯಲ್ಲಿ (ಕುಟುಂಬ ಡೇಟಾಬೇಸ್) ಹೆಸರು ಇಲ್ಲದಿದ್ದರೆ ಪ್ರತಿ ಕುಟುಂಬದಲ್ಲಿ ಹೆಚ್ಚುವರಿಯಾಗಿ ಇಬ್ಬರನ್ನಷ್ಟೇ ಸೇರಿಸಲು ಅವಕಾಶವಿದೆ. ಬಹಳಷ್ಟು ಕುಟುಂಬಗಳಲ್ಲಿ ಸಣ್ಣ ಮಕ್ಕಳನ್ನು ಇನ್ನೂ ಪಡಿತರ ಚೀಟಿಗೆ ಸೇರಿಸಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣು ಮಕ್ಕಳ ಹೆಸರೂ ಚೀಟಿಯಲ್ಲಿ ಇಲ್ಲ. ಅಂತಹವರ ಹೆಸರು ಮತ್ತು ವಿವರಗಳನ್ನು ಸಮೀಕ್ಷೆಯಲ್ಲಿ ಕಲೆ ಹಾಕಲು ಆಗುತ್ತಿಲ್ಲ. ಇದು ಗಂಭೀರವಾದ ಸಮಸ್ಯೆ ಆಗಿದ್ದು, ತಕ್ಷಣವೇ ಇದನ್ನು ಸರಿಪಡಿಸಬೇಕು.
ಅಲ್ಲದೇ ಮೇ.5 ರಿಂದ ಮೇ.17 ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸಮಸ್ಯೆಗಳು ಉದ್ಭವಿಸಿರುವುದರಿಂದ ಸಮೀಕ್ಷೆಯಿಂದ ಎಷ್ಟೋ ಕುಟುಂಬಗಳು ಹೊರ ಉಳಿಯುತ್ತವೆ. ಹೀಗಾಗಿ ಸಮೀಕ್ಷೆ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಕೋರಿದ್ದಾರೆ.