ದಾವಣಗೆರೆ.ಡಿ.16 : ಕಾರ್ತಿಕ ಮಾಸದಲ್ಲಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಉಮಾ ಮಹೇಶ್ವರ ಜಾತ್ರೆ ನಡೆಯುವುದು ಸಾಮಾನ್ಯ, ಆದರೆ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಹರಕೆ ಹೊತ್ತ ಸಾವಿರಾರು ಯುವಕರು ಉರುಳು ಸೇವೆ ಮಾಡುವುದು ಹಬ್ಬದ ವಿಶೇಷಗಳಲ್ಲಿ ಒಂದಾಗಿದೆ.
ಮೂರು ದಿನಗಳ ಕಾಲ ನಡೆಯುವ ಈ ಅದ್ದೂರಿ ಜಾತ್ರೆಯಲ್ಲಿ ಅಬಾಲ ವೃದ್ಧರಾದಿಯಾಗಿ ಗ್ರಾಮದ ದೇವಸ್ಥಾನ ರಸ್ತೆಯಲ್ಲಿ ಉರುಳು ಸೇವೆ ಮಾಡುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಮಾಗಿಯ ಚಳಿಯನ್ನು ಲೆಕ್ಕಿಸದೇ ಮಂಗಳವಾರ ಮುಂಜಾನೆ ಸಾವಿರಾರು ಯುವಕರು ಉರಳು ಸೇವೆ ಹರಕೆ ತೀರಿಸಿದರು.
ಶೈಕ್ಷಣಿಕ ಪ್ರಗತಿ, ಮದುವೆ, ಆರೋಗ್ಯ ಸಮಸ್ಯೆ ನಿವಾರಣೆ ಮತ್ತಿತರೆ ಹರಕೆ ಹೊತ್ತು, ಓಂ ನಮಃ ಶಿವಾಯ ಎಂಬ ಉದ್ಗಾರದೊಂದಿಗೆ ಸುಮಾರು ಅರ್ಧ ಮೈಲಿವರೆಗೆ ಉರುಳುಸೇವೆ ಮಾಡಿ ಭಕ್ತಿ ಮೆರೆದರು.
ಇವರ ಹಾದಿ ಯುದ್ದಕ್ಕೂ ಹೆಣ್ಣು ಮಕ್ಕಳು ಬಿಂದಿಗೆಗಳಿಂದ ಹೊತ್ತು ತಂದ ನೀರೆರೆದರು. ಹೊರವಲಯದ ಉಮಾಮಹೇಶ್ವರ ಸ್ವಾಮಿ ಗದ್ದುಗೆ ಸ್ಥಳವನ್ನು ನೆರಕೆ-ಬಟ್ಟೆಗಳಿಂದ ಸಿಂಗರಿಸಿ, ಉತ್ಸವಮೂರ್ತಿಗಳನ್ನು ಕೂರಿಸಲಾಗಿತ್ತು. ವಿವಿಧೆಡೆಯ ನೂರಾರು ಭಕ್ತರು ದೇವರ ದರ್ಶನ ಪಡೆದರು.ಉಮಾ ಮಹೇಶ್ವರ ಜಾತ್ರೆಗೆ ಶತಮಾನಕ್ಕೂ ಹಿಂದಿನ ಇತಿಹಾಸವಿದೆ.
ಸೋಮವಾರ ಸಂಜೆ ಶಿರಮಗೊಂಡನಹಳ್ಳಿಯ ಶ್ರೀ ಚನ್ನಬಸವೇಶ್ವರ ಸ್ವಾಮಿಯನ್ನು ಸ್ವಾಗತಿಸಿ, ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಆಂಜನೇಯ ಸ್ವಾಮಿ ಮೂರ್ತಿಗಳನ್ನೂ ಪಲ್ಲಕ್ಕಿಯಲ್ಲಿರಿಸಿ, ಮಹೇಶ್ವರ ಸ್ವಾಮಿ ಗದ್ದುಗೆ ಸ್ಥಳದವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ನಾಗನೂರು ಮತ್ತು ಶಿರಮಗೊಂಡನಹಳ್ಳಿ ಉಭಯ ಗ್ರಾಮಗಳ ಭಕ್ತಾದಿಗಳು ಜಾತ್ರೆಯನ್ನು ನಡೆಸುವುದು ಪದ್ಧತಿಯಾಗಿದೆ.
3 ದಿನಗಳ ಕಾಲ ನಡೆಯಲಿರುವ ಜಾತ್ರೆಗಾಗಿ ನಾಗನೂರು ಗ್ರಾಮವನ್ನು ತಳಿರು ತೋರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಬಣ್ಣದ ಬಂಟಿಂಗ್ಸ್‌ಗಳು, ಸ್ವಾಗತ ಕಮಾನುಗಳು, ದೇವಸ್ಥಾನದ ಹೊರಗೆ ಹೂವಿನಲಂಕಾರದ ಆಕರ್ಷಣೆ ಮಾಡಲಾಗಿತ್ತು. ಭಕ್ತಾದಿಗಳ ಉರುಳು ಸೇವೆಯ ನಂತರ ಸ್ವಾಮಿಯನ್ನು ನಡೆ ಮಡಿಯಿಂದ ತೋಟದ ಮಠಕ್ಕೆ ಕರೆದೊಯ್ಯಲಾಯಿತು.
Read also : ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಎಸ್ಸೆಸ್ ಗೆ ಸಂತಾಪ
ನಂತರ ಗಂಗಾಪೂಜೆ ನಡೆಸಿ ಪ್ರಸಾದ ವಿನಿಯೋಗ ಜರುಗಿತು. ಜಾತ್ರೆಯಲ್ಲಿ ತಯಾರಿಸುವ ಸಾತ್ವಿಕ ಆಹಾರವಾದ ಅನ್ನ, ಬೆಲ್ಲ, ಹಾಲು, ಬಾಳೆಹಣ್ಣಿನ ಪ್ರಸಾದವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು. ಮಧ್ಯಾಹ್ನ ಬೆಲ್ಲದ ಬಂಡಿ ಎತ್ತುಗಳನ್ನು ಡೊಳ್ಳು-ಹಲಗೆ ಮೆರವಣಿಗೆ ಮತ್ತು ರಾತ್ರಿ 7 ರಿಂದ ಶ್ರೀ ದುರುಗಮ್ಮನ ಕಾರ್ತಿಕೋತ್ಸವ ಜರುಗಿತು.
ಡಿ. 17ರ ಇಂದು ಬೆಳಿಗ್ಗೆ 8 ರಿಂದ 3 ಗಂಟೆಯವರೆಗೆ ಮಠದಲ್ಲಿ ಪ್ರಸಾದ ವಿನಿಯೋಗ, ಮಧ್ಯಾಹ್ನ ಎತ್ತುಗಳ ಮೆರವಣಿಗೆ, ಸಂಜೆ ಮುಡುಪು, ಹರಕೆಯನ್ನು ತೋಟದ ಮಠಕ್ಕೆ ಮೆರದಣಿಗೆ ಮುಖಾಂತರ ಅರ್ಪಿಸುವುದು ಮತ್ತು ಮಠದ ಗದ್ದಿಗೆಯಿಂದ ಸ್ವಾಮಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿಯ ಮೆರವಣಿಗೆಯೊಂದಿಗೆ ಊರೊಳಗೆ ಬರಮಾಡಿಕೊಳ್ಳುವುದು. ನಂತರ ಬಾವುಟ ಹರಾಜು ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
