ದಾವಣಗೆರೆ (Davanagere): ಜಿಲ್ಲೆಯ ಜಗಳೂರು ತಾಲ್ಲೂಕು ಬಿಳಿಚೋಡು ಸಮೀಪದ ಮುಗಿದರಾಗಿಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದ ವೇಳೆ ಸುಮಾರು 11 ಮನೆ ಕಳ್ಳತನವಾಗಿರುವ ಘಟನೆ ನಡೆದಿದೆ.
ಮದುವೆಗೆ ಊರಿನ ಎಲ್ಲಾ ಮನೆಯವರನ್ನು ಸೇರಿದಂತೆ ಸಂಬಂಧಿಕರನ್ನು ಆಹ್ವಾನಿಸಿದ್ದರು. ಗ್ರಾಮದ ಬಹಳಷ್ಟು ಮನೆಯವರು ಕುಟುಂಬ ಸಮೇತರಾಗಿ ಮನೆಗಳಿಗೆ ಬೀಗ ಹಾಕಿ ಮದುವೆಗೆ ತೆರಳಿದ ಈ ಘಟನೆ ನಡೆದಿದೆ. ಮನೆಯಲ್ಲಿ ಇರುವಂತ ಬಂಗಾರದ ಆಭರಣಗಳು, ಬೆಳ್ಳಿ ಒಡವೆಗಳು ನಗದು ದೋಚಿದ್ದಾರೆ. ಹಾಗೂ ಹೆಣ್ಣು ಮಕ್ಕಳು ಆಪತ್ಕಾಲಕ್ಕೆ ಹಣ ಕೂಡಿಡುವ ‘ದಬ್ಬೇಗಡಿಗಿ’ಯನ್ನು ಅಪಹರಿಸಿದ್ದಾರೆ.
ರಾಧಮ್ಮ, ಅನಿತಾ, ಅಂಜಿನಪ್ಪ, ಸುರೇಶ್, ಹನುಮಂತಪ್ಪ, ಚೌಡಮ್ಮ ಎನ್ನುವವರ ಮನೆಗಳು ಸೇರಿದಂತೆ ಒಟ್ಟು 11 ಮನೆಗಳನ್ನು ದೋಚಿದ್ದಾರೆ. ಅಲ್ಲದೇ ದಾವಣಗೆರೆ ತಾಲೂಕಿನ ಎಲೆ ಬೇತೂರು ಗ್ರಾಮದಲ್ಲಿ ಮದುವೆಗೆಂದು ಇಟ್ಟಿದ್ದ ಮದುಮಗಳ ಒಡವೆಗಳನ್ನು ಕದ್ದಿದ್ದಾರೆ. ಆಭರಣಗಳನ್ನು ಕಳೆದುಕೊಂಡ ತಂದೆ ತಾಯಿಗಳು ಕಣ್ಣೀರಿಟ್ಟಿದ್ದಾರೆ.
ಬಿಳಿಚೋಡು ಪೊಲೀಸ್ ಠಾಣೆ ಮತ್ತು ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.