ದಾವಣಗೆರೆ: ಯುವಜನೋತ್ಸವ ನಗರ ಪ್ರದೇಶಕ್ಕೆ ಸೀಮಿತವಾಗುವುದಕ್ಕಿಂತ ಅತೀ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾ ವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ವಿಜ್ಞಾನಾಸಕ್ತರ ಬಳಗದ ಆಶ್ರಯದಲ್ಲಿ ನಡೆದ ದಾವಣಗೆರೆ ಜಿಲ್ಲಾ ಮಟ್ಟದ ಯುವಜನೋತ್ಸವ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸುವುದರಿಂದ ಕೋಲಾಟ, ಬಯಲಾಟ, ಸಣ್ಣಾಟ, ದೊಡ್ಡಾಟ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಶಿಲ್ಪಕಲೆ ಸೇರಿದಂತೆ ಜಾನಪದ ಕಲೆಗಳು ಅನಾವರಣಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕೆಂದರು.
ಯುವಜನರು ಮನಸ್ಸು ಮಾಡಿದರೆ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಆದರೆ ಪ್ರಸ್ತುತ ಮೊಬೈಲ್ ಗೀಳಿಗೆ ದಾಸರಾಗಿ ಸಾಧನೆಗಳು, ಜಾನಪದ ಕಲೆಗಳು, ಕಮರಿ ಹೋಗುತ್ತಿವೆ. ಮಕ್ಕಳು ಮತ್ತು ಯುವಜನತೆ ಪುಸಕ್ತಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಲೆ ತೆಗ್ಗಿಸಿ ಮೊಬೈಲ್ ನೋಡಿದರೆ ವ್ಯಕ್ತಿತ್ವ, ಸಮಯ ವ್ಯರ್ಥ, ಭವಿಷ್ಯದಲ್ಲಿ ಕಾಣುವ ಕನಸುಗಳು, ಸಾಧನೆಗಳು ಕಮರಿ, ಸಮಾಜದಲ್ಲಿ ತಲೆ ತಗ್ಗಿಸಿ ಓಡಾಡುವಂತೆ ಮಾಡುತ್ತದೆ. ಅದೇ ತಲೆ ತಗ್ಗಿಸಿ ಪುಸ್ತಕ ಓದಿದರೆ ಜ್ಞಾನ ವೃದ್ಧಿಯಾಗಿ ಸಾಧನೆಗಳನ್ನು ಮಾಡುವ ಜೊತೆಗೆ ನೀವು ತಲೆ ಎತ್ತಿ ಜಗತ್ತು ನೋಡುವಂತೆ ಮಾಡುತ್ತದೆ. ಹೀಗಾಗಿ ಯುವಜನತೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
Read also : ಮದ್ಯ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ನ್ಯಾ. ಮಹಾವೀರ ಮ. ಕರೆಣ್ಣವರಿಂದ ಚಾಲನೆ
ಯುವಜನೋತ್ಸವ ಆಚರಿಸಲು ಸರ್ಕಾರ ಲಕ್ಷಾಂತರ ರೂಪಾಯಿ ಹಣವನ್ನು ನೀಡುತ್ತದೆ. ಆದರೆ ಈ ಹಿಂದೆ ನಡೆದಂತಹ ಯುವಜನೋತ್ಸವಗಳು ಯುವಜನತೆ ಒಳಗೊಳ್ಳುವ ಕಾರ್ಯಕ್ರಮವಾಗದೇ ಆಯೋಜಕರು ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಆ ರೀತಿ ಆಗಬಾರದು. ಸರ್ಕಾರ ಯಾವ ಉದ್ದೇಶಕ್ಕೆ ನೀಡುತ್ತದೆಯೋ ಆ ಹಣ ಕಾರ್ಯಕ್ರಮಕ್ಕೆ ವಿನಿಯೋಗವಾದರೆ ಯುವಜನೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಂಬಾರ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಮಾಗನಹಳ್ಳಿ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.
ಯುವಜನೋತ್ಸವ ನಿರುತ್ಸಾಹಕರಾಗಿರುವ ಯುವಜನತೆಯನ್ನು ಬಡಿದೆಬ್ಬಿಸಬೇಕೇ ಹೊರತು, ಕಾಟಾಚಾರದ ಕಾರ್ಯಕ್ರಮವಾಗಿ ಸರ್ಕಾರದ ಹಣ ಪೋಲಾಗುವಂತೆ ಆಗಬಾರದು. ಈ ಹಿಂದೆ ಹಣ ಪೋಲು ಮಾಡುವಂತಹ ಕಾರ್ಯಕ್ರಮಗಳು ನಡೆದಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು.
– ಕೆ.ಎಸ್.ಬಸವಂತಪ್ಪ, ಶಾಸಕರು, ಮಾಯಕೊಂಡ.