ಹರಿಹರ: ಒಳ ಮೀಸಲಾತಿಯ ಪೂರ್ಣ ಲಾಭ ಪಡೆದುಕೊಳ್ಳಲು ಮಾದಿಗ ಸಮುದಾಯದ ಯುವಜನರಲ್ಲಿ ಜ್ಞಾನದ ಗ್ರಹಿಕೆಯ ಶಕ್ತಿ ಬೆಳೆಸುವುದು ಮುಖ್ಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ಮಾನವ ಬಂಧುತ್ವ ವೇದಿಕೆ, ಡಾ.ಬಾಬು ಜಗಜೀವನ್‍ರಾಮ್ ಆದಿ ಜಾಂಬವ ಯುವ ಬ್ರಿಗೇಡ್, ಕರ್ನಾಟಕರಾಜ್ಯ ಮಾದಿಗ ಪ್ರೊಪೆಸರ್ಸ್ ಪೋರಂ, ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ನಗರದ ಮೈತ್ರಿವನದಲ್ಲಿ ರಾಜ್ಯ ಮಟ್ಟದ ಮಾದಿಗ ಪ್ರಾಧ್ಯಾಪಕರ 2ನೇ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
35 ವರ್ಷಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ದೊರೆಯುತ್ತಿದೆ, ಈ ಮೀಸಲಾತಿಯನ್ನು ಉಪಯೋಗಿಸಿಕೊಂಡು, ಸಮುದಾಯವನ್ನು ಮುಖ್ಯವಾಹಿನಿಗೆ ತಲುಪಿಸುವ ಶಕ್ತಿ ಇರುವ ಮಾದಿಗ ಸಮುದಾಯದ ಯುವಜನರಲ್ಲಿ ಜ್ಞಾನದಗ್ರಹಿಕೆಯ ಶಕ್ತಿ ಇದೆಯೆ ಎಂಬುದನ್ನು ಪರಿಶೀಲಿಸಿದರೆ ನಿರಾಶೆ ಎದುರಾಗುತ್ತದೆ ಎಂದರು.
ಮಾದಿಗ ಸಮುದಾಯದ ಕೆಲವರು ವಿಶ್ವವಿದ್ಯಾನಿಲಯದ ಕುಲಪತಿ, ಡೀನ್, ಪ್ರೊಫೆಸರ್ ಆಗುವುದರಿಂದ ಬದಲಾವಣೆ ಆಗಲ್ಲ, ನಮ್ಮ ಸಮುದಾಯದ ಯುವಜನರಲ್ಲಿ ಈಗಿನ ಕಾಲಮಾನದ ತಂತ್ರಜ್ಞಾನದ ಜ್ಞಾನ ಪಡೆಯಲು ಸಿದ್ಧಗೊಳಿಸುವುದು ಮುಖ್ಯ. ಯುವಜನರಲ್ಲಿ ಗ್ರಹಿಕೆಯ ಶಕ್ತಿ ವೃದ್ಧಿಸುವ ಜವಾಬ್ದಾರಿ ಸಮುದಾಯದ ಜ್ಞಾನವಂತರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಸಂವಿಧಾನಕ್ಕೆ, ನ್ಯಾಯಾಲಯಕ್ಕೆ ಅಥವಾ ಕೇಂದ್ರ ಸರ್ಕಾರಕ್ಕಾಗಲಿ ಇಲ್ಲವೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಕೆಲವರು ಬಿತ್ತಿದರು, ಆದರೂ ಕೂಡಛಲ ಬಿಡದೆ ಸತತವಾಗಿ ಶ್ರಮಿಸಿದ ಫಲವಾಗಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯವು ಐತಿಹಾಸಿಕ ಹಾಗೂ ಸಾಮಾಜಿಕ ನ್ಯಾಯದ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗಿ, ಗುರಿತಲುಪಲು ಸಾಧ್ಯವಾಯಿತು ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಶೋಷಿತರ ಹಿಂದುಳಿಯುವಿಕೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ, ಬ್ರಾಹ್ಮಣ್ಯ ಮಾನಸಿಕತೆಯವರು ನಮ್ಮನ್ನು ಆದಾಯ ಹೀನ ವೃತ್ತಿಗೆ ಸೀಮಿತಗೊಳಿಸಿದರು, ಊರಾಚೆ ವಾಸಕ್ಕೆ ತಳ್ಳಿ, ದಾಸ್ಯದ ಬದುಕು ನೀಡಿದರು, ಇದನ್ನೆ ನಾವು ಭಾರತದ್ದು ಶ್ರೀಮಂತ, ವಿಶಿಷ್ಟ ಸಂಸ್ಕøತಿ ಎಂದು ಬೆನ್ನು ತಟ್ಟಿಕೊಳ್ಳುವುದು ಸರಿಯೆ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ಸಿಕ್ಕಿದೆ ಎಂದು ನಾವು ಸಂಭ್ರಮದಲ್ಲಿ ಭ್ರಮಾ ಲೋಕದಲ್ಲಿ ತೇಲುವಂತಿಲ್ಲ, ಸಂವಿಧಾನವನ್ನು ಬದಲಿಸುತ್ತೇವೆ ಎನ್ನುತ್ತಾ ಸಂವಿಧಾನವನ್ನು ಸುಡುವ, ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎನ್ನುವ ಬ್ರಾಹ್ಮಣ್ಯ ಮಾನಸಿಕತೆಯ ಅಪಾಯಗಳನ್ನು ನಾವು ಎದುರಿಸಬೇಕಾಗಿದೆ ಎಂಬುದನ್ನು ಸ್ಮರಣೆಯಲ್ಲಿಟ್ಟುಕೊಳ್ಳಬೇಕೆಂದರು.
Read also : ಯಾದವ, ವಾಲ್ಮೀಕಿ, ಕುರುಬ ಸೇರಿ ಇತರೆ ಸಮಾಜಗಳು ಇಂದಿಗೂ ಹಿಂದುಳಿದ ವರ್ಗಗಳಾಗಿವೆ: ಜಿ. ಬಿ. ವಿನಯ್ ಕುಮಾರ್ ಬೇಸರ
ಹುಬ್ಬಳ್ಳಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಡಾ.ಬಾಬು ಜಗಜೀವನ್ ರಾಮ್‍ಕರ್ನಾಟಕ ಆದಿ ಜಾಂಬವ ಯುವ ಬ್ರೀಗೆಡ್ ಸಂಸ್ಥಾಪಕ ಏಳುಕೋಟೆಪ್ಪ ಎಸ್. ಪಾಟೀಲ್, ಗುಲ್ಬರ್ಗ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಡಿ.ಕಟ್ಟಿಮನಿ, ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅಜಿತ ಮ್ಯಾಗಡಿ ಮಾತನಾಡಿದರು.
ಅರುಣ್‍ಕುಮಾರ್ ಕ್ರಾಂತಿಗೀತೆ ಹಾಡಿದರು, ಪ್ರೊ. ಶಿವಶರಣ ಸಿ.ಟಿ. ಸ್ವಾಗತಿಸಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕ ಪಕ್ಕೀರೇಶ್ ಹಳ್ಳಳ್ಳಿ ನಿರೂಪಿಸಿದರು.