ಮೊನ್ನೆ ಮೊನ್ನೆಯವರೆಗೆ ಕೂಲ್ ಆಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದೀಗ ಹರಹರ ಮಹಾದೇವ್ ಅಂತ ಅಬ್ಬರಿಸಿ ಕೈ ಪಾಳಯವನ್ನು ಬೆಚ್ಚಿ ಬೀಳಿಸಿದ್ದಾರೆ.
ಸಂಡೂರು,ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆಗಳು ಘೋಷಣೆಯಾದಾಗ ಸಹಜವಾಗಿಯೇ ಕಾಂಗ್ರೆಸ್ ಸೈನ್ಯ ಮುಂದಿರುವಂತೆ ಕಾಣಿಸುತ್ತಿತ್ತು. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಸ್ಪರ್ಧಿಸಿದ ಕಾಂಗ್ರೆಸ್ ನ ಅನ್ನಪೂರ್ಣ ಗೆಲ್ಲುತ್ತಾರೆ ಅನ್ನಲು ಹಲವು ಸಾಕ್ಷ್ಯಾಧಾರಗಳು ಕಂಡಿದ್ದವು.
ಮೊದಲನೆಯದಾಗಿ ಸಂಸದ ತುಕಾರಾಂ ಅವರ ಪತ್ನಿ ಎಂಬುದು ಅನ್ನಪೂರ್ಣ ಅವರ ಪ್ಲಸ್ ಪಾಯಿಂಟ್ ಆಗಿ ಕಾಣಿಸುತ್ತಿತ್ತು.ಎರಡನೆಯದಾಗಿ ಸಚಿವ ಸಂತೋಷ್ ಲಾಡ್ ಅವರಿಗೆ ಕ್ಷೇತ್ರದ ಮೇಲಿರುವ ಹಿಡಿತ ಅನ್ನಪೂರ್ಣ ಅವರ ಖಾತೆಗೆ ಕ್ರೆಡಿಟ್ ಆಗುವುದು ಸ್ಪಷ್ಟವಾಗಿತ್ತು. ಮೂರನೆಯದಾಗಿ ಬಿಜೆಪಿ ಪಾಳಯದ ಅನೈಕ್ಯತೆ ಕೈ ಪಾಳಯಕ್ಕೆ ಮತ್ತಷ್ಟು ಅನುಕೂಲಕರವಾಗಿ ಕಾಣಿಸಿತ್ತು.
ಹೀಗೆ ಯಾವ ಕಡೆಯಿಂದ ನೋಡಿದರೂ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲಗಳೇ ಹೆಚ್ಚಾಗಿ ಕಾಣಿಸುತ್ತಿದ್ದುದರಿಂದ ಸಂಡೂರಿನಲ್ಲಿ ಕೈ ನಿರಾಯಾಸವಾಗಿ ದಿಗ್ವಿಜಯ ಸಾಧಿಸಲಿದೆ ಎಂಬ ವಾತಾವರಣ ಕಾಣಿಸುತ್ತಿತ್ತು. ಅದರೆ ಕಳೆದ ನಾಲ್ಕೈದು ದಿನಗಳಲ್ಲಿ ಪರಿಸ್ಥಿತಿ ಯಾವ ಲೆವೆಲ್ಲಿಗೆ ಬದಲಾಗಿದೆ ಎಂದರೆ ಕಾಂಗ್ರೆಸ್ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ನಿಕ್ಕಿಯಾಗಿದೆ.
ಹಾಗಂತ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಕಾಂಗ್ರೆಸ್ಸಿನ ಅನ್ನಪೂರ್ಣ ಅವರಿಗಿಂತ ಮುಂದಿದ್ದಾರೆ ಅಂತ ಅರ್ಥವಲ್ಲ.ವಸ್ತುಸ್ಥಿತಿ ಎಂದರೆ ಈ ಕ್ಷಣಕ್ಕೂ ಕಾಂಗ್ರೆಸ್ ನ ಅನ್ನಪೂರ್ಣ ಅವರೇ ರೇಸಿನಲ್ಲಿ ಮುಂದಿದ್ದಾರೆ. ಆದರೆ, ಒಂದು ವಾರದ ಮುಂಚೆ ಎದುರಾಳಿ ಬಂಗಾರು ಹನುಮಂತು ಅನ್ನಪೂರ್ಣ ಅವರ ಹತ್ತಿರದಲ್ಲೆಲ್ಲೂ ಕಾಣಿಸುತ್ತಿರಲಿಲ್ಲ.ಆದರೆ ಇದೀಗ ಅವರು ಅನ್ನಪೂರ್ಣ ಅವರ ಪಕ್ಕದಲ್ಲೇ ಕಾಣಿಸುತ್ತಿದ್ದಾರೆ.
ಹೀಗೆ ರೇಸಿನಲ್ಲಿ ಬಂಗಾರು ಹನುಮಂತು ವೇಗ ಪಡೆದಿದ್ದರೆ ಅದಕ್ಕೆ ಗಾಲಿ ಜನಾರ್ಧನರೆಡ್ಡಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಣ.
ಇವತ್ತು ಈ ಮೂವರು ನಾಯಕರು ಸೇರಿ ಬಂಗಾರು ಹನುಮಂತು ಅವರಿಗೆ ಯಾವ ಮಟ್ಟಿನ ಪವರ್ ತುಂಬಿದ್ದಾರೆ ಎಂದರೆ ಕೈ ಪಾಳಯ ಸ್ವಲ್ಪ ಮೈ ಮರೆತರೂ ಬಂಗಾರು ಹನುಮಂತು ಮ್ಯಾಚ್ ಫಿನಿಷ್ ಮಾಡಲಿದ್ದಾರೆ. ಅಂದ ಹಾಗೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಜನಾರ್ಧನರೆಡ್ಡಿ ಅವರಿಗೆ ಯಾಕೆ ಮುಖ್ಯವೆಂದರೆ ಬಳ್ಳಾರಿ ಸಾಮ್ರಾಜ್ಯವನ್ನು ಮರುವಶ ಮಾಡಿಕೊಳ್ಳಲು ಇದು ಅವರಿಗೆ ಮೊದಲ ಹೆಜ್ಜೆ.
ಈ ದಿಸೆಯಲ್ಲಿ ಲಿಂಗಾಯತ ಮತ್ತು ವಾಲ್ಮೀಕಿ ಮತಗಳನ್ನು ಕನ್ ಸಾಲಿಡೇಟ್ ಮಾಡುವುದು ಎಷ್ಟು ಮುಖ್ಯ ಎಂಬುದು ರೆಡ್ಡಿಯವರಿಗೆ ಗೊತ್ತು.ಹೀಗಾಗಿ ಲಿಂಗಾಯತರನ್ನು ಕ್ರೋಢೀಕರಿಸಲು ನೆರವು ನೀಡುವಂತೆ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಕನ್ವಿನ್ಸು ಮಾಡಿದ್ದಾರೆ.
ಉಳಿದಂತೆ ವಾಲ್ಮೀಕಿ ಮತಗಳನ್ನು ಕನ್ ಸಾಲಿಡೇಟ್ ಮಾಡುವಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಹೇಳಿದ್ದಾರಾದರೂ ಆಳದಲ್ಲಿ ದಿವಾಕರ್ ಎಂಬ ಸೇನಾಪತಿಯ ಮೂಲಕ ಆ ಕೆಲಸವನ್ನು ಮಾಡಿಸುತ್ತಿದ್ದಾರೆ.
Read also : ಅಟ್ಟದ ಮೇಲೆ ಕೂರುತ್ತಾರಾ ಸಂತೋಷ್?
ಇನ್ನು ಹೇಳಿ ಕೇಳಿ ಉಪಚುನಾವಣೆಯ ಕಣದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುವುದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅನಿವಾರ್ಯ. ಯಾಕೆಂದರೆ ಉಪಚುನಾವಣೆಯ ಕಣದಲ್ಲಿ ಅವರು ಲಿಂಗಾಯತ ಕಾರ್ಡನ್ನು ಸಮರ್ಪಕವಾಗಿ ಬಳಸದಿದ್ದರೆ ಬಿಜೆಪಿ ಹೈಕಮಾಂಡ್ ಗೆ ಬೆಗೆಟೀವ್ ಸಂದೇಶ ಹೋಗುತ್ತದೆ.
ಅಷ್ಟೇ ಅಲ್ಲ,ತಮ್ಮನ್ನು ಕೆಳಗಿಳಿಸಲು ಟಾರ್ಗೆಟ್ ಡಿಸೆಂಬರ್ ಪ್ರೋಗ್ರಾಮು ಹಾಕಿಕೊಂಡಿರುವ ತಮ್ಮ ವಿರೋಧಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.ಇದೇ ಕಾರಣಕ್ಕಾಗಿ ಉಪಸಮರವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ತಮಗೆ ಆಪ್ತರಾದ ಎಮ್ಮೆಲ್ಸಿ ಸತೀಶ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಡೂರಿನ ಲಿಂಗಾಯತ ಕೋಟೆಗೆ ಲಗ್ಗೆ ಹಾಕಿದ್ದಾರೆ.
ಅಷ್ಟೇ ಅಲ್ಲ,ಕ್ಷೇತ್ರದಲ್ಲಿರುವ ಸಣ್ಣ-ಸಣ್ಣ ಜಾತಿಗಳ ಮತಗಳನ್ನು ಕ್ರೋಢೀಕರಿಸುವ ಟೆಕ್ನಿಕ್ಕನ್ನು ತುಂಬ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಇದಿಷ್ಟೇ ಅಲ್ಲದೆ ವಕ್ಪ್ ಭೂಮಿಯ ವಿವಾದವನ್ನು ಬಳಸಿಕೊಂಡು ಹಿಂದೂ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಿದ್ದಾರೆ.ಪರಿಣಾಮ?ಮೊನ್ನೆ ಮೊನ್ನೆಯವರೆಗೂ ರೇಸಿನಲ್ಲಿ ಹಿಂದಿದ್ದ ಬಂಗಾರು ಹನುಮಂತು ಈಗ ಕಾಂಗ್ರೆಸ್ ಅಭ್ಯರ್ಥಿಯ ಹಿಂದೆಯೇ ಕಾಣಿಸುತ್ತಿದ್ದಾರೆ.
ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಮುಂದಿದ್ದಾರೆ (Political analysis)
ಇನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮುಂದಿದ್ದಾರೆ. ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೈಯ್ಯದ್ ಯಾಸ್ಮೀನ್ ಖಾನ್ ಪಠಾಣ್ ಅವರು ಪ್ರಬಲ ಪೈಪೋಟಿ ನೀಡುತ್ತಿರುವುದು ನಿಜವಾದರೂ ಭರತ್ ಬೊಮ್ಮಾಯಿ ಮುಂದಿದ್ದಾರೆ ಎನ್ನಲು ಹಲವು ಸಾಕ್ಷ್ಯಾಧಾರಗಳು ಕಾಣಿಸುತ್ತಿವೆ.
ಮೊದಲನೆಯದಾಗಿ,ಕ್ಷೇತ್ರದ ಹಿಂದೂ ಮತಗಳನ್ನು ಕನ್ ಸಾಲಿಡೇಟ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದರ ಈ ಯಶಸ್ಸಿಗೆ ಎರಡು ಮುಖಗಳಿವೆ.ಮೊದಲನೆಯದಾಗಿ ರೈತರ ಭೂಮಿಯ ಮೇಲೆ ವಕ್ಪ್ ಮುಗಿ ಬೀಳುತ್ತಿದೆ ಎಂಬ ಮಾತು ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಹಿಂದೂ ಮತಗಳು ಕನ್ ಸಾಲಿಡೇಟ್ ಆಗುತ್ತಿವೆ.ಎರಡನೆಯದಾಗಿ ಕಾಂಗ್ರೆಸ್ ಅಭ್ಯರ್ಥಿ ಮುಸ್ಲಿಂ ಎಂಬ ಕಾರಣಕ್ಕಾಗಿ ಪಂಚಮಸಾಲಿ ಲಿಂಗಾಯತರು ಸೇರಿದಂತೆ ಹಲವು ಜಾತಿಗಳ ಮತದಾರರು ಒಗ್ಗೂಡುತ್ತಿದ್ದಾರೆ.
ಇನ್ನು ಶುರುಶುರುವಿನಲ್ಲಿ ಯಡಿಯೂರಪ್ಪ ಗ್ಯಾಂಗು ಬಸವರಾಜ ಬೊಮ್ಮಾಯಿ ಅವರಿಂದ ಅಂತರ ಕಾಪಾಡಿಕೊಳ್ಳುತ್ತಿರುವಂತೆ ಭಾಸವಾಗಿತ್ತು ಆದರೆ ಉಪಚುನಾವಣೆಯ ಕಣದಲ್ಲಿ ಒಂದಕ್ಕಿಂತ ಹೆಚ್ಚು ಸೀಟು ಗೆದ್ದರೆ, ತಮ್ಮ ನಾಯಕತ್ವಕ್ಕೆ ಶಕ್ತಿ ಸಿಗುತ್ತದೆ ಎಂಬ ಲೆಕ್ಕಾಚಾರಕ್ಕೆ ಬಂಸಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಈ ವಿಷಯದಲ್ಲಿ ತಮಗಿರುವ ಕಿಚಿಪಿಚಿಯನ್ನು ತತ್ಕಾಲಕ್ಕಾದರೂ ಮರೆತಿರುವಂತೆ ಕಾಣಿಸುತ್ತಿದೆ.
ಹೀಗಾಗಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಅವರು ತಮ್ಮ ಪಾಲಿನ ಶ್ರಮ ಹಾಕುತ್ತಿದ್ದಾರೆ. ಇನ್ನು ಕ್ಷೇತ್ರದ ಸರ್ವ ಸಮುದಾಯಗಳ ಜತೆ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ಆತ್ಮೀಯತೆ ಇದೆ. ಮತ್ತು ಈ ಕಾರಣಕ್ಕಾಗಿಯೇ ಅವರನ್ನು ನಿರ್ದಿಷ್ಟ ಜಾತಿ, ಸಮುದಾಯಗಳ ವಿರೋಧಿ ಎಂದು ಹಣೆಪಟ್ಟಿ ಕಟ್ಟಲು ವಿರೋಧಿಗಳಿಗೆ ಸಾಧ್ಯವಾಗುತ್ತಿಲ್ಲ.ಆ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಇದು ಪ್ಲಸ್ ಆಗುತ್ತಿದೆ.
ಇಷ್ಟಾದರೂ ಕ್ಷೇತ್ರದ ಮುಸ್ಲಿಂ,ಕುರುಬ,ದಲಿತ ಸಮುದಾಯದ ಮತಗಳನ್ನು ಕಾಂಗ್ರೆಸ್ ಕನ್ ಸಾಲಿಡೇಟ್ ಮಾಡುತ್ತಿರುವ ರೀತಿ ಮತ್ತು ಅದಕ್ಕಾಗಿ ಬಳಸುತ್ತಿರುವ ತಂತ್ರ ಬಸವರಾಜ ಬೊಮ್ಮಾಯಿ ಅವರಲ್ಲಿ ಒಂದು ಆತಂಕ ಸೃಷ್ಟಿಸಿದೆ.ಇದೇ ಕಾರಣಕ್ಕಾಗಿ ಮಾತೆತ್ತಿದರೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹದಿನೆಂಟು ವರ್ಷಗಳ ಹಳೆಯ ಸಂಗತಿಯನ್ನು ನೆನಪಿಸುತ್ತಾ,ಇದನ್ನು ಮರೆಯಬೇಡಿ ಸಿದ್ರಾಮಣ್ಣ ಅನ್ನುತ್ತಿದ್ದಾರೆ. ಅರ್ಥಾತ್, ಶಿಗ್ಗಾಂವಿಯಲ್ಲಿ ಪುತ್ರ ಭರತ್ ಬೊಮ್ಮಾಯಿ ಮುಂದಿದ್ದರೂ ಯಾವುದೋ ಆತಂಕ ಅವರನ್ನು ಕಾಡುತ್ತಿದೆ.
ಬೊಮ್ಮಾಯಿ ಹೇಳುತ್ತಿರುವ ಸೀಕ್ರೆಟ್ ಏನು? (Political analysis)
ಅಂದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸಣ್ಣ ನೆನಪಿಸುತ್ತಿರುವ ಆ ಸಂಗತಿ 2006 ರಲ್ಲಿ ನಡೆದಿದ್ದು. ಆ ಸಂದರ್ಭದಲ್ಲಿ ಜೆಡಿಎಸ್ ನಿಂದ ಹೊರಬಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಅವತ್ತು ಅವರ ಎದುರಾಳಿಯಾಗಿದ್ದವರು ಶಿವಬಸಪ್ಪ.ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬಲ ಅವರ ಬೆನ್ನಿಗಿದ್ದುದರಿಂದ ಸಿದ್ದರಾಮಯ್ಯ ಪ್ರಬಲ ಸ್ಪರ್ಧೆಯನ್ನು ಎದುರಿಸುವುದು ನಿಶ್ಚಿತವಾಗಿತ್ತು. ಹೀಗಾಗಿ ಮಂತ್ರಾಲೋಚನೆಗಿಳಿದ ಸಿದ್ದರಾಮಯ್ಯ ಟೀಮು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ವಿಭಜಿಸಲು ಮುಂದಾಯಿತು.
ಆ ಸಂದರ್ಭದಲ್ಲಿ ಜೆಡಿ(ಯು)ಮುಖಂಡರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಿದ್ರಾಮಯ್ಯ ಟೀಮಿನ ಬ್ರೆಗೇಡಿಯರ್ ಹೆಚ್.ಎಂ.ರೇವಣ್ಣ,’ನಿಮ್ಮಿಂದ ಒಂದು ನೆರವಾಗಬೇಕು’ಎಂದಿದ್ದಾರೆ.
ಈ ನೆರವು ಎಂದರೆ ಜೆಡಿ(ಯು)ವತಿಯಿಂದ ಲಿಂಗಾಯತ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕು ಎಂಬುದು. ಅವತ್ತು ಹೆಚ್.ಎಂ.ರೇವಣ್ಣ ಅವರ ಕೋರಿಕೆಗೆ ಇಲ್ಲ ಅನ್ನದ ಬಸವರಾಜ ಬೊಮ್ಮಾಯಿ ಅವರು ಮಾಜಿ ಶಾಸಕ ಗುರುಸ್ವಾಮಿ ಅವರು ಕಣಕ್ಕಿಳಿಯುವಂತೆ ನೋಡಿಕೊಂಡರು.
ಮುಂದೆ ಚುನಾವಣೆಯಲ್ಲಿ ಜೆಡಿ(ಯು)ಅಭ್ಯರ್ಥಿ ಗುರುಸ್ವಾಮಿ 941 ಮತಗಳನ್ನು ಪಡೆದರು.ಒಂದು ವೇಳೆ ಅವರು ಸ್ಪರ್ಧಿಸದೆ ಹೋಗಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಗೆಲ್ಲುವುದು ಕಷ್ಟವಾಗುತ್ತಿತ್ತು.ಕಾರಣ?ಅವತ್ತು ಶಿವಬಸಪ್ಪ ಅವರ ವಿರುದ್ದ ಸಿದ್ದರಾಮಯ್ಯ ಗೆದ್ದಿದ್ದು ಕೇವಲ 257 ಮತಗಳ ಅಂತರದಿಂದ. ಇವತ್ತು ಬಸವರಾಜ ಬೊಮ್ಮಾಯಿ ಅವರು ಸಿದ್ಧರಾಮಯ್ಯನವರಿಗೆ ನೆನಪಿಸುತ್ತಿರುವ ಎಪಿಸೋಡೇ ಇದು.
ಜಮೀರಣ್ಣ ಬಂದ್ರೆ ಕುಮಾರಣ್ಣ ಖುಷ್ (Political analysis)
ಇನ್ನು ಇಡೀ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬಲಿಷ್ಟರಾಗುತ್ತಿದ್ದಾರೆ.
ಶುರುವಿನಲ್ಲಿ ಕಾಂಗ್ರೆಸ್ಸಿನ ಸಿ.ಪಿ.ಯೋಗೇಶ್ವರ್ ಸುಲಭವಾಗಿ ಗೆಲ್ಲುತ್ತಾರೆ ಎಂಬ ಪರಿಸ್ಥಿತಿ ಇತ್ತಾದರೂ ಕಳೆದ ನಾಲ್ಕೈದು ದಿನಗಳಿಂದ ನಿಖಿಲ್ ಕುಮಾರಸ್ವಾಮಿ ಅವರ ಪರಿಸ್ಥಿತಿ ಸುಧಾರಿಸಿಕೊಂಡಿದೆ. ಅಂದ ಹಾಗೆ ಮುಸ್ಲಿಂ,ಕುರುಬ,ಪರಿಶಿಷ್ಟ ಮತಗಳು ಕನ್ ಸಾಲಿಡೇಟ್ ಆಗುವುದರ ಜತೆ ಬಲಿಷ್ಟ ಒಕ್ಕಲಿಗ ಸಮುದಾಯದ ನಲವತ್ತು ಪರ್ಸೆಂಟ್ ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆಲ್ಲುವುದು ನಿಶ್ಚಿತ.
ಆದರೆ ಬದಲಾಗುತ್ತಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಲಿಂಗಾಯತ,ಬ್ರಾಹ್ಮಣ,ನೇಕಾರರು ಸೇರಿದಂತೆ ಇತರ ಸಮುದಾಯಗಳ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಿಖಿಲ್ ಗೆಲುವಿಗೆ ಬೇಸಿಕ್ ಪವರ್ ತುಂಬಿದ್ದಾರೆ ಎಂಬುದು ಸಧ್ಯದ ಮಾತು.
ಇದು ಒಂದು ಕಡೆಗಾದರೆ ಮಾಜಿ ಪ್ರಧಾನಿ ದೇವೇಗೌಡ,ಹೆಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಎಪ್ಪತ್ತು ಪರ್ಸೆಂಟ್ ಒಕ್ಕಲಿಗ ಮತಗಳು ನಿಖಿಲ್ ಅವರಿಗೆ ದಕ್ಕುತ್ತವೆ ಅನ್ನುವ ವಿಶ್ವಾಸದಲ್ಲಿದ್ದಾರೆ.
ಇದೇ ರೀತಿ ಮುಸ್ಲಿಂ ಮತ ಬ್ಯಾಂಕಿನ ಮಿನಿಮಮ್ ಹತ್ತು ಸಾವಿರ ಮತಗಳನ್ನು ಪಡೆಯಲು ಏನು ಬೇಕೋ ಅದನ್ನು ಕುಮಾರಸ್ವಾಮಿ ಮಾಡಿದ್ದಾರಂತೆ. ಉಳಿದಂತೆ ಕುರುಬ ಮತದಾರರು ಸಿದ್ದರಾಮಯ್ಯ ಬೆನ್ನಿಗಿದ್ದಾರಾದರೂ ಕಾಂಗ್ರೆಸ್ಸಿನ ಗೆಲುವು ಮುಂದೆ ಬೀರಬಹುದಾದ ರಾಜಕೀಯ ಪರಿಣಾಮಗಳನ್ನು ಊಹಿಸಬಲ್ಲ ಅವರು ಯಾವ ನಿರ್ಧಾರಕ್ಕಾದರೂ ಬರಬಹುದು.ಮತ್ತು ಒಂದು ಮಟ್ಟದಲ್ಲಿ ಅದು ತಮಗೆ ಪ್ಲಸ್ ಆಗಬಹುದು ಎಂಬುದು ಜೆಡಿಎಸ್ ನಾಯಕರ ನಂಬಿಕೆ.
ಉಳಿದಂತೆ ಸಚಿವ ಜಮೀರ್ ಅಹ್ಮದ್ ಫೀಲ್ಡಿಗಳಿದ ಮೇಲೆ ವಕ್ಪ್ ಭೂಮಿ ಎಪಿಸೋಡು ಮುನ್ನೆಲೆಗೆ ಬಂದಿದೆಯಲ್ಲದೆ, ಹಿಂದೂ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಿದೆ.ಮತ್ತು ಅದೇ ಅಂಶ ನಿಖಿಲ್ ಗೆಲುವಿಗೆ ಪೂರಕವಾಗಲಿದೆ ಎಂಬುದು ಕುಮಾರಣ್ಣನ ನಂಬಿಕೆ. ಹೀಗಾಗಿ ಚನ್ನಪಟ್ಟಣದಲ್ಲೀಗ ನೆಕ್ ಟು ನೆಕ್ ಫೈಟು ಸ್ಪಷ್ಟವಾಗಿದೆ.
ಆರ್.ಟಿ.ವಿಠ್ಠಲಮೂರ್ತಿ