ದಾವಣಗೆರೆ (Davanagere): ಬಡ ಕೂಲಿ ಕಾರ್ಮಿಕರು, ರೈತರಿಗೆ ವರದಾನ ಆಗಬೇಕಾದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಶಾಪವಾಗಿದೆ. ಹೃದಯಘಾತಕ್ಕೆ ಒಳಗಾಗಿ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭ ಸಿಗದೆ ಲಕ್ಷಾಂತರ ರೂ. ಹಣ ತೆರಬೇಕಾಗಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಯೋಜನೆಯು ಬಡವರಿಗೆ ವರದಾನವಾಗಿದೆ. ಆದರೆ ಹೃದಯಘಾತಕ್ಕೆ ಒಳಗಾಗುವ ಕೂಲಿ ಕಾರ್ಮಿಕರು, ಬಡವರು, ರೈತರು ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದರೆ, ತುರ್ತು ಚಿಕಿತ್ಸೆ ನೀಡದೆ, ಈ ಯೋಜನೆ ಅನುಷ್ಠಾನ ವಿಳಂಬ ಆಗುತ್ತದೆ. ಹೀಗಾಗಿ ಕೂಡಲೇ ಆಪರೇಷನ್ ಮಾಡಿದರೆ ಮಾತ್ರ ರೋಗಿ ಬದುಕುತ್ತಾನೆ, ಇಲ್ಲಂದ್ರೆ ಕಷ್ಟ. ಈ ಆಪರೇಷನ್‌ಗೆ ಇಷ್ಟು ಹಣ ಕಟ್ಟಿದರೆ ಮಾತ್ರ ಆಪರೇಷನ್ ಮಾಡುತ್ತೇವೆ ಎಂದು ವೈದ್ಯರು ಹೇಳುತ್ತಾರೆ.
ಲಕ್ಷಾಂತರ ರೂಪಾಯಿ ಎಲ್ಲಿಂದ ತರಬೇಕು. ಆಯುಷ್ಮಾನ್ ಯೋಜನೆಯಿಂದ ೫ ಲಕ್ಷ ರೂ.ವರೆಗೆ ಲಾಭ ಪಡೆಯಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ತುರ್ತು ಸಂದರ್ಭದಲ್ಲಿ ಈ ಯೋಜನೆ ಉಪಯೋಗಕ್ಕೆ ಬಾರದಿದ್ದರೆ, ಈ ಯೋಜನೆ ಜಾರಿಗೆ ತಂದಿದ್ದಾದರೂ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹೃದಯಘಾತಕ್ಕೆ ಒಳಗಾದ ರೋಗಿ ಆಸ್ಪತ್ರೆಗೆ ದಾಖಲಾದರೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಈ ಯೋಜನೆ ಅನುಷ್ಠಾನ ಮಾಡಿದ ಬಳಿಕ ಆಪರೇಷನ್ ಮಾಡಲಿ ಅಥವಾ ರೋಗಿಗೆ ಆಪರೇಷನ್ ಮಾಡಿ ನಂತರ ಈ ಯೋಜನೆ ಅನುಷ್ಠಾನ ಮಾಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಈ ಬಗ್ಗೆ ಗಂಭೀರ ಚರ್ಚೆ ನಡೆಸಿ ಖಾಸಗಿ ಆಸ್ಪತ್ರೆಗಳಿಗೆ ಕಟ್ಟಿನಿಟ್ಟಿನ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಬಸವಂತಪ್ಪ ಅವರ ಮನವಿ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಗಂಭೀರ ಚರ್ಚೆ ನಡೆಸಿ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಯೋಜನೆಯಡಿ ದಾಖಲಾಗುವ ರೋಗಿಗಳಿಂದ ಯಾವುದೇ ರೀತಿಯ ಖರ್ಚು ಭರಿಸಿಕೊಳ್ಳದೆ ಉಚಿತವಾಗಿ ತುರ್ತು ಚಿಕಿತ್ಸೆ ನೀಡುವ ಕುರಿತು ಸುತ್ತೋಲೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
Read also : ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ