ದಾವಣಗೆರೆ (Davanagere): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 35 ಸಾವಿರ ರೂ., ದಂಡ ಹಾಗೂ ಸಹಕರಿಸಿದ 2 ನೇ ಆರೋಪಿಗೆ 02 ವರ್ಷ 10 ಸಾವಿರ ದಂಡ ಹಾಗೂ 3 ನೇ ಆರೋಪಿಗೆ 1 ವರ್ಷ, 5 ಸಾವಿರ ದಂಡ ವಿಧಿಸಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.
ಮೊದಲ ಆರೋಪಿ ಎ.ಕೆ. ಹಾಲೇಶ್, 2 ನೇ ಆರೋಪಿ ಹಾಲೇಶಪ್ಪ @ ಹಾಲಪ್ಪ ಮತ್ತು 3 ನೇ ಆರೋಪಿ ರುದ್ರೇಶ್ ಶಿಕ್ಷೆಗೊಳಗಾದ ಅಪರಾಧಿಗಳು.
ಕಳೆದ 20.10.2020 ರಂದು ಮೊದಲ ಆರೋಪಿ ಹಾಲೇಶ್ ಅದೇ ಗ್ರಾಮದ ವಾಸಿಯಾದ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಅಪಹರಣ ಮಾಡಿದ್ದರ ಬಗ್ಗೆ ಬಾಲಕಿಯ ತಂದೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಮೊದಲ ಆರೋಪಿ ಆರೋಪಿ ಎ.ಕೆ. ಹಾಲೇಶ್ 2 ನೇ ಆರೋಪಿ ಎ.ಕೆ ಹಾಲೇಶಪ್ಪ @ ಹಾಲಪ್ಪ ಅವರ ಮನೆಗೆ ಹೋಗಿ ಈ ಹುಡುಗಿಯನ್ನು ಪ್ರೀತಿಸುತ್ತಿದ್ದು, ಮದುವೆಮಾಡಿಕೊಳ್ಳುವುದಾಗಿ ಹೇಳಿ ಅವರ ಮನೆಯಲ್ಲಿದ್ದರು. 3 ನೇ ಆರೋಪಿ ಹೆಚ್. ರುದ್ರೇಶನನ್ನು ಅಲ್ಲಿಗೆ ಕರೆಸಿಕೊಂಡಿದ್ದನು.
ಆರೋಪಿ ರುದ್ರೇಶ್ ಕುಂದೂರು ಗ್ರಾಮಕ್ಕೆ ಕರೆದುಕೊಂಡು ನಂತರ ಮೂವರು ಚಿತ್ರದುರ್ಗ ತಾಲ್ಲೂಕು ಚನ್ನಯ್ಯನಹಟ್ಟಿ ಗ್ರಾಮದ 4 ಆರೋಪಿ ಹನುಮಂತಪ್ಪ ನವರ ಮನೆಗೆ ಹೋಗಿ ಬಿಟ್ಟಿದ್ದು, ಅದೇ ದಿನ ರಾತ್ರಿ 1 ನೇ ಆರೋಪಿಯು ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಅತ್ಯಾಚಾರ ಮಾಡಿದ್ದನು ಮತ್ತು ಎ2, ಎ3 ಆರೋಪಿತರು ಕೃತ್ಯಕ್ಕೆ ಸಹಕರಿಸುವುದಾಗಿ
ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿತ್ತು.
ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ತನಿಖೆ ನಡೆಸಿ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ರವರು ಆರೋಪಿತರ ಮೇಲೆ ಆರೋಪ ಸಾಬೀತಾಗಿದ್ದರಿಂದ ತೀರ್ಪು ನೀಡಿದ್ದು, ಆರೋಪಿತರಿಂದ ವಸೂಲುಮಾಡಿದ 50,000 ರೂ.,ವನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ
ಸಂತ್ರಸ್ತೆಗೆ ಸರ್ಕಾರದಿಂದ 4 ಲಕ್ಷ ರೂ., ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡನೆ ಮಾಡಿದ್ದರು.
Read also : ಡಾ.ಎನ್.ಪರಶುರಾಮ್‌ಗೆ ‘ಚಿತ್ರಸಂತೆ ರಾಜ್ಯೋತ್ಸವ’ ಪುರಸ್ಕಾರ