ದಾವಣಗೆರೆ (Davanagere): ಸುಪ್ರೀಂಕೋರ್ಟ್ ನ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಲು ಡಿ. 16 ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ನೀಡಲಾಗಿದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆಲೂರು ನಿಂಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ – ಪರಿಶಿಷ್ಟ ಜಾತಿಗಳ ನೂರೊಂದು ಸಮುದಾಯಗಳಿಗೂ ಸಾಮಾಜಿಕ ನ್ಯಾಯವನ್ನು ಕೊಡುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪನ್ನು ಕೊಟ್ಟಿದೆ. ಇಂತಹದೊಂದು ಐತಿಹಾಸಿಕ ತೀರ್ಪು ಬರುವಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕದ ಬಸವರಾಜ್ ಬೊಮ್ಮಾಯಿ ಸರ್ಕಾರ ಒಳ ಮೀಸಲಾತಿ ಶಿಫಾರಸ್ಸು ಮಾಡುವ ನಿರ್ಧಾರ ಮಾಡಿತು. ಸ್ವತಃ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರೆ ಒಳ ಮೀಸಲಾತಿಯನ್ನು ಬೆಂಬಲಿಸಿದ್ದಾರೆ ಎಂದರು.
ಆಗಸ್ಟ್ 1 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಛೇರಿ, ಸಿಬ್ಬಂದಿ. ಹಣಕಾಸಿನ ನೆರವು ಕೊಡದೆ ಕಾಲಾಹರಣ ನಡೆಸಲಾಗುತ್ತಿದೆ ಎಂದು ದೂರಿದರು.
ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರಕಾರದ ಮುಂದೆ ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ. ಮಾಧುಸ್ವಾಮಿ ಯವರ ಸಮಿತಿ ಎಕೆ (ಆದಿ ಕರ್ನಾಟಕ), ಎಡಿ (ಆದಿ ದ್ರಾವಿಡ) ಸಮಸ್ಯೆಗೆ ಪರಿಹಾರ ಒದಗಿಸಿದೆ. 2011ರ ಜನಗಣತಿಯ ಅಂಕಿ- ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಒಳಮೀಸಲಾತಿ ಜಾರಿ ಆಗುವ ವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಆದರೆ ಈ ಭರವಸೆ ಜಾರಿಯಾಗಿಲ್ಲ, ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ. ಇದು ಖಂಡನಾರ್ಹ, ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿಸೆಂಬರ್ 16 ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ನೀಡಲಾಗಿದೆ ಎಂದರು.
ಜಿಲ್ಲೆಯ ಶಾಸಕರಾಗಿ ಆಯ್ಕೆ ಆಗುವಲ್ಲಿ ನಮ್ಮ ಸಮಾಜದ ಬೆಂಬಲ ನಿರ್ಣಾಯಕವಾಗಿದೆ. ನೀವು ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿಯ ವಿಷಯವನ್ನು ಪ್ರಸ್ತಾಪಿಸಬೇಕು. ಹಾಗೂ ಬೆಂಬಲ ಸೂಚಿಸಬೇಕೆಂದು ನಮ್ಮ ವಿನಂತಿ. ಹಾಗೆಯೇ ಬೆಳಗಾವಿಯ ಹಕ್ಕೊತ್ತಾಯ ಸಮಾವೇಶದಲ್ಲಿ ಪ್ರತಿನಿಧಿಗಳು ಬರಬೇಕು. ನಮ್ಮ ವಿಧಾನ ಸಭಾ ಕ್ಷೇತ್ರದಿಂದ ದೊಡ್ಡ ಸಂಖ್ಯೆಯಲ್ಲಿ ಬೆಳಗಾವಿಗೆ ಹೋಗಲು ನಿಮ್ಮ ಸಹಕಾರ ಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ, ಅಂಜಿನಪ್ಪ ಎಂ. ಶಾಮನೂರು, ಹರೀಶ್ ಹೊನ್ನೂರು, ಬಿ. ಹಾಲೇಶ್, ಕೆ.ಹೆಚ್. ಅವಿನಾಶ್ ಇನ್ನಿತರರು ಉಪಸ್ಥಿತರಿದ್ದರು.
Read also : Davanagere | ಒಳಮೀಸಲಾತಿ ವಿಷಯ ಸದನದಲ್ಲಿ ಪ್ರಸ್ತಾಪಿಸಿ : ಡಿಎಸ್‍ಎಸ್ ಒತ್ತಾಯ