ದಾವಣಗೆರೆ (Davanagere): ಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಮಕ್ಕಳ ಹಕ್ಕುಗಳನ್ನು ಕಾಪಾಡಲು ಮಾಧ್ಯಮಗಳು ಜೊತೆಗೂಡಬೇಕು, ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಯುನಿಸೆಫ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪರ್ತಕರ್ತರಿಗಾಗಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳು, ಆರೋಗ್ಯ ಹಾಗೂ ರಕ್ಷಣೆ ಕುರಿತಾದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಮಕ್ಕಳು ಹಲವಾರು ಸಮಸ್ಯೆ, ಶೋಷಣೆ, ಅಪೌಷ್ಠಿಕತೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಆರೋಗ್ಯ ವಿಚಾರಕ್ಕೆ ಒತ್ತು ನೀಡಬೇಕಾದ ಅನಿವಾರ್ಯ ನಿರ್ಮಾಣವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಯುನಿಸೆಫ್ ಜವಾಬ್ದಾರಿ ಅಲ್ಲ, ಅದು ಪ್ರತಿಯೊಬ್ಬ ನಾಗರೀಕರ ಜಬಾವ್ದಾರಿ ಆಗಿದೆ, ಮಕ್ಕಳ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಇಂದೆಲ್ಲಾ ಮಕ್ಕಳಿಗಾಗಿ ಪತ್ರಿಕೆಗಳಲ್ಲಿ ವಿಶೇಷ ಪುಟಗಳು ಬರುತ್ತಿದ್ದವು, ಆದರೆ ಈಗ ಮಕ್ಕಳ ಮೇಲಾಗುವ ದೌರ್ಜನ್ಯಗಳ ಸುದ್ದಿಗಳೇ ಹೆಚ್ಚಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಿಂಗ ಸಮಾನತೆ ಕಾಯ್ದುಕೊಳ್ಳಲು ಜಾಗತೀಕ ಮಟ್ಟದಲ್ಲಿ ಪ್ರಯತ್ನಗಳು ನಡೆದಿದೆ. ಆದರೆ ನಮ್ಮ ದೇಶದಲ್ಲಿ ಗಂಡು ಸಂತಾನದ ವ್ಯಾಮೋಹದಿಂದ ಮತ್ತು ಹೆಣ್ಣು ಮಗು ಕುಟುಂಬಕ್ಕೆ ಭೂಷಣವಲ್ಲ ಎಂಬ ಮೂಡನಂಬಿಕೆಯಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ, ಇದರಿಂದಾಗಿ ಲಿಂಗ ಅಸಮಾನತೆ ಉಂಟಾಗಿದ್ದು ರೈತಾಪಿ ವರ್ಗದವರಿಗೆ ಹೆಣ್ಣು ಸಿಗದ ಪರಿಸ್ಥಿತಿ ಉದ್ಬವಿಸಿದೆ, ಭ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಲಿಂಗ ತಾರತಮ್ಯಗಳ ತೊಲಗಿಸಲು ಜನರಿಗೆ ಅರಿವು ಮೂಡಿಸುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷೆ ಸ್ವಪ್ನಾನಾಯ್ಕ್ ಮಾತನಾಡಿ, ಕೊರೋನ ನಂತರದ ದಿನಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ ಎಂಬುದು ಯುನೆಸ್ಕೋ ವಾದವಾಗಿದೆ, ಮಕ್ಕಳೊಂದಿಗೆ ಒಡನಾಟ ಕಡಿಮೆಯಾಗುವುದರಿಂದ ಅವರಿಗೆ ಮಾನಸಿಕ ಕಿನ್ನತೆಗಳು ಆರಂಭವಾಗುತ್ತದೆ. ಈ ಕುರಿತಾಗಿ ಮಕ್ಕಳ ಮಾನಸಿಕ ಆರೋಗ್ಯದ ಅಧ್ಯಯನ ನಡೆಯಬೇಕಿದೆ. ಜೊತೆಗೆ ಮಕ್ಕಳು ಡಿಜಿಟಲ್ ಮಾಧ್ಯಮಗಳನ್ನು ಹೆಚ್ಚಾಗಿ ಅವಲಂಭಿಸುತ್ತಿದ್ದು ಈ ವಿಚಾರದ ಬಗ್ಗೆಯೂ ಚರ್ಚೆ ಆಗಬೇಕಿದೆ, ಮಕ್ಕಳ ವಿಚಾರದಲ್ಲಿ ಪತ್ರಿಕೆಗಳಲ್ಲಿ ಸಂಪಾದಕೀಯ ಕೂಡ ಬರುತ್ತವೆ ಆದರೆ ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಕುರಿತಾಗಿ ವರದಿ ಮಾಡುವವರು ಅದರ ಬಗೆಗೆ ಹೆಚ್ಚಿನ ತಿಳುವಳಿಕೆ ಹೊಂದುವುದು ಸೂಕ್ತ ಎಂದು ಹೇಳಿದರು.
ಯುನಿಸೆಫ್ ಹೈದರಾಬಾದ್‍ನ ಪ್ರೊಸುನ್‍ಸೇನ್ ಮಾತನಾಡಿ, ಈಗಿನ ಮಕ್ಕಳು ಅತಿಹೆಚ್ಚು ಒತ್ತಡವನ್ನು ಹೊಂದುವ ಮೂಲಕ ಅವರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕಡೆ ಗಮನಹರಿಸಬೇಕಿದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಸಹ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ದಾವಣಗೆರೆಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾದ ಪ್ರೊ.ಶಿವಕುಮಾರಕಣಸೋಗಿ ಮಾತನಾಡಿದರು. ಮಂಜುನಾಥಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.
Read also : ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ ಕನಕ ನೌಕರರ ಬಳಗದಿಂದ ಸನ್ಮಾನ