ವಿಜಯನಗರ (ಹೊಸಪೇಟೆ), ಜ. 7 : ಭಕ್ತಿ ಪ್ರಧಾನವಾದ ಮೈಲಾರ ಕಾರ್ಣಿಕೋತ್ಸವದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಜಾತ್ರೆ ಆಯೋಜಿಸಲು ವಿವಿಧ ಇಲಾಖೆಗಳ ಸಮನ್ವಯತೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀಮೈಲಾರ ಲಿಂಗೇಶ್ವರ ಜಾತ್ರೆ ಮತ್ತು ಕಾರ್ಣಿಕೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಮೈಲಾರ ಜಾತ್ರೆಯು ಫೆಬ್ರವರಿ 4 ರಿಂದ ಆರಂಭವಾಗಿ 15 ವರೆಗೆ ನಡೆಯಲಿದ್ದು ಫೆಬ್ರವರಿ 14 ರಂದು ಸಂಜೆ 5.30 ಕ್ಕೆ ಡೆಂಕನ ಮರಡಿಯಲ್ಲಿ ಕಾರ್ಣಿಕೋತ್ಸವ ನಡೆಯಲಿದೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ವಿದ್ಯುತ್ ದೀಪ, ಸಾರಿಗೆ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಟೆಂಟ್ ವ್ಯವಸ್ಥೆಯಡಿ ಉಚಿತ ಆರೋಗ್ಯ ಸೇವೆ ಜತೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಅಗತ್ಯ ವಿದೆ.
ಅಂಬ್ಯುಲೆನ್ಸ್ ಗಳ ಕೊರತೆ ಇದ್ದಲ್ಲಿ ವಿವಿಧ ತಾಲೂಕಿನ ಅಂಬ್ಯುಲೆನ್ಸ್ ಗಳನ್ನು ನಿಯೋಜಿಸಿ ಸೇವೆ ನೀಡುವಂತೆ ಡಿಎಚ್ಒ ಶಂಕರನಾಯ್ಕರಿಗೆ ಸೂಚಿಸಲಾಯಿತು. ಖಾಸಗಿ ಸಂಸ್ಥೆಯವರು ನೀಡುವ ಬ್ಲೀಚಿಂಗ್ ಪೌಡರ್, ಪೆನಾಯಿಲ್ ಬಳಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಿಸಿ ಟಿವಿ ಅಳವಡಿಕೆ, ವಿದ್ಯುತ್ ದೀಪಗಳನ್ನು ನಿಯಮಾನುಸಾರ ವ್ಯವಸ್ಥೆ ನೀಡಬೇಕು. ಡೆಂಕನಮರಡಿ ಬಳಿ ಎಲ್ ಇಡಿ ಲೈಟ್ಸ್ ಅಳವಡಿಸಿ ಕತ್ತಲಿರದಂತೆ ನಿಗಾ ವಹಿಸಬೇಕು.
ಇಡೀ ಜಾತ್ರೆಯಲ್ಲಿ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿ ಪ್ರದರ್ಶಿಸಿದರೇ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಸಣ್ಣ ಅವಘಡ ನಡೆಯದಂತೆ ಇಚ್ಛಾಶಕ್ತಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ನಾಲ್ಕು ದಿನಗಳ ಮುಂಚಿತವಾಗಿ ಮದ್ಯಮಾರಾಟ ನೀಷೇಧಿಸಲು ಸೂಚಿಸಿದರು.
ಹಡಗಲಿ ಶಾಸಕರಾದ ಕೃಷ್ಣನಾಯ್ಕ ಮಾತನಾಡಿ, ಸಾರಿಗೆ ಇಲಾಖೆಯಿಂದ ಎಲ್ಲಾ ಭಾಗದ ಭಕ್ತರು ಆಗಮಿಸಲು ಹೆಚ್ಚಿನ ಬಸ್ ಗಳನ್ನು ನಿಯೋಜಿಸಬೇಕು. ಹರಿಹರ, ದಾವಣಗೆರೆ, ಹಾವೇರಿ, ಹಡಗಲಿ, ಘಟಕಗಳಿಂದ ಬಸ್ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು.
ರಾತ್ರಿ ವೇಳೆಯಲ್ಲಿ ಭಕ್ತರ ಬೇಡಿಕೆಯಂತೆ ಬಸ್ ಸಂಚಾರ ವ್ಯವಸ್ಥೆ ನೀಡಬೇಕು. ಸಮಯ ನಿಗಧಿಪಡಿಸದಂತೆ ನಿರಂತರ ಸೇವೆ ಸಾರಿಗೆ ಇಲಾಖೆ ನೀಡಲಿ. ಮೈಲಾರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ದುರಸ್ತಿ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು.
ಜಾತ್ರೆಯ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮೈಲಾರ ಡೆಂಕನಮರಡಿ ರಸ್ತೆ ತಾತ್ಕಾಲಿಕವಾಗಿ ಆಗಲೀಕರಣಗೊಳಿಸಿ ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ನೀಡಲು ಸೂಚಿಸಿದರು. ಅಗ್ನಿಶಾಮಕ ದಳದಿಂದ ಕನಿಷ್ಠ ಎರಡು ವಾಹನಗಳು ತುರ್ತು ಸೇವೆ ನೀಡಲು ಸಿದ್ದವಿರಲಿ ಎಂದು ಸೂಚಿಸಿದರು.
ಈ ವೇಳೆ ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ ಅಲಿ, ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ತಹಶೀಲ್ದಾರ ಸಂತೋಷ ಕುಮಾರ್, ಡಿವೈಎಸ್ಪಿ ವೆಂಕಟಪ್ಪ ನಾಯಕ, ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಸಿಪಿಐ ದೀಪಕ್ ಭೂಸರೆಡ್ಡಿ, ಗ್ರಾಪಂ ಅಧ್ಯಕ್ಷೆ ಜಾನಕಮ್ಮ ಇತರರಿದ್ದರು.