ಹರಿಹರ (Harihara) : ಮಣ್ಣು ಮಾಫಿಯಾಕ್ಕೆ ವಿದ್ಯುತ್ ಪ್ರಸರಣದ ಬೃಹತ್ ಟವರ್‍ಗೆ ಗಂಡಾಂತರ ಎದುರಾದ ಮತ್ತೊಂದು ಪ್ರಕರಣ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದ್ದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕ ಖಂಡಿಸಿದೆ.
ಗ್ರಾಮದ ನದಿ ದಡದ ಪಟ್ಟಾ ಜಮೀನಿನಲ್ಲಿ 70 ಅಡಿಗೂ ಎತ್ತರದ ಈ ಟವರ್ ಲೈನ್ ಮೂಲಕ ಅಪಾರ ಪ್ರಮಾಣದ ವಿದ್ಯುತ್ ಪ್ರಸರಣವಾಗುತ್ತಿದೆ. ಟವರ್‍ಗೆ ನಾಲ್ಕೈದು ಅಡಿಗಳ ಅಂತರದಲ್ಲಿ 15 ಅಡಿಗಳಷ್ಟು ಮಣ್ಣುಗಣಿಗಾರಿಕೆ ನಡೆಸಲಾಗಿದೆ ಎಂದು ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಭಾಗದ ನದಿ ದಡದ ಮಣ್ಣು ಮೆದುವಾಗಿದ್ದು, ಒಂದೆರಡು ದಿನ ಮಳೆ ಹಿಡಿದರೂ ಮಣ್ಣು ಸವಕಳಿಯಾಗಿ ಟವರ್ ನೆಲಕ್ಕೆ ಉರುಳುವ ಸಾಧ್ಯತೆ ಇದೆ. ಹಾಗೇನಾದರು ಟವರ್ ಉರುಳಿ ಬಿದ್ದರೆ ಅಪಾರ ಪ್ರಮಾಣದ ಜೀವ, ಆಸ್ತಿ ಹಾನಿಯಾಗುತ್ತದೆ, ದಾವಣಗೆರೆ, ಹಾವೇರಿ ಹಾಗೂ ಇತರೆ ಜಿಲ್ಲೆಗಳಿಗೆ ಹಲವು ದಿನಗಳ ಕಾಲ ವಿದ್ಯುತ್ ಪ್ರಸಾರದಲ್ಲಿ ತಡೆಯುಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಟವರ್ ಗಳ ಮಾಲಿಕತ್ವ ವಹಿಸಿರುವ ಕೆಪಿಟಿಸಿಎಲ್‍ನವರಿಗೆ ಈ ವಿಷಯ ಹೇಳಿದರೆ, ಹೌದು ವಿಷಯ ನಮ್ಮ ಗಮನಕ್ಕಿದೆ, ಜಮೀನಿನ ಮಾಲಿಕರಿಗೆ ಈಗಾಗಲೆ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆಯವರು, ಮಣ್ಣುಗಣಿಗಾರಿಕೆ ಮಾಡಿದ್ದಕ್ಕೆ ನೋಟಿಸ್ ನೀಡಿದ್ದೇವೆ, ರಾಜಧನ ಹಾಗೂ ದಂಡ ವಿಧಿಸಿದ್ದೇವೆ ಎಂದು ಸಿದ್ಧ ಉತ್ತರ ನೀಡುತ್ತಾರೆ.
ಕೋಟ್ಯಾಂತರ ಮೌಲ್ಯದ ಮಣ್ಣನ್ನು ಅಕ್ರಮವಾಗಿ ಸಾಗಿಸಿದವರಿಗೆ ನೋಟಿಸ್ ಜಾರಿ ಮಾಡಿ ಜುಜುಬಿ ಮೊತ್ತದ ರಾಜಧನ, ದಂಡ ವಸೂಲಿ ಮಾಡಿದರೆ ಸಾಕೆಂಬ ಅಧಿಕಾರಿಗಳ ಧೋರಣೆ ಖಂಡನೀಯವಾಗಿದೆ.
ನದಿ ದಡದ ಸರ್ಕಾರಿ ಹಾಗೂ ಪಟ್ಟಾ ಜಮೀನುಗಳ ಕೆಂಪು ಮೆದು ಮಣ್ಣು ಹಾಗೂ ಒಳ ಪ್ರದೇಶದಜಮೀನುಗಳಿಂದ ಅಕ್ರಮ ಗ್ರಾವೆಲ್ ಮಣ್ಣು ಸಾಗಣೆಯಿಂದ ತಾಲ್ಲೂಕಿನ ಭೌಗೋಳಿಕ ಆಕಾರ ವಿಕಾರವಾಗುತ್ತಿದೆ. ನದಿ ದಡ ಹಾಗೂ ಜಮೀನುಗಳಲ್ಲಿದ್ದ ಸಹಸ್ರಾರು ಮರಗಳು ನೆಲಕ್ಕುರುಳಿಸಿ ಜೀವ ವೈವಿಧ್ಯಕ್ಕೆ ಧಕ್ಕೆ ಒದಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿ, ಗಣಿ, ಕಂದಾಯ, ಕೃಷಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಂಘಟನೆಯಿಂದ ಮನವಿ ಸಲ್ಲಿಸಿದ್ದರೂ ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ವಿಷಯದ ಗಂಭೀರತೆಯ ಅರಿವಿದ್ದರೂ ಈ ಅಧಿಕಾರಿಗಳು ಏಕೆ ಮೌನವಹಿಸಿದ್ದಾರೆಂದು ಅವರು ಪ್ರಶ್ನಿಸಿದ್ದಾರೆ.
ಮಣ್ಣು ಮಾಫಿಯಾಕ್ಕೆ ಮಣಿದಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಇಂಧನ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತರು ಹಾಗೂ ಪರಿಸರವಾದಿ, ಜನಪರ ಹೋರಾಟಗಾರ ಎಸ್.ಆರ್.ಹಿರೇಮಠ ಇವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : ಘನತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಬೆಂಕಿ: ಆವರಗೊಳ್ಳ ಗ್ರಾಮಕ್ಕೆ ಹಬ್ಬಿದ ವಿಷ ಹೊಗೆ