ಜಗಳೂರು : ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಪಟ್ಟಣದಲ್ಲಿ ಪ.ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಮಟೆ ಚಳುವಳಿ ನಡೆಸಿ ಗ್ರೇಡ್ 2 ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಜಿ.ಎಚ್ ಶಂಭುಲಿಂಗಪ್ಪ ಮಾತನಾಡಿ, ಮಾದಿಗ ಸಮಯದಾಯ ಈ ದೇಶದ ಮೂಲ ನಿವಾಸಿಗಳು, ಆದರೆ ನಮ್ಮವರು ಸ್ವತಂತ್ರö್ಯವಾಗಿ ಬದುಕು ಕಟ್ಟಿಕೊಳ್ಳಲು ಪಟ್ಟಭದ್ರಾ ಹಿತಾಸಕ್ತಿಗಳು ಬಿಡುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿ ಮಾದಿಗರನ್ನು ಅಸ್ಪೃಶ್ಯರೆಂಬ ಕೀಳರಿಮೆಯಿಂದ ನಡೆಸಿಕೊಂಡು ಬಂದಿದ್ದಲ್ಲದೇ ದಬ್ಬಾಳಿಕೆ ನಡೆಸಿ ದೌರ್ಜನ್ಯ, ಅತ್ಯಾಚಾರ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಅಂತ ಸಮುದಾಯಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರು ದೇವರಂತೆ ಬಂದು ಭಾರತ ಸಂವಿಧಾನವನ್ನು ಬರೆದು ಮೀಸಲಾತಿಯನ್ನು ಕೊಟ್ಟಿದ್ದಾರೆ ಅದನ್ನು ಪಡೆಯಲು 3 ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಆದರೆ ನಮಗೆ ಇನ್ನು ನ್ಯಾಯ ಸಿಕ್ಕಿಲ್ಲ. ಹಾಗಾಗಿ ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಒಳಮೀಸಲಾತಿ ವರ್ಗಿಕರಣದಿಂದ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ಲಭಿಸುತ್ತದೆ. ಹಾಗಾಗಿ ಹೋರಾಟಗಳನ್ನೂ ಮನಗಂಡಿದ್ದ ಸರ್ಕಾರವೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡುವಂತೆ 2005 ರಲ್ಲಿ ರಚಿಸಿದ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗವು ರಾಜ್ಯದಲ್ಲಿ 101 ಎಸ್‌ಸಿ ಜಾತಿ ಸಮುದಾಯಗಳ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು 2012 ರಲ್ಲಿ ಸರಕಾರಕ್ಕೆ ಸಲ್ಲಿಸಿದ್ದಾರೆ ಅದರ ದತ್ತಾಂಶಗಳು ಸರಕಾರದ ಬಳಿ ಇದೆ ಎಂದರು.
ಚಲವಾದಿ ಸಮಾಜದ ಮುಖಂಡ ವೀರಸ್ವಾಮಿ ಮಾತನಾಡಿ, ಮಾದಿಗ ಮತ್ತು ಚಲವಾದಿ ಸಹೋದರ ಸಮುದಾಯಗಳಾಗಿವೆ. ಎರಡು ಜನಾಂಗವು ಜಾತಿ ವ್ಯವಸ್ಥೆಯಲ್ಲಿ ನೋವು ಅನುಭವಿಸಿದ್ದೇವೆ. ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪರಿಗಣಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
Read also : Davanagere | ಸತತ ಮಳೆ : ತುಂಬಿ ಹರಿದ ಹಳ್ಳ , ಕೊಳ್ಳಗಳು
ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಅಹಿಂದ ನಾಯಕ ಸಿ.ಎಂ ಸಿದ್ದರಾಮಯ್ಯನವರು ಅನ್ಯಾಯಕ್ಕೆ ಒಳಗಾಗದ ಮಾದಿಗ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಮುಂದಾಗಬೇಕು. ಚುನಾವಣೆಯೂ ಮುನ್ನ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ನಮ್ಮ ಋಣ ತೀರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರು ವಿಧಾನ ಸೌಧವನ್ನು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪೂಜಾರಿ ಸಿದ್ದಪ್ಪ, ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ಹನುಮಂತಾಪುರ ಸತೀಶ್, ಬೈರಾನಾಯಕನಹಳ್ಳಿ ಚಂದ್ರಪ್ಪ, ನಿಬಗೂರು ಮುನಿಯಪ್ಪ, ಗುತ್ತಿದುರ್ಗ ರುದ್ರೇಶ್, ಮೂಡಲ ಮಾಚಿಕೆರೆ ಸತೀಶ್, ಮೆದಗಿನಕೆರೆ ತಿಮ್ಮೇಶ್, ಚಲವಾದಿ ನಿಜಲಿಂಗಪ್ಪ, ಯಲ್ಲಪ್ಪ, ಗೋಡೆ ದುರುಗಪ್ಪ, ಪಲ್ಲಾಗಟ್ಟೆ ರಂಗಪ್ಪ, ರೇಣುಕೇಶ್, ಗೌರಿಪುರ ಸತ್ಯಮೂರ್ತಿ ಸೇರಿದಂತೆ ಮತ್ತಿತರರಿದ್ದರು.