ದಾವಣಗೆರೆ (Davanagere): ದೇಶದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದ್ದು,ಅದರಲ್ಲೂ ಗ್ರಾಮೀಣ ಮಹಿಳೆಯರ ಕಾಲೇಜು ಶಿಕ್ಷಣ ಕ್ಕೆ ಸೇರುವ ಅನುಪಾತ ತುಂಬಾನೇ ಕಡಿಮೆಯಿದ್ದು,ಇಂತಹ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ಎಸ್.ಸಿ.ಎಸ್.ಜಿ ಪದವಿಪೂರ್ವ ಕಾಲೇಜು ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ರಾಜ್ಯ ದಲ್ಲಿಯೇ ಮಾದರಿಯಾಗಿದ್ದು.ಈ ಮಹತ್ವಪೂರ್ಣ ಶಿಕ್ಷಣ ದಾಸೋಹ ಕಾರ್ಯ ಶ್ಲಾಘನೀಯ ವಾದುದು ಎಂದು ಲೇಖಕ, ವಿಶ್ರಾಂತ ಪ್ರಾಧ್ಯಾಪಕ ಡಾ.ಗಂಗಾಧರಯ್ಯ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ತಿಗೆರೆ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವೈಭವ್-2025 ರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಶಿಕ್ಷಣ ಬಡವರಿಗೆ,ಹಿಂದುಳಿದವರಿಗೆ, ಗ್ರಾಮೀಣ ರೈತರು ಮತ್ತು ಕೂಲಿಕಾರರ ಮಕ್ಕಳಿಗೆ ದುಬಾರಿಯಾದ ಈ ಸಂದರ್ಭದಲ್ಲಿ ಕಾಲೇಜು ಹಂತದ ಕಲಿಕೆಗೆ ಲಕ್ಷ,ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಶಿಕ್ಷಣ ವ್ಯಾಪಾರೀಕರಣ ವಾಗಿ,ಹಣಗಳಿಸುವ ದಂಧೆಯಾಗಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ವ್ಯಾಪಾರೀಕರಣ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ತಿಗೆರೆ ಗ್ರಾಮದಲ್ಲಿರುವ ಎಸ್.ಸಿ.ಎಸ್.ಜಿ. ಪದವಿಪೂರ್ವ ಕಾಲೇಜು ಗ್ರಾಮೀಣ ವಿದ್ಯಾರ್ಥಿನಿಯರಿಗೆ ಎರೆಡು ವರ್ಷ ಉಚಿತ ಶಿಕ್ಷಣ ನೀಡಿ ಅವರನ್ನು ಮುಂದಿನ ಪದವಿ ಶಿಕ್ಷಣವನ್ನು ಪಡೆಯಲು ಕಳಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ಆಸಕ್ತಿ ಇದೆ, ಪ್ರೊತ್ಸಾಹ,ಮತ್ತು ಪ್ರೇರಣೆಯ ಕೊರತೆ ಇದ್ದು,ಇಂತಹ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕಾಳಜಿ, ಕಳಕಳಿ ಯಿಂದ ಈ ಸಂಸ್ಥೆ ಮಾಡುತ್ತಿರುವ ನಿಸ್ವಾರ್ಥ ಸಮಾಜ ಸೇವೆ ಅನುಕರಣೀಯ.ಇದರ ಸದುಪಯೋಗವನ್ನು ತಾವು ಪಡೆದು ಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆನೀಡುತ್ತಾ ತಂದೆ ತಾಯಿಗಳಿಗೆ ಗೌರವ ನೀಡಿ,ಗುರು ಹಿರಿಯರಲ್ಲಿ, ಕಲಿತ ಶಿಕ್ಷಣ ಸಂಸ್ಥೆಗಳಿಗೆ ಕೃತಜ್ಞತಾಭಾವನೆ ಇರಲಿ ಎಂದು ತಿಳಿಸುತ್ತಾ ಗುಣಮಟ್ಟದ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ ಪ್ರೊ. ಕೆ.ಆರ್.ಜಯದೇವಪ್ಪ ಮಾತನಾಡಿ, ತಾವು ಈ ಸಂಸ್ಥೆ ಕೊಟ್ಟಿರುವ ಉದ್ದೇಶ, ಆಶಯ ಮತ್ತು ತಾವು ಅನುಭವಿಸಿದ ನೋವುಗಳು,ಸವಾಲುಗಳ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಹೆಚ್.ಚೆನ್ನಪ್ಪ ಪಲ್ಲಾಗಟ್ಟಿ ಮಾತನಾಡಿ, ಈ ಸಂಸ್ಥೆಯ ಆರಂಭ ಹಣ ಗಳಿಸುವ ಉದ್ದೇಶದಿಂದ ಕೂಡಿರದೇ ಬಡವರು, ಹಿಂದುಳಿದವರಿಗೆ ಹಾಗೂ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಉಚಿತವಾಗಿ ದೊರೆಯಲಿ ಎಂಬ ಸದಾಶಯ ದಿಂದ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಶೋಷಣೆಗೆ ಒಳಗಾಗದೇ ಅವರೂ ಸಹ ಸ್ವಾಭಿಮಾನದಿಂದ ಬದುಕು ನಡೆಸಲಿ, ಜೀವನದಲ್ಲಿ ಸುಖ, ಸಂತೋಷ ಮತ್ತು ತೃಪ್ತಿ ಯಿಂದ ಬದುಕು ನಡೆಸಲಿ ಎಂಬ ಸದುದ್ದೇಶವೇ ಕುರಿತಾಗಿ ತಮಗಿರುವ ಕಾಳಜಿ,ಕಳಕಳಿ,ಸೇವಾಭಾವನೆ, ನಿಸ್ವಾರ್ಥತೆ ಕುರಿತು ವಿವರಿಸಿದರು.
ಪ್ರಾಂಶುಪಾಲ ಪ್ರೊ.ಹೆಚ್.ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತವನ್ನು ಪ್ರೊ.ಸಲ್ಮಾ.ಬಿ.ಎಸ್. ವರದಿ ವಾಚನ.ಪ್ರೊ.ಗುಡ್ಡಪ್ಪ ಆರ್.ಓಲೇಕಾರ್. ವಂದನಾರ್ಪಣೆ ಪ್ರೊ.ಕೆ.ಎಂ.ಬಸವರಾಜಪ್ಪ ಮಾಡಿದರು.
15 ಕ್ಕೂ ಹೆಚ್ಚು ವಿದ್ಯಾರ್ಥಿ ವೃಂದ ತಮ್ಮ ಅನಿಸಿಕೆ ಹಂಚಿಕೊಂಡರು. ವಿವಿಧ ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ, ತರಗತಿಗೆ ಹೆಚ್ಚು ಫಲಿತಾಂಶ ಪಡೆದ ಹಾಗೂ ಅತ್ಯುತ್ತಮ ವಿದ್ಯಾರ್ಥಿ ವೃಂದ ಕ್ಕೆ ಸನ್ಮಾನ,ಬಹುಮಾನ, ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಪಾಲಕರು ಗ್ರಾಮದ ಜನತೆ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
Davanagere | ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ : ಎಸ್ ಡಿ ಪಿ ಐ ಆಗ್ರಹ