ದಾವಣಗೆರೆ (Davanagere): ಕರ್ನಾಟಕ ರಾಜ್ಯದ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ, ಸ್ವಾಭಿಮಾನಿ ಕ್ರಾಂತಿ ಮೊಳಗಿಸಲಾಗುತ್ತದೆ. ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಿಚಾರ ಜನರ ಮುಂದಿಡಲಾಗುವುದು. ಕನಿಷ್ಠ ಮೂರು ಬಾರಿಯಾದರೂ ತಾಲೂಕುಗಳಿಗೆ ಭೇಟಿ ನೀಡಬೇಕೆಂಬ ಬಯಕೆ ಇದೆ. 2026ರ ಡಿಸೆಂಬರ್ ಒಳಗೆ ಈ ಅಭಿಯಾನ ಪೂರ್ಣಗೊಳಿಸುವ ಗುರಿ ಇದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಘೋಷಿಸಿದರು.
ನಗರದ ಎಸ್. ಎಸ್. ಬಡಾವಣೆಯ ಎ ಬ್ಲಾಕ್ 10 ನೇ ಕ್ರಾಸ್ ನಲ್ಲಿರುವ ಸ್ವಾಭಿಮಾನಿ ಬಳಗದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ “ಸಂವಿಧಾನವೇ ನಮ್ಮ ಸಿದ್ಧಾಂತ” ಸಂಘಟನಾ ಸಭೆ ಹಾಗೂ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳ ರಚನೆ ಹಾಗೂ ಮೈಸೂರಿನಲ್ಲಿ ನಡೆಯುವ 2 ದಿನಗಳ ನಾಯಕತ್ವ – ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸಂಘಟನೆ ಬಗ್ಗೆ ಮುಕ್ತ ಚರ್ಚೆ ನಡೆಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಸ್ವಾಭಿಮಾನಿ ಬಳಗ ಕ್ರಾಂತಿ ಎಬ್ಬಿಸಲಿದೆ. ಹೆಚ್ಚಿನ ವಿರೋಧಗಳು, ಟೀಕೆಗಳು, ಬಲಾಢ್ಯ ನಾಯಕರ ಪ್ರತಿರೋಧ ಬರಬಹುದು. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಕೇವಲ ಎಂಟು ತಿಂಗಳಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದ್ದೆ. ದಾವಣಗೆರೆಯಂತೆ ಪ್ರತಿ ತಾಲೂಕಿನಲ್ಲಿಯೂ ಕನಿಷ್ಠ 50 ಸಾವಿರ ಸಾವಿರ ಸ್ವಾಭಿಮಾನಿಗಳು ಇರಬೇಕು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. 15ರಿಂದ 20 ದಿನಗಳ ಕಾಲ ಕಲ್ಯಾಣ ಕರ್ನಾಟಕದಲ್ಲಿ ಉಳಿದು ಪ್ರತಿ ತಾಲೂಕಿಗೂ ಹೋಗುತ್ತೇನೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಜ್ಞೆ ಮೂಡಿಸುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.
ನಮ್ಮ ಹೋರಾಟ ಕ್ರೆಡಿಟ್ ಪಡೆಯಲು ಅಲ್ಲ. ನಿಧಾನವಾದರೂ ಮುಂದೊಂದು ದಿನ ದೊಡ್ಡ ಜವಾಬ್ದಾರಿ ಸಿಗುತ್ತದೆ ಎಂಬ ದೃಢವಾದ ನಂಬಿಕೆ ಇದೆ. ದಾವಣಗೆರೆಯಲ್ಲಿ ಇದುವರೆಗೆ ಮಾಡಿದ ಕೆಲಸ ಬೇರೆ ಕಡೆ ಮಾಡಿದ್ದರೆ ನಾನು ಗೆದ್ದೇ ಗೆಲ್ಲುತ್ತಿದ್ದೆ. ದಾವಣಗೆರೆ ನನ್ನ ಹುಟ್ಟೂರು. ಎಲ್ಲರಲ್ಲೂ ಅರಿವು ಮೂಡಬೇಕು. ಪ್ರಶ್ನಿಸುವ ಧೈರ್ಯ ಬರಬೇಕೆಂಬ ಕಾರಣಕ್ಕೆ ಆಯ್ದುಕೊಂಡೆ. ಜನರು ಪ್ರೀತಿ ತೋರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದು ರೂಪಾಯಿ ಹಂಚದೇ ಇದ್ದರೂ 43 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ಇದು ಜನರು ನೀಡಿರುವ ಪ್ರೀತಿ ಅಲ್ಲವೇ ಎಂದು ಪ್ರಶ್ನಿಸಿದರು.
ಹರಿಹರ ತಾಲೂಕಿನಲ್ಲಿನ ರಸ್ತೆ, ಭೈರನ ಪಾದ ನೀರಾವರಿ ಯೋಜನೆ ಜಾರಿ, ಕೆರೆಗಳಿಗೆ ನೀರು ಸಿಗಬೇಕೆಂಬ ಜನರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಹರಿಹರಕ್ಕೆ ಹೋದರೆ ಇಲ್ಲಿಗೆ ಬರಲು ಅನುಮತಿ ನೀಡಿದ್ಯಾರು ಎಂಬ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿರುವುದು ವಿಪರ್ಯಾಸ. ನಾನು ಮದುವೆಯಾಗಿರುವುದು ಹರಿಹರದವರನ್ನು. ಈ ತಾಲೂಕಿನ ಅಳಿಯ ನಾನು. ನಮ್ಮಲ್ಲಿ ನಿಸ್ವಾರ್ಥ ಸೇವೆ ಮಾಡಬೇಕೆಂಬ ಹಂಬಲ ಇದ್ದಾಗ ಸ್ವಾರ್ಥ ನಶಿಸಿ ಹೋಗುತ್ತದೆ. ಯಾರೊಟ್ಟಿಗೂ ರಾಜಿ ಆಗುವ ಪ್ರಶ್ನೆಯೇ ಇಲ್ಲ. ಇದರಿಂದ ಮತ್ತಷ್ಟು ಗಟ್ಟಿಯಾಗುತ್ತಲೇ ಹೋಗುತ್ತೇವೆ. ಕಲ್ಲು ಬಿಸಾಡಿಸಿದರೆ ಸಂಗ್ರಹಿಸಿ ಮನೆ ಕಟ್ಟಬೇಕು ಎನ್ನುವ ಕನಸು ಕಂಡವರು ನಾವು. ಜನಸೇವೆ ಮಾಡದವರ ವಿರೋಧ ಮಾಡುತ್ತಾರೆ ಎಂದರೆ ಅಧಿಕಾರಸ್ಥರು ಮತ್ತು ಜಡ್ಡುಗಟ್ಟಿದ ವ್ಯವಸ್ಥೆಗೆ ಭಯ ಬಂದಿದೆ ಎಂದೇ ಅರ್ಥ. ನಮ್ಮ ಶಕ್ತಿಯೂ ಅವರಿಗೆ ಅರಿವಾಗಿದೆ ಎಂದು ತಿಳಿಸಿದ ಅವರು, ದಾವಣಗೆರೆಯಲ್ಲಿ ನಾಲ್ಕು ದಶಕಗಳ ಹಿಂದೆ ಪಾರುಪತ್ಯ ಸಾಧಿಸಿದ್ದವರು ಇಂದು ಗುಲಾಮರಂತಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಭಯಮುಕ್ತ ವಾತಾವರಣ ನಿರ್ಮಾಣ ಆದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ. ದಾಸ್ಯ, ಗುಲಾಮಗಿರಿಯತ್ತ ಸಾಗಿದರೆ ಶಕ್ತಿ ಕುಂಠಿತವಾಗುತ್ತದೆ. ರಾಜಕಾರಣಕ್ಕೆ ಹೆದರಿ, ಸಣ್ಣಪುಟ್ಟ ಹುದ್ದೆ ಹೋಗುತ್ತವೆ ಎಂಬ ಕಾರಣಕ್ಕೆ ದಾಸರಾಗಿ ಕೆಲವರು ಬದುಕುತ್ತಿದ್ದಾರೆ. ಅವರಿನ್ನೂ ಭಯದಿಂದ ಹೊರಗೆ ಬಂದಿಲ್ಲ. ಭಯದಿಂದ ಜನರನ್ನು ಹೊರ ತರಲು ಸಾಧ್ಯವಿರುವುದು ಶಿಕ್ಷಣದಿಂದ ಮಾತ್ರ. ಇಂದಿನ ಶೇಕಡಾ 90ರಷ್ಟು ಮಕ್ಕಳಿಗೆ ನ್ಯಾಯಯುತ ಮತ್ತು ಭಯಮುಕ್ತ ವಿದ್ಯಾಭ್ಯಾಸ ಸಿಗುತ್ತಿಲ್ಲ ಎಂದೆನಿಸುತ್ತಿದೆ. ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ನಡೆಸಿದಾಗ ಇದು ಮನವರಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲ, ಗ್ರಂಥಾಲಯ ಇದ್ದರೂ ಕಾರ್ಯಾಚರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಭಿಮಾನ ಇದ್ದವರು ಬೇರೆಯವರ ಬಳಿ ಹೋಗಿ ಬೇಡುವುದಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ನಾಯಕರು ತಪ್ಪು ಎಂದರೆ, ಜನರು ಸರಿ ಎಂದರು. ಸಿದ್ದರಾಮಯ್ಯ, ಸಚಿವರ ಬಳಿ ಗುರುತಿಸಿಕೊಳ್ಳುವುದು, ಹಿಂದೆ ಮುಂದೆ ಓಡಾಡೋದು, ಮನೆಯೊಳಗೆ ಭಯವಿಲ್ಲದೇ ಓಡಾಡಿದರೆ ಅದೇ ದೊಡ್ಡ ಸಾಧನೆ ಎಂದು ಕೆಲವರು ಭಾವಿಸಿದ್ದಾರೆ. 20 ವರ್ಷ ಹಿಂಬಾಲಕರಾಗಿ ಓಡಾಡಿ ಸಣ್ಣಪುಟ್ಟ ಹುದ್ದೆ ಪಡೆದು ತೃಪ್ತಿಪಟ್ಟುಕೊಳ್ಳುತ್ತಾರೆ. ಸ್ವಾಭಿಮಾನಿಗಳ ಬೆಂಬಲಿಸಿದರೆ ಇದಕ್ಕೆ ಕುತ್ತು ಬರುತ್ತೆ ಎಂಬ ಭಯ ಅವರಲ್ಲಿ ಇದೆ. ನಾನು ಸ್ವಾರ್ಥಿ ಆಗಿದ್ದರೆ ಸಿದ್ದರಾಮಯ್ಯರ ಕಾರಿನಲ್ಲೂ ಪ್ರಯಾಣಿಸಬಹುದಿತ್ತು. ಸಾಮಾನ್ಯನಾಗಿ ಐಎಎಸ್ ಇನ್ ಸೈಟ್ಸ್ ಸಂಸ್ಥೆ ಹುಟ್ಟು ಹಾಕಿದ್ದೇನೆ. ಕಷ್ಟಪಟ್ಟು ಕಟ್ಟಿದ್ದೇನೆ. ಯಾವ ಪಕ್ಷದವರೊಂದಿಗೆ ವ್ಯವಹಾರ ಹೊಂದಿಲ್ಲ. ರಾಜಕಾರಣಿಗಳ ಬಳಿ ಏನನ್ನೂ ಕೇಳಿಕೊಂಡಿಲ್ಲ. ಸ್ವಾಭಿಮಾನ ಉಳಿಸಿಕೊಂಡು ಬಂದಿದ್ದೇನೆ. ನಿಧಾನ ಆದರೂ ಪರವಾಗಿಲ್ಲ, ರಾಜಕಾರಣದಲ್ಲಿ ಮುಂದೆ ಉಜ್ವಲ ಭವಿಷ್ಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಮರಾಠಿಗರು ಕಲ್ಲು ಹೊಡೆದಾಗ ಕನ್ನಡ ಜಾಗೃತವಾಗುತ್ತದೆ. ಆಗ ಭಾವಾನಾತ್ಮಕವಾಗಿ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತದೆ. ಆದ್ರೆ, ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಸರ್ಕಾರಿ ಶಾಲೆಗಳು ಉಳಿಯುವ ಜೊತೆಗೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಳಗದ ಪ್ರಮುಖರಾದ ರಾಜು ಮೌರ್ಯ, ವಿರೂಪಾಕ್ಷಪ್ಪ ಪಂಡಿತ್, ಗೀತಾ ಮುರುಗೇಶ್, ಕೇಶವಮೂರ್ತಿ, ಗಂಗಾಧರ್, ಪುರಂದರ ಲೋಕಿಕೆರೆ, ಶಿವಕುಮಾರ್ ಡಿ. ಶೆಟ್ಟರ್, ಮೊಹಮ್ಮದ್ ಸಾಧಿಕ್, ಎಂ. ಪ್ರವೀಣ್ ಕುಮಾರ್, ಎಂ. ರಾಮಕೃಷ್ಣ, ಸುದೀಪ್ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯದ ಬೇರೆ ಬೆೇರೆ ಜಿಲ್ಲೆಗಳಿಂದಲೂ ಸ್ವಾಭಿಮಾನಿ ಬಳಗದ ಕಾರ್ಯವೈಖರಿ ಮೆಚ್ಚಿ ಆಗಮಿಸಿದ್ದು ವಿಶೇಷವಾಗಿತ್ತು.
ನಾಲ್ಕು ಕ್ಷೇತ್ರಗಳಲ್ಲಿಯೂ ಒತ್ತಡ
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಾಲ್ಕು ಕ್ಷೇತ್ರಗಳಿಂದಲೂ ಒತ್ತಡ ಇದೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊನ್ನಾಳಿ, ಹರಿಹರ, ದಾವಣಗೆರೆ ಉತ್ತರ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜನರು ಕೇಳಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರ ಈವರೆಗೂ ತೆಗೆದುಕೊಂಡಿಲ್ಲ ಎಂದು ಜಿ. ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದರು.