ದಾವಣಗೆರೆ (Davanagere) : ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದು, ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಮತ್ತಿ ಗ್ರಾಮದಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಹಾಗೂ ಮತ್ತಿ ಗ್ರಾಪಂ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನೂತನ 556 ನೇ ಶುದ್ಧಗಂಗಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕಾಲಿರಿಸಿ ಗಣನೀಯವಾದ ಸಾಧನೆಯನ್ನು ಮಾಡಿದ್ದಾರೆ. ಇಂದು ಪುರುಷರಿಗಿಂತ ಮಹಿಳೆಯರೇನೂ ಕಡಿಮೆಯಿಲ್ಲ ಎಂಬ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ತನ್ನ ಜ್ಞಾನವನ್ನು ಬೆಳೆಸಿಕೊಂಡು ಸಮಾಜದ ಎಲ್ಲಾ ರಂಗಗಳಲ್ಲೂ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾಳೆ ಎಂದು ಹೇಳಿದರು.
ನೀರಿನ ಬವಣೆ ಆಗದಂತೆ ಎಚ್ಷರಿಕೆ ವಹಿಸಿ :
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ತಪ್ಪಿಲ್ಲ. ಇದು ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಮುಂಜಾಗ್ರತೆ ವಹಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಪ್ರದೇಶದ ಜನರು ಆರೋಗ್ಯವಂತರಾಗಿರಬೇಕು ಎಂಬ ಒಳ್ಳೆಯ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಗ್ರಾಮಸ್ಥರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಒಂದು ಹಳ್ಳಿ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕೆಂದರೆ ಅಲ್ಲಿನ ಜನರಿಗೆ ಶುದ್ಧ ಕುಡಿಯವ ನೀರು, ಆರೋಗ್ಯ ಸೇವೆ ಮುಖ್ಯವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾಗಿದ್ದು, ಸಮಾಜದವಸ್ತರಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆ, ಮಕ್ಕಳು, ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಿದ್ದಾರೆ. ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಮುಂದುವರಿಸಿದ್ದಾರೆ. ಪಂಚ ಗ್ಯಾರಂಟಿ ನಿಲ್ಲಿಸುತ್ತಾರೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಗೃಹಲಕ್ಷ್ಮಿ ಹಣ ಪಾವತಿಸಲು ಸ್ವಲ್ಪ ತಡವಾಗಿರಬಹುದು. ವಿಳಂಬವಾದ ಎಲ್ಲಾ ಕಂತಿನ ಹಣವನ್ನು ಮಹಿಳೆಯರ ಖಾತೆ ಜಮಾ ಮಾಡಲಾಗುತ್ತದೆ. ನೀವು ಯಾರೂ ಗೊಂದಲಕ್ಕೆ ಒಳಗಾಗಬೇಡಿ ಎಂದರು.
Read also : Davanagere | ತಂದೆ-ತಾಯಿಗಳೇ ಮಕ್ಕಳಿಗೆ ಮಾದರಿ : ತ್ಯಾಗೀಶ್ವರಾನಂದಜೀ ಮಹಾರಾಜ್
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ನೀಲಕಂಠಪ್ಪ, ಉಪಾಧ್ಯಕ್ಷೆ ಕಮಲಮ್ಮ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ನಿರ್ದೇಶಕ ಲಕ್ಷ್ಮಣ, ಪಿಡಿಒ ಕೆ.ಸಿ.ವನಿತಾಬಾಯಿ, ಗ್ರಾಪಂ ಸದಸ್ಯರಾದ ಸತೀಶ್, ಕೆ.ಬಿಮಂಜುನಾಥ್, ಮಂಜುಳ ಸುರೇಶ್, ಶಿಲ್ಪ ಟಿ.ಆರ್.ಹನುಮಂತಪ್ಪ, ಗ್ರಾಮದ ಮುಖಂಡ ಹನುಮಂತಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗುತ್ತಿಗೆದಾರರ ವಿರುದ್ಧ ಅಸಮಾಧಾನ…
ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕೆಗಳನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸುತ್ತಿಲ್ಲ. ನಿರ್ವಹಣೆ ಇಲ್ಲದೆ ಘಟಕಗಳು ಸ್ಥಗಿತಗೊಳ್ಳುತ್ತಿವೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರಬಹುದು ಎಂಬ ದೂರುಗಳು ಬರುತ್ತಿವೆ. ಒಂದು ವೇಳೆ ಶಾಮೀಲಾಗಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಒದಗಿಸುವುದು
ಅಧಿಕಾರಿಗಳ ಜವಾಬ್ದಾರಿ. ನೀರಿನ ಘಟಕಗಳ ನಿರ್ವಹಣೆ ಗುತ್ತಿಗೆದಾರರಿಗೆ ವಹಿಸದೆ ಗ್ರಾಪಂಗಳಿಗೆ ವಹಿಸಬೇಕು. ಆಗ ಘಟಕಗಳು ಸರಿಯಾಗಿ ನಿರ್ವಹಣೆ ಆಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.