ದಾವಣಗೆರೆ (Davanagere): ‘ಅಲ್ಲಿ ತಂದೆ-ತಾಯಿಯರೇ ದೇವರಾಗಿದ್ದರು. ತಮ್ಮ ಮಕ್ಕಳೇ ಪೂಜಾರಿಗಳಾಗಿದ್ದರು. ಎಲ್ಲರ ಕಣ್ಣಂಚಿನಲ್ಲೂ ನೀರು ತುಂಬಿ ಬಂದಿತ್ತು. ಎಲ್ಲರ ಹೃದಯಗಳು ತುಂಬಿ ಬಂದಿದ್ದು, ‘ಧನ್ಯತೆಯ ಭಾವ’ ಮನೆ ಮಾಡಿತ್ತು. ಇದು, ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಮಕ್ಕಳಿಂದ ನಡೆದ ಹೃದಯಸ್ಪರ್ಶಿ ‘ಮಾತೃ-ಪಿತೃ’ ವಂದನಾ ಕಾರ್ಯಕ್ರಮದಲ್ಲಿ ಕಂಡು ಬಂತು.
ತಂದೆ-ತಾಯಿಯರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದ ಮಕ್ಕಳು, ತಿಲಕ, ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ಪ್ರಾರ್ಥನೆ ಪಠಿಸುವ ಮೂಲಕ ಅವರ ಪಾದಕ್ಕೆ ನಮಿಸಿ ‘ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ’ ಎಂದು ಹೆತ್ತವರ ಆಶೀರ್ವಾದ ಪಡೆದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್, ಇದೊಂದು ಹೃದಯಸ್ಪರ್ಶಿ, ಭಾವನಾತ್ಮಕ, ಭಕ್ತಿಭರಿತವಾದ ದೈವಿಕವಾದ ಕಾರ್ಯಕ್ರಮ. ವಿದ್ಯಾರ್ಥಿಗಳೊಂದಿಗೆ ನಾವು ಸಹ ನಮ್ಮ ತಂದೆ-ತಾಯಿಗಳು ಕಣ್ಣೇದುರಿಗೆ ಇಲ್ಲದಿದ್ದರೂ ಮಾನಸಿಕವಾಗಿ ಪೂಜೆ ಸಲ್ಲಿಸಿ, ಮನಃಪೂರ್ವಕವಾಗಿ ಆನಂದಿಸಿದ್ದೇವೆ ಎಂದರು.
ತಂದೆ-ತಾಯಿಗಳ ಪಾದಪೂಜೆ ನೆರವೇರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಈಶ್ವರಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ಅದೃಷ್ಟ ದೊರೆತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದೊಂದು ಜೀವನದ ತಿರುವಿನಂಶವಾಗಿದೆ. ಪೋಷಕರು ಮಕ್ಕಳ ಭವಿಷ್ಯಕ್ಕೆ ಸಮಯವನ್ನು ಕೊಡಬೇಕು. ಪೋಷಕರು ಆತುರತೆಯನ್ನು ಮತ್ತು ಹೋಲಿಕೆ ಮಾಡುವುದನ್ನು ಬೀಡಬೇಕು. ಪರಿವರ್ತನೆ ಕೇವಲ ಮಕ್ಕಳಲ್ಲಿ ಮಾತ್ರವಲ್ಲ, ತಂದೆ ತಾಯಿಯರಲ್ಲೂ ಆಗಬೇಕೆಂದು ಕಿವಿಮಾತು ಹೇಳಿದರು.
ಪೋಷಕರಿಗೆ ನಿಸ್ವಾರ್ಥತೆ, ಶಾಂತಿ, ಸಹನೆ ಇರಬೇಕಾಗುತ್ತದೆ. ತಂದೆ-ತಾಯಿಗಳೇ ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳ ಮೇಲೆ ಒತ್ತಡ ಹೇರದೇ, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅದೇ ಕ್ಷೇತ್ರದಲ್ಲಿ ಮುಂದುವರೆದು ಸಾಧಿಸಲು ಪ್ರೋತ್ಸಾಹಿಸಬೇಕು. ಮಕ್ಕಳು ಎಷ್ಟೇ ಹಣ ಗಳಿಸಿದರೂ, ತಂದೆ-ತಾಯಿಯರಿಗೆ ವೃದ್ಧಾಪ್ಯದಲ್ಲಿ ಪ್ರೀತಿಯ ಆಸರೆಯಾಗಿರಬೇಕು. ಅವರಿಗೆ ಊರುಗೋಲಿನ ಅವಶ್ಯಕತೆ ಬೀಳದಂತೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಶಾಲೆಯ ಸಂಸ್ಥಾಪಕರಾದ ಮಾತೃಸ್ವರೂಪಿ ಬಿ.ಆರ್.ಶಾಂತಕುಮಾರಿ ಅವರು, ಕಾರ್ಯಕ್ರಮದ ಮೂಲ ಕಾರಣಕರ್ತರು. ಅವರು ನಮ್ಮನ್ನಗಲಿದರೂ, ಅವರ ಆದರ್ಶಗಳು ಮಾತ್ರ ನಮ್ಮೆಲ್ಲಿ ಮೇಳೈಸಿವೆ. ಯಾರು ತಂದೆ-ತಾಯಿಗಳನ್ನು ಗೌರವಿಸುತ್ತಾರೋ, ಅವರನ್ನು ಎಲ್ಲರು ಗೌರವಿಸುತ್ತಾರೆ. ತಂದೆ-ತಾಯಿಗಳ ಋಣವನ್ನು ಏನೂ ಮಾಡಿದರೂ ತೀರಿಸಲಾಗುವುದಿಲ್ಲ ಎಂದರು.
Read also : Davanagere | ರಾಜ್ಯ ಬಜೆಟ್‌ನಲ್ಲಿ ಹೊರಗುತ್ತಿಗೆ ನೌಕರರಿಗೆ ಅನ್ಯಾಯ
ತಾಯಿಯ ಜೋಗುಳ ಎಷ್ಟು ಮುಖ್ಯವೋ, ತಂದೆಯ ಬೈಗುಳ ಅಷ್ಟೇ ಮುಖ್ಯ. ತಾಯಿಯ ಮುದ್ದು ಮಾತು ಎಷ್ಟು ಮುಖ್ಯವೋ, ತಂದೆಯ ಬುದ್ಧಿಮಾತು ಅಷ್ಟೇ ಮುಖ್ಯ. ನಮ್ಮ ಶಾಲೆಯಲ್ಲಿ ಕಲಿತ ಮೌಲ್ಯ ಶಿಕ್ಷಣದಿಂದ ಮುಂದಿನ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿರಿ. ನಿಸ್ವಾರ್ಥ ಪ್ರೇಮವನ್ನು ತಂದೆ-ತಾಯಿಗಳಲ್ಲಿ ಮಾತ್ರ ನೋಡಲು ಸಾಧ್ಯ. ತಂದೆ-ತಾಯಿ ಗುರುಗಳನ್ನು ಗೌರವಿಸಿ ಎಂದು ಸಲಹೆ ನೀಡಿದರು.
ಶಾಲಾ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ವಂದಿಸಿದರು. ಶಿಕ್ಷಕಿ ಸವಿತಾ ಎನ್.ಸ್ವಾಮಿ ನಿರೂಪಿಸಿದರು. ಬಿ.ಶ್ರೀದೇವಿ ಮಾತಾ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಶಾಲೆಯ ಸಂಗೀತ ಶಿಕ್ಷಕಿ ವಿದ್ಯಾ ಹೆಗಡೆ ಭಾವಗೀತೆ ಹಾಡಿದರು.
ತಾಯಿಯ ಮಡಿಲು ಎಷ್ಟು ಮುದ ನೀಡುತ್ತದೆಯೋ, ತಂದೆಯ ಹೆಗಲು ಅಷ್ಟೇ ಮುದ ನೀಡುವುದು. ಮಕ್ಕಳು ಎಂದೂ ತಂದೆ-ತಾಯಿ ಕಣ್ಣಲ್ಲಿ ನೀರು ತರಿಸುವ ಕೆಲಸ ಮಾಡಬಾರದು.
-ಎ.ಆರ್.ಉಷಾ ರಂಗನಾಥ್, ಶಾಲಾಡಳಿತ ಮಂಡಳಿ ಕಾರ್ಯದರ್ಶಿ.