ದಾವಣಗೆರೆ,ಮಾ.12 (Davanagere) : ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿ ಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ.ಎನ್ ಹೆಗಡೆ ತಿಳಿಸಿದರು.
ಬುಧುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಹಿಳಾ ದಿನ ಆಚರಣೆಯೊಂದಿಗೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಏರ್ಪಡಿಸಲಾದ ಒಂದು ದಿನದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಮಹಿಳೆಯರಿಂದ ಪುರುಷರಿಗಿಂತ ಹೆಚ್ಚಾಗಿ ದುಡಿಸಿಕೊಂಡು ಕಡಿಮೆ ವೇತನ ನೀಡಿ, ಕೀಳಾಗಿ ಕಾಣುವ ಮೂಲಕ ಶೋಷಣೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆಯರು ಪ್ರಪಂಚದಲ್ಲಿ ಮಹಿಳೆಯರ ಅಸ್ತಿತ್ವ ಉಳಿಯಬೇಕಾದರೆ ಸಂಘಟಿತರಾಗಬೇಕು. ಸ್ತ್ರೀ ಅಬಲೆ ಅಲ್ಲ, ಸಬಲೆ. ಹೆಣ್ಣಿನ ಅಸ್ತಿತ್ವವನ್ನು ಮಹಿಳೆಯರೇ ಉಳಿಸಬೇಕು ಎಂದು ಮಹಿಳೆಯರು ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಿದರು.
ಮಹಿಳೆಯರ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದ್ದು, ಕೆಲವೇ ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ದಿನಕ್ಕೆ ಸಂಯುಕ್ತ ರಾಷ್ಟ್ರಗಳು ಒಗ್ಗೂಡಿ 1977 ರಲ್ಲಿ ವಿಶ್ವಸಂಸ್ಥೆ ಮೂಲಕ ಅಧಿಕೃತ ಅನುಮೋದನೆ ನೀಡಿ ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು. ವೇದ ಕಾಲದಲ್ಲಿರದ ಲಿಂಗ ತಾರತಮ್ಯವು ನಂತರದ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಅಸ್ತಿತ್ವ ಪಡೆದು ಮಹಿಳೆಯರನ್ನು ಹತ್ತಿಕ್ಕಲು ಆರಂಭಿಸಿತು. ಪುರುಷ ಪ್ರಧಾನ ಸಮಾಜವು ಸ್ತ್ರೀ ಸಮಾನತೆಯನ್ನು ಕಸಿದುಕೊಂಡು ಅತೀ ಹೆಚ್ಚು ಶೋಷಣೆಗೆ ಒಳಪಡಿಸಿ, ದೌರ್ಜನ್ಯವೆಸಗಿತು. ಇಂತಹ ಧಾರುಣ ಸ್ಥಿತಿಯಲ್ಲಿ ಅಕ್ಕಮಹಾದೇವಿ ಸೇರಿದಂತೆ ಎಲ್ಲಾ ಶಿವಶರಣೆಯರು ಕ್ರಾಂತಿಕಾರಿ ಕಹಳೆಯನ್ನು ಊದಿ, ಆಧ್ಯಾತ್ಮದತ್ತ ಹೆಜ್ಜೆ ಹಾಕಿದರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲಿ ಸಂಭ್ರಮಿಸುವಂತಹ ಸಾಧನೆ ಮಾಡಿದ್ದರೂ ಲಿಂಗ ಅಸಮಾನತೆ ಮತ್ತು ಪಕ್ಷಪಾತವನ್ನು ತೊಡೆದು ಹಾಕುವ ಸವಾಲುಗಳಿವೆ. ಇದನ್ನೂ ಕೂಡ ದಿಟ್ಟವಾಗಿ ಎದುರಿಸಿ ನಿಲ್ಲುವ ಶಕ್ತಿ ತೋರಬೇಕಿದೆ. ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರ, ಆಳಿನಂತೆ ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಇತ್ತೀಚಿಗೆ ಸ್ವಲ್ಪ ಬದಲಾವಣೆ ಕಾಣಲಾಗುತ್ತಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂತಹ ನಿರ್ಣಯಗಳು, ಸಂವಿಧಾನದ ಮೂಲಕ ಸಮಾನ ಅವಕಾಶ, ಶಿಕ್ಷಣದಿಂದಾಗಿ ಇಂದು ಹೆಣ್ಣು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರೂ ಅನೇಕ ಸವಾಲುಗಳು ಹಾಗೂ ಜವಾಬ್ದಾರಿಗಳಿವೆ ಎಂದರು.
ಮುಖ್ಯ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಲ್ಲಿ ಮಹಿಳೆಯರು ಇಂದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಗೆ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸುತ್ತಿದ್ದಾಳೆ. ಭಾರತೀಯ ನೆಲೆಯಲ್ಲಿ ಹೆಣ್ಣಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಆಕೆ ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದಾಳೆ. ಆದ ಕಾರಣ ತನಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಧನಾತ್ಮಕವಾಗಿ, ಸಂಸ್ಕøತಿಯ ನೆಲಗಟ್ಟಿನಲ್ಲಿ ಬಳಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ.ಎನ್ ಹೆಗಡೆ ಅವರು ಚಿಕ್ಕಮಂಗಳೂರಿಗೆ ವರ್ಗಾವಣೆ ಆಗುತ್ತಿರುವ ಪ್ರಯುಕ್ತ ಗೌರವಿಸಿ ಸನ್ಮಾನಿಸಲಾಯಿತು.
ಹಾವೇರಿ ಜಿಲ್ಲೆಯ ತಡಸ ಪೊಲೀಸ್ ಠಾಣೆಯ ಮಲ್ಲೇಶ.ಆರ್.ಜಾಲಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
Read also : ಅಕ್ರಮ ಗಣಿಗಾರಿಕೆ, ಕ್ರಷರ್ ನಡೆಯುತ್ತಿದ್ದರೂ ಮೌನ ಸರಿಯಲ್ಲ : ಜಿ. ಬಿ. ವಿನಯ್ ಕುಮಾರ್ ಆಕ್ರೋಶ
ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ.ಟಿ.ಎಂ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಬಿ.ಕೊಟ್ರೇಶ್ ಉಪಸ್ಥಿತರಿದ್ದರು.