ದಾವಣಗೆರೆ (Davanagere): ಹೊನ್ನಾಳಿ – ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಶಾಶ್ವತ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಆರುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಸಾಥ್ ನೀಡಿದರು.
ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದು, ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆರುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ನಿಯಮಬಾಹಿರ ಮತ್ತು ಕಾನೂನು ಮೀರಿ ನಡೆಸುತ್ತಿರುವ ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಈ ಹಿಂದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಗಳನ್ನು ನಡೆಸುತ್ತಿರುವುದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ಹಾನಿಯೂ ಸಂಭವಿಸಿದೆ. ಮನೆಗಳು ಬಿರುಕು ಬಿಟ್ಟಿವೆ. ಅಂತರ್ಜಲ ಮಟ್ಟ ಕುಸಿತಗೊಂಡಿದೆ. ವಾಯುಮಾಲಿನ್ಯದಿಂದಾಗಿ ರೋಗ ರುಜಿನಗಳು ಹರಡುತ್ತಿವೆ. ಪಶುಸಂಗೋಪನೆಯಲ್ಲಿ ಕುಂಠಿತಗೊಂಡಿದೆ. ಹಲವು ಸಮಸ್ಯೆಗಳು ಎದುರಾಗಿದ್ದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಗಳನ್ನು ನಡೆಸಲಾಗುತ್ತಿದೆ. ಜನರ ಆರೋಗ್ಯ ಮತ್ತು ಪರಿಸರ ದೃಷ್ಟಿಯಿಂದ ಕೂಡಲೇ ಸ್ಥಗಿತಗೊಳಿಸಬೇಕು. ಮತ್ತೆ ಯಾವುದೇ ಕಾರಣಕ್ಕೂ ತಲೆ ಎತ್ತಲು ಬಿಡಬಾರದು. ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು, ಗ್ರಾಮದ ಜನರಿಗೆ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುವುದು ಆಶ್ಚರ್ಯ ತಂದಿದೆ. ವಾಯು ಮಾಲಿನ್ಯ ಉಂಟಾಗಿದೆ. ಮನೆಯಲ್ಲಿ ಬಿರುಕು ಬಿಟ್ಟಿದ್ದು, ಜನರು ಆತಂಕದಲ್ಲಿಯೇ ವಾಸ ಮಾಡುತ್ತಿದ್ದಾರೆ. ಅನಧಿಕೃತವಾಗಿ ನಡೆಸುತ್ತಿರುವ ಗಣಿಗಾರಿಕೆ ನಿಲ್ಲಿಸಬೇಕು. ಕ್ರಷರ್ ಗಳ ಕಾರ್ಯಾಚರಣೆಯೂ ಸ್ಥಗಿತವಾಗಬೇಕು. ಆರುಂಡಿ ಗ್ರಾಮಸ್ಥರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದರು.
Read also : ವಾಷಿಂಗ್ಟನ್ ಯೂನಿವರ್ಸಿಟಿಯಿಂದ ಪ್ರೀತಿ ಗೆ ಡಾಕ್ಟರೇಟ್ ಪದವಿ
ಗ್ರಾಮ ಮತ್ತು ಜನರ ಉಳಿವಿನ ಹೋರಾಟ ಇದು. “ನಮ್ಮ ಪರಿಸರ ಉಳಿಸಲು ನಿಮ್ಮ ಸಹಕಾರ” ಎಂಬ ವಿನೂತನ ಹೋರಾಟ ಇದು. ಮನವಿ ಪತ್ರವನ್ನು ನೂರಾರು ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಅಲ್ಲಿ ಆಗುತ್ತಿರುವ ಅನಾಹುತಗಳನ್ನು ಗಮನಕ್ಕೆ ತಂದಿದ್ದೇವೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಮಾಹಿತಿ ನೀಡಿದರು.
ಮನವಿ ಸಲ್ಲಿಸುವ ವೇಳೆಯಲ್ಲಿ ಆರುಂಡಿ ಗ್ರಾಮದ ಹಿರಿಯ ಮುಖಂಡರಾದ ಸಿ. ಚಂದ್ರಪ್ಪ, ಶಿವಪ್ಪ, ಸತೀಶಪ್ಪ, ಬಿ. ಆರ್. ಪ್ರಕಾಶ್, ಶ್ರೀನಿವಾಸ್, ರಾಮಚಂದ್ರಪ್ಪ, ವೀರೇಶ್, ಮೂರ್ತೆಪ್ಪ, ಬೀರಪ್ಪ, ನರಸಿಂಹಪ್ಪ, ಸುರೇಶ್, ಕುಮಾರಪ್ಪ, ಹಾಲೇಶಪ್ಪ, ತಿಮ್ಮಣ್ಣ, ತಿಮ್ಮಜ್ಜರ ಶ್ರೀನಿವಾಸ್, ಜವಳಿ ಪ್ರಕಾಶ್ ಮತ್ತಿತರರು ಹಾಜರಿದ್ದರು.