ದಾವಣಗೆರೆ (Davanagere): ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿದ್ದ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಮಹಮದ್ ನಿಹಾಲ್ ಅಲಿಯಾಸ್ ಘಜನಿ, ರೋಷನ್ ಖಾನ್ ಮತ್ತು ಮಹಮದ್ ಅಬು ತಲಹಾ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮಹಮದ್ ಸಮೀರ್ ಪತ್ತೆ ಕಾರ್ಯ ಮುಂದುವರಿದಿದೆ.
ಹಳೆಯ ದ್ವೇಷ ಮತ್ತು ತನ್ನ ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಏ.1 ರಂದು ನಲ್ಲೂರಿನ ಸಂತೆ ಬೀದಿಯಲ್ಲಿ ಮಹಮದ್ ಜಾವಿದ್‍ನನ್ನು ಸ್ನೇಹಿತರಂತೆ ಮಾತನಾಡಿಸಿ ಕರೆದುಕೊಂಡು ಹೋಗಿ ಗ್ರಾಮದ ರುದ್ರಗೌಡ ಅವರ ಹೊಸ ಬಡಾವಣೆಯಲ್ಲಿ ರಾತ್ರಿ ವೇಳೆ ಚಾಕುವಿನಿಂದ ಚುಚ್ಚಿ ಜಾವಿದ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಮೃತನ ತಮ್ಮ ಮಹಮದ್ ರೆಹಮತ್‍ವುಲ್ಲಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಗಿರಿ ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳ ಪೈಕಿ ಮಹಮದ್ ನಿಹಾಲ್ ಅಲಿಯಾಸ್,. ರೋಷನ್ ಖಾನ್, ತಲಾಹ್‍ನನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಸಮೀರ್‍ನ ಪತ್ತೆ ಕಾರ್ಯ ಮುಂದುವರಿದಿದೆ.
Read also : ಸಚಿವರ ಸತತ ಪ್ರಯತ್ನ: ಅಂಬೇಡ್ಕರ್ ಭವನ ನಿರ್ಮಾಣದ ನಿವೇಶನ ಖರೀದಿಗೆ ಅನುದಾನ ಮಂಜೂರು
ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಂತೋಷ ವಿಜಯಕುಮಾರ್, ಮಂಜುನಾಥ ಹಾಗೂ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಶ್ ಕೆ.ಎನ್ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರನ್ನು ಒಳಗೊಂಡ ಒಂದು ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.