ದಾವಣಗೆರೆ (Davanagere): ‘ಹಣ-ಆಸ್ತಿ ಎಷ್ಟಿದ್ದರೇನು, ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ‘ಬ್ರಹ್ಮಕುಮಾರೀಸ್’ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಶಾಂತಿ-ಸಹನೆ ತುಂಬುವ ಮೂಲಕ ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತಿರುವ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು, ಮಾನವನನ್ನು ದೇವಮಾನವನನ್ನಾಗಿ ರೂಪಿಸುತ್ತಿವೆ ಎಂದರು.
ಯಾವುದೇ ಜಾತಿ, ಪಂತ, ಧರ್ಮ ಭೇದ ಭಾವವಿಲ್ಲದ ಸಂಸ್ಥೆ ಇದಾಗಿದೆ. ಇಲ್ಲಿ ಸ್ವಯಂ ಪರಮಾತ್ಮನನ್ನು ಪರಿಚಯ ಮಾಡಿಕೊಡುವ ಆಧ್ಯಾತ್ಮಿಕ ಚಿಂತನೆಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಇತರೆ ಗಳಿಗಿಂತ ಭಿನ್ನವಾಗಿದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರುವಲ್ಲಿ ಅಗ್ರಸ್ಥಾನದಲ್ಲಿದೆ. ಇಂತಹ ಸಂಸ್ಥೆಗೆ ಸಾರ್ವಜನಿಕರು ತನು, ಮನ, ಧನದಿಂದ ಪ್ರೋತ್ಸಾಹಿಸಬೇಕೆಂದರು.
ಈಗ ಭೂಮಿಪೂಜೆ ನೇರವೇರಿಸಲಾಗಿದೆ. ತ್ವರಿತವಾಗಿ ಕಟ್ಟಣ ನಿರ್ಮಾಣ ಪೂರ್ಣಗೊಂಡು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಈ ಭಾಗದ ಧಾರ್ಮಿಕ ಆಧ್ಯಾತ್ಮಿಕ ಕೇಂದ್ರವಾಗಿ ರೂಪಗೊಳ್ಳಲಿ. ಈ ಕಟ್ಟಡ ನಿರ್ಮಾಣಕ್ಕೆ ತಾವು ಕೂಡ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ರಾಜಯೋಗಿ ಬ್ರಹ್ಮಕುಮಾರ ಡಾ.ಬಸವರಾಜ ರಾಜಋಷಿ, ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ, ದಾವಣಗೆರೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ಅಕ್ಕ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗಣ್ಣ, ಪಂಚಣ್ಣ ಸೇರಿದಂತೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.