ದಾವಣಗೆರೆ (Davangere): ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಸ್ಥಾನ ಇದ್ದು, ಪ್ರವಾಸಿ ತಾಣವಾಗಬೇಕಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನೀರ್ಥಡಿ ಗ್ರಾಮದಲ್ಲಿ ಸೋಮವಾರ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ 15 ಲಕ್ಷ ರೂ. ಬಿಡುಗಡೆ ಮಾಡಿದ್ದು, ಗ್ರಾಮಸ್ಥರೆಲ್ಲರೂ ಸಹಕಾರ ನೀಡುವ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.
ನೀರ್ಥಡಿ ಗ್ರಾಮ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಪ್ರಸಿದ್ಧಿ ಪಡೆದಂತೆ. ಅದರಂತೆ ಗ್ರಾಮದಲ್ಲಿ ಅನೇಕ ದೇವಸ್ಥಾನಗಳು ಇವೆ. ಇದರಲ್ಲಿ ಪ್ರಮುಖವಾಗಿರುವುದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ. ಏಕೆಂದರೆ ಊರು ಕಾಯುವ ದೇವರೆಂದರೆ ಅದು ಶ್ರೀ ಆಂಜನೇಯ ಸ್ವಾಮಿ ಆಗಿದ್ದು, ಭಕ್ತರು ಬಂದು ದೇವರ ದರ್ಶನ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತರುದ್ರ ಮಹಾಸ್ವಾಮಿಗಳು, ಶಾಸಕರು 15 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು, ಕೆಡಿಮೆ ಬಂದರೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರ ಜೊತೆಗೆ ನಮ್ಮದು ಬಡ ಹಳ್ಳಿ ಎಂದು ಇಲ್ಲಿನ ಮುಖಂಡರು ಹೇಳಿದ್ದಾರೆ.
ಆದರೆ ನೀರ್ಥಡಿ ಗ್ರಾಮದಲ್ಲಿ ಎಲ್ಲರೂ ಎರಡು ಎಕರೆ, ಮೂರು ಎಕರೆ, ಐದು ಎಕರೆ, ಹತ್ತು ಎಕರೆ ಅಡಿಕೆ ತೋಟಗಳು ಇವೆ. ಹೀಗಿರುವಾಗ ನೀವು ಏಕೆ ಬಡವರಾಗಿತ್ತೀರಿ. ನೀವು ಶ್ರೀಮಂತರಿದ್ದೀರಿ. ಸರ್ಕಾರದ ಅನುದಾನ ಕಾಯದೆ ನೀವೆಲ್ಲರೂ ಸೇರಿ ದೇವಸ್ಥಾನ ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯ ಮಾಡುವ ಮೂಲಕ ಕೈಜೋಡಿಸುವಂತೆ ಸಲಹೆ ನೀಡಿದರು.
ನೀರ್ಥಡಿ ಗ್ರಾಮದಿಂದ ಮಾಯಕೊಂಡಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಶಾಸಕರು ಈ ಹಿಂದಿಯೇ ಭರವಸೆ ನೀಡಿದ್ದರು. ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಬೇಕು. ಅಷ್ಠೇ ಅಲ್ಲದೇ ಮಳೆ ಬಂದಾಗ ನೀರು ಹುಣಿಸೆಕಟ್ಟೆ ಗ್ರಾಮಕ್ಕೆ ನುಗ್ಗುತ್ತದೆ. ಮಳೆ ನೀರು ತಡೆಗಟ್ಟುವ ಬಗ್ಗೆ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಶಿವಣ್ಣ , ಬಸಣ್ಣ,ಗ್ರಾಪಂ ಸದಸ್ಯ ನಾಗಣ್ಣ, ಮುಖಂಡರಾದ ದೇವೇಂದ್ರಪ್ಪ, ಸಿರಿಸ್ವಾಮಿ,ಮಂಜುನಾಥ್ , ಪ್ರಭಣ್ಣ, ಬಸಣ್ಣ, ನಾಗರಾಜ್ , ಭೀರಣ್ಣ ,ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಸ್ಥಾನ ಅವ್ಯವಸ್ಥೆಗೆ ಬೇಸರ..
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಮದಕರಿ ನಾಯಕರ ಅವಧಿಯ ಐತಿಹಾಸಿಕ ದೇವಾಲಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ದೇವರ ದರ್ಶನ ಮಾಡಿದರು. ಬಳಿಕ ದೇವಸ್ಥಾನದ ಅವ್ಯವಸ್ಥೆ ನೋಡಿ ಬೇಸರ ವ್ಯಕ್ತ ಪಡಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.