ದಾವಣಗೆರೆ (Davanagere): ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯವನ್ನು ದೇಶದ ಕಲೆ, ಸಂಸ್ಕøತಿಯನ್ನು ಪ್ರತಿಬಿಂಬಿಸುವ ಉನ್ನತ ಕಲಾಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ವಿಶ್ವವಿದ್ಯಾನಿಲಯ ಆದ್ಯತೆ ನೀಡುತ್ತಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.
ದೃಶ್ಯಕಲಾ ಮಹಾವಿದ್ಯಾಲಯ ವಜ್ರ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೃಶ್ಕಕಲಾ ಕಾಲೇಜು ಕಲಾ ಕ್ಷೇತ್ರದಲ್ಲಿ ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ. ಇಲ್ಲಿರುವ ಕಲಾ ಸಂಪತ್ತು ಮತ್ತು ಇಲ್ಲಿ ಕಲಿತು ಜಗತ್ತಿನಾದ್ಯಂತ ಪಸರಿಸಿರುವ ವಿದ್ಯಾರ್ಥಿಗಳ ಬೇರುಗಳು ಬಹುದೊಡ್ಡ ಆಸ್ತಿಯಾಗಿವೆ. ಅರವತ್ತು ವರ್ಷದ ಸಾಧನೆ ನೂರು ವರ್ಷಗಳ ಸಾಧನೆಗೆ ಪ್ರೇರಣೆಯಾಗಲಿ ಎಂದರು.
ಕಾಲೇಜಿನ ಹಳೇ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನ ಮೇಲಿನ ಅಭಿಮಾನದಿಂದ ವರ್ಷವಿಡೀ ಕಾರ್ಯಕ್ರಮ ನಡೆಸಿಕೊಟ್ಟರು. ಇದರಿಂದಾಗಿ ಕಾಲೇಜು ನಾಡಿನಾದ್ಯಂತ ಪ್ರಚಾರ ಪಡೆದು ಬೆಳಕಿಗೆ ಬರಲು ಸಾಧ್ಯವಾಯಿತು. ಇದೇ ವಿಶ್ವಾಸ ನಿರಂತರವಾಗಿರಬೇಕು ಎಂದು ಹೇಳಿದರು.
ಕಲಾ ಕ್ಷೇತ್ರ ವಿಭಿನ್ನ ಅಭಿರುಚಿಯ ಅಧ್ಐನವಾಗಿದೆ. ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗದ ಭರವಸೆ ಸಿಗಬೇಕಾಗಿದೆ. ಕಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಜಿಸಲು ಸರ್ಕಾರಕ್ಕೆ ವಿಶ್ವವಿದ್ಯಾಲಯದ ಜೊತೆಗೆ ಹಳೇ ವಿದ್ಯಾರ್ಥಿಗಳೂ ಒತ್ತಡ ತರಬೇಕು ಎಂದು ಸಲಹೆ ನೀಡಿದರು.
Read also : Kannada Poem | ಭಾರತದ ಸೆಪ್ಟಿಕ್ ಟ್ಯಾಂಕು : ಬಿ.ಶ್ರೀನಿವಾಸ
ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಖಲಿ ಇರುವ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಸರ್ಕಾರಕ್ಕೆ ವಿಶೇಷ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕುಲಪತಿ ಪ್ರೊ.ಕುಂಬಾರ ಭರವಸೆ ನೀಡಿದರು.
ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಾರಿ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಸಿಬ್ಬಂದಿ ನೇಮಕಾತಿಗಾಗಿ ಉನ್ನತ ಶಿಕ್ಷಣ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಮುಂಬಯಿಯ ಓಗಿಲ್ವಿ ಸಂಸ್ಥೆಯ ಕ್ರಿಯೇಟಿವ್ ಡೈರೆಕ್ಟರ್ ಹರೀಶ್ ಆಚಾರ್ಯ ಮಾತನಾಡಿ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಶಾಶ್ವತವಾಗಿ ಫಲ ಸಿಗುತ್ತದೆ. ಯುವ ಕಲಾವಿದರು ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ ಮಾತನಾಡಿದರು. ಕುಲಸಚಿವ ಶಬ್ಬೀರ ಭಾಷ ಗಂಟಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಉಪಸ್ಥಿತರಿದ್ದರು. ಡಾ.ಸತೀಶಕುಮಾರ ವಲ್ಲೇಪುರೆ ವಂದಿಸಿದರು. ಡಾ. ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಹಳೇ ವಿದ್ಯಾರ್ಥಿಗಳು ತಮ್ಮ ಅನುಭವದ ಬುತ್ತಿಯನ್ನು ಮೆಲುಕು ಹಾಕಿದರು., ಕಲಾ ತಜ್ಞರು, ಅಂತರರಾಷ್ಟ್ರೀಯ ಕಲಾವಿದರು ಪ್ರಾತ್ಯಕ್ಷಿಕೆ ಮತ್ತು ಸಂವಾದದ ಮೂಲಕ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದರು.