“ಕಿರು ಬೆಳಕಿನ ಸೂಜಿ” ಕೃತಿಗೆ 2024ರ “ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ” ಸಂದಿದೆ. ದಿನಾಂಕ 30.05.2025 ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹೆಸರಾಂತ ಹಿರಿಯ ಸಾಹಿತಿ ನಾಡೋಜ ಡಾ : ಬರಗೂರು ರಾಮಚಂದ್ರಪ್ಪ ನವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
” ಕಿರುಬೆಕಿನ ಸೂಜಿ ” ಕೃತಿಯ ಕತೃ ಶ್ರೀಮತಿ ಗೀತಾಮಂಜು ರವರಿಗೆ ಜಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಸುಜಾತಮ್ಮರಾಜು ರವರು ಆತ್ಮೀಯತೆಯಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಗೀತಾರವರು ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಜನಿಸಿ ಅದೇ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.
ಜಗಳೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಮೂರು ವರ್ಷಗಳಿಂದಲೂ ಸಕ್ರೀಯವಾಗಿ ಪರಿಷತ್ತಿನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೂಡ ಹೌದು. ಇವರ “ಗೀತಮಂಜರಿ” ಮೊದಲ ಕವನ ಸಂಕಲನ “ಶ್ರೀ ಹೆಬ್ಬಗೋಡಿ ಗೋಪಾಲದತ್ತಿ ಪುಸ್ತಕ ಪ್ರಶಸ್ತಿ” ಗಳಿಸಿದರೆ, ಇದೇ ವರ್ಷ ಜನವರಿಯಲ್ಲಿ ನಡೆದ 14ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಒಂಬತ್ತು ಕೃತಿಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಗೀತಾ ರವರ ವಿಶೇಷ ಶೀರ್ಷಿಕೆಯ “ಕಿರುಬೆಳಕಿನ ಸೂಜಿ” ಕೃತಿ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿಯನ್ನು ಪಡೆದಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

ಕಾವ್ಯ ಕನ್ನಿಕೆ ಇವರನ್ನು ಅಪ್ಪಿಕೊಂಡಿರುವುದರಿಂದ ಇವರ ಕಿರು ಬೆಳಕಿನ ಸೂಜಿ ಕವನ ಸಂಕಲನ ಓದುಗರನ್ನ ಭಾವ ಪರವಶವಾಗಿಸುತ್ತದೆ. ಕಾವ್ಯದಲ್ಲಿ ತಲ್ಲೀನರನ್ನಾಗಿಸಿ ವಿಹರಿಸುವಂತೆ ಮಾಡುತ್ತದೆ. ಪದಗಳು ಹೆಚ್ಚು ಹೆಚ್ಚು ಕಾವ್ಯಾತ್ಮಕವಾಗಿ ನಾಜೂಕಾಗಿ ಸೂಜಿಯ ಕಿರು ಬೆಳಕಿನಿಂದ ಹೆಣೆಯಲ್ಪಟ್ಟು ಸೋಜಿಗವನ್ನುಂಟು ಮಾಡುತ್ತವೆ. ಗೀತಾ ರವರ ಲೇಖನಿಯಿಂದ ಮತ್ತಷ್ಟು ಉತ್ಕೃಷ್ಟವಾದ ಕಾವ್ಯ ಕೃತಿಗಳು ಮೂಡಿಬರಲಿ. ಇದರಿಂದ ಹೆಚ್ಚು ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಅವರ ಮಡಿಲು ತುಂಬಿಕೊಳ್ಳುವುದರ ಮೂಲಕ ನಮ್ಮ ತಾಲ್ಲೂಕಿಗೆ ಮಹಿಳಾ ಸಾಹಿತಿ ಎನ್ನುವ ಹಿರಿಮೆ ಗರಿಮೆ ಇವರದಾಗಲಿ.
ಇಮಾಮರ ಜಗಳೂರು ಈಗ ಬರದ ನಾಡಾಗಿ ಉಳಿದಿಲ್ಲ. ಸಾಹಿತಿಗಳ ಬೀಡಾಗಿ, ಬಂಗಾರದ ನಾಡಾಗಿದೆ.ಹೆಸರಾಂತ ಸಾಹಿತಿಗಳು ಇಲ್ಲಿದ್ದಾರೆ. ಇವರ ಸಾಲಿನಲ್ಲಿ ಗೀತಾಮಂಜು ರವರು ಇದ್ದಾರೆ. ಇಂತಹ ಸುಸಂಧರ್ಭದಲ್ಲಿ ಜಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಗೀತಾ ರವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಕೆ. ಸುಜಾತಮ್ಮ ರಾಜು, ಲಿಂಗಣ್ಣನಹಳ್ಳಿ
ಅಧ್ಯಕ್ಷರು
ತಾಲ್ಲೂಕು ಕ. ಸಾ. ಪ. ಜಗಳೂರು,
ದಾವಣಗೆರೆ ಜಿಲ್ಲೆ.