ದಾವಣಗೆರೆ (Davanagere) : ಮಕ್ಕಳಿಗೆ ನಿರಂತರ ಅಭ್ಯಾಸ ಮಾಡಿಸುವ ಮೂಲಕ. ಅವರ ಸಾಧನೆಗೆ ಶಕ್ತಿನೀಡಬೇಕು.ಮಕ್ಕಳಲ್ಲೂ ಅನೇಕ ನೂನ್ಯತೆಗಳಿರುತ್ತವೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿದ್ದಿ ತೀಡಬೇಕು ಜೊತೆಗೆ ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಶಿಕ್ಷಕರಿಗೆ ಕರೆ ನೀಡಿದರು.
ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಾಣಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಬೇಕು ಅವರನ್ನು ಪುನಃ ಶಾಲೆಗೆ ದಾಖಲಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು.ಮಕ್ಕಳು ದೇಶದ ನಿಜವಾದ ಆಸ್ತಿ ಅವರನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಕ್ಕಳಲ್ಲಿ ಪರಿಸರ, ಹಸಿರು ಇಂಧನ, ನೀರಿನ ಸಂರಕ್ಷಣೆ,ಗುಣಮಟ್ಟದ ಗಾಳಿ ಬಗ್ಗೆ ಅರಿವು ಮೂಡಿಸಬೇಕು.ಶಿಕ್ಷಕರು ಮಾತೃಹೃದಯದಿಂದ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕು.ಶಿಕ್ಷಣದ ಜೊತೆಗೆ ಸಂಸ್ಕೃತಿ,ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು.ಮಕ್ಕಳು ತಮ್ಮ ಬೆಳವಣಿಗೆಗೆ ಪೂರಕವಾದ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಅತಿ ಅಗತ್ಯ. ಮಕ್ಕಳು ತಮ್ಮ ದಿನಚರಿಯನ್ನು ಬರೆಯಬೇಕು ಇದರಿಂದ ಮುಂದಿನ ಪ್ಲಾನ್ ಇರುತ್ತದೆ ಹಾಗೂ ಅದನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಬೇಕು.ಆಗ ಉನ್ನತಮಟ್ಟಕ್ಕೆ ಹೋಗಲು ಸಾಧ್ಯ ಎಂದರು.
ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಹಾಗೂ ಟಿವಿ ಯ ಬಳಕೆಯಲ್ಲೇ ಮುಳುಗಿದ್ದಾರೆ.ಇದರಿಂದ ಊಟ ಹಾಗೂ ನಿದ್ರೆ ಮಾಡುವುದಿಲ್ಲ. ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ಉಂಟಾಗುತ್ತಿವೆ ಆದ್ದರಿಂದ ಮಕ್ಕಳಿಗೆ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬಂತೆ ಮಾಡಬೇಕು. ಪ್ರತಿಯೊಬ್ಬ ಶಿಕ್ಷಕರು ಮಕ್ಕಳಜೊತೆ ಉತ್ತಮ ಒಡನಾಟ ಹೊಂದಬೇಕು.ಶಿಕ್ಷಕರು ಮಕ್ಕಳಿಗೆ ಬೇಕು- ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಒಳ್ಳೆಯ ಶಿಕ್ಷಕರಾಗಲು ಸಾಧ್ಯ.ವಿದ್ಯಾರ್ಥಿಗಳಿಗೆ ನಿರಂತರ ಅಭ್ಯಾಸ ಮಾಡಿಸುವ ಮೂಲಕ. ಅವರ ಸಾಧನೆಗೆ ಶಕ್ತಿನೀಡಬೇಕು. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಗಣಿತ ಕಷ್ಟದ ವಿಷಯಗಳು ಎನ್ನುವ ಮಾತಿದೆ ಈಬಗ್ಗೆ ಗಮನಹರಿಸಬೇಕು.ಸರಳವಾಗಿ ಅರ್ಥೈಸುವ ವಿಧಾನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಪ್ರಮಾಣ ಕುಸಿತಕಾಣುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವರ್ಷ ವರ್ಷವೂ ದಾಖಲಾತಿ ಕಡಿಮೆ ಆಗುತ್ತಿದ್ದು, ಇದನ್ನು ತಡೆಯಲು ಪೋಷಕರೊಂದಿಗೆ ನಿಯಮಿತ ಸಭೆಗಳನ್ನು ನಡೆಸಬೇಕು. ಬಿಇಒ ಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು.ನಮ್ಮ ಶಾಲೆ ನಮಗೆ ಹೆಮ್ಮೆಯಾಗಬೇಕು ಎಂದರು.
ಮಾಜಿ ಸಚಿವರಾದ ಎಸ್.ಎ ರವೀಂದ್ರನಾಥ್, ಬಿಇಒ ಪುಷ್ಪಲತಾ,ಗ್ರಾ.ಪಂ.ಅಧ್ಯಕ್ಷರಾದ ಇ.ಪ್ರಸನ್ನ,ಉಪಾಧ್ಯಕ್ಷೆ ರೇಣುಕಾಬಾಯಿ, ಪಿಡಿಒ ಜಯಲಕ್ಷ್ಮಿ,ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಎಸ್ .ಎಂ ರುದ್ರೇಶ್ ,ಶಾಲಾ ಶಿಕ್ಷಕವೃಂದ ಹಾಗೂ ಶಿರಮಗೊಂಡನಹಳ್ಳಿ ಗ್ರಾಮಸ್ಥರು ಇದ್ದರು.