ದಾವಣಗೆರೆ (Davanagere): ನಗರದಲ್ಲಿ ಜಲಸಿರಿ ಯೋಜನೆ ಅನುಷ್ಟಾನದ ಹೊಣೆ ಹೊತ್ತಿರುವ ಸುಯೆಜ್ ಕಂಪನಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಕುಂದುವಾಡ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುಯೆಜ್ ನ ಯೋಜನಾ ವ್ಯವಸ್ಥಾಪಕ ಪ್ರಶಾಂತ್ ವಿ.ಕೆ “ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನೈಜ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ವಾಗುತ್ತಿದ್ದು ಮಾನವನ ದೈನಂದಿನ ಬದುಕು ದುಸ್ತರವಾಗುತ್ತಿದೆ. ವಿಶೇಷವಾಗಿ ಕುಡಿಯುವ ನೀರು, ಸೇವಿಸುವ ಗಾಳಿ, ಸೇವಿಸುವ ಆಹಾರ ವಿಷವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು”.
ಮಾನವನಂತೆಯೇ ನಮ್ಮ ಪರಿಸರದಲ್ಲಿ ಬದುಕುವ ಪಶು ಪಕ್ಷಿಗಳ ಬಗ್ಗೆ ಕೂಡಾ ನಾವು ಯೋಚಿಸಿ ಮಾನವ – ಪ್ರಾಣಿ ಸಹ್ಯ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.
ಸುಯೆಜ್ ನ ಹಿರಿಯ ಅಧಿಕಾರಿ ವಿಷ್ಣುಭಟ್ ಮಾತನಾಡಿ, ಸುಯೆಜ್ ಕಂಪನಿಯು ಪರಿಸರ ಸಂರಕ್ಷಣೆಯ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದ್ದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುಯೆಜ್ ನ ಉದ್ಯೋಗಿಗಳು ತಾವೇ ಸ್ವಯಂ ಪ್ರೇರಣೆಯಿಂದ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರವುದು ಶ್ಲಾಘನೀಯ ಎಂದರು.
ಸುಯೆಜ್ ಉದ್ಯೋಗಿಗಳು ಸೂಕ್ತ ಜಾಗದಲ್ಲಿ ಸಸಿ ನೆಟ್ಟು ತಮ್ಮ ಪರಿಸರ ಕಾಳಜಿಯನ್ನು ತೋರಿಸಿದರು.
Read also : Davanagere | ಪತ್ರಿಕಾಭವನ ನಿರ್ಮಾಣಕ್ಕೆ ದೂಡದಿಂದ ನಿವೇಶನ ಮಂಜೂರು
ಸುಯೆಜ್ ಕಂಪನಿಯ ಹಿರಿಯ ಅಧಿಕಾರಿಗಳಾದ ಸುನಿಲ್, ಸೋಮಶೇಖರ್, ವಿಧ್ಯಾಧರ ಬೆಟಗೇರಿ, ಕಿರಣ್, ರಾಜೇಶ್ ಎ, ಇನ್ನಿತರ ಅಧಿಕಾರಿಗಳಾದ ಸಂದೀಪ ನಾಯಕ್, ಸತೀಶ್, ಉಮಾ ಮಹೇಶ್ವರರಾವ್, ರವಿಚಂದ್ರ, ಬಾಲಾಜಿ, ವೆಂಕಟೇಶ್, ಮನೋಜ್, ಗಣೇಶ್, ಅನಿಲ್, ನಾಗೇಶ್, , ಸಚಿನ್, ಶಿವರಾಜ್, ಶ್ರೇಯಸ್, ರವಿಕುಮಾರ್ ಕೆ.ಎಂ ಹಾಗೂ ರಾಜೇಶ್ ಚಾಗಂಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರೇಖಾ ನೆರವೇರಿಸಿದರು.