ದಾವಣಗೆರೆ (Davanagere) : ನಗರದಲ್ಲಿ ಸುಸಜ್ಜಿತ `ಪತ್ರಿಕಾ ಭವನ’ ನಿರ್ಮಿಸುವ ನಿಟ್ಟನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ದ ದಾವಣಗೆರೆ ಜಿಲ್ಲಾ ಘಟಕಕ್ಕೆ ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರವು ನಿವೇಶನವನ್ನು ಮಂಜೂರು ಮಾಡಿದೆ.
ಕೆಯುಡಬ್ಲ್ಯುಜೆ ಮಾಡಿಕೊಂಡ ಮನವಿ ಮೇರೆಗೆ ದೂಡಾವು, ಆವರಗೆರೆ ಗ್ರಾಮದ ಸರ್ವೆ ನಂ. 186/1,2,3,4ರ ಖಾಸಗಿ ವಸತಿ ಬಡಾವಣೆ ಹೊಂದಿರುವ ಎಸ್.ಎಸ್.ಹೈಟೆಕ್ ಆಸ್ಪತ್ರೆ ಹಿಂಭಾಗದಲ್ಲಿ ನಾಗರಿಕ ಸೌಲಭ್ಯದ 70×90 ಅಳತೆಯ ನಿವೇಶನವನ್ನು ಹಂಚಿಕೆ ಮಾಡಿದೆ.
ರಿಯಾಯ್ತಿಯಲ್ಲಿ ನಿವೇಶನ : ನಿವೇಶನ ಮಂಜೂರು ಮಾಡಿದ್ದ ದೂಡಾ, ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆಯನ್ವಯ 39.31 ಲಕ್ಷ ರೂ.ಗಳನ್ನು ಪಾವತಿಸುವಂತೆ ಸೂಚಿಸಿತ್ತು. ಈ ಮೊತ್ತವನ್ನು ಭರಿಸುವಲ್ಲಿ ತಮ್ಮ ಸಂಘಟನೆ ಆರ್ಥಿಕವಾಗಿ ತೊಂದರೆಯಲ್ಲಿರುವ ಕಾರಣ ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಿಯಾಯ್ತಿ ಬೆಲೆಯಲ್ಲಿ ನಿವೇಶನ ಮಂಜೂರು ಮಾಡುವಂತೆ ಕೆಯುಡಬ್ಲ್ಯುಜೆ ಮನವಿ ಮಾಡಿತ್ತು.
ಈ ಕೋರಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದಾಗ, ದೂಡಾ ಮಾಡಿರುವ ನಿವೇಶನದ ಹಂಚಿಕೆ ಮೊತ್ತದ ಶೇ. 10ರಷ್ಟು ಮೊತ್ತವನ್ನು ನಿಗದಿಪಡಿಸಿ 2025 ಜನವರಿ 2 ರಂದು ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿನ ಸಚಿವ ಸಂಪುಟವು ಅನುಮೋದನೆ ನೀಡಿ ಆದೇಶಿಸಿದೆ.
Read also : ಮನೆಕಳ್ಳತನ ಪ್ರಕರಣ | 24 ಗಂಟೆಯಲ್ಲಿ ಆರೋಪಿ ಸೆರೆ
ಸ್ವಾಧೀನಪತ್ರ ವಿತರಣೆ : ಕರ್ನಾಟಕ ಸರ್ಕಾರ ಮಾಡಿದ ಆದೇಶದ ಮೇರೆಗೆ ರಿಯಾಯ್ತಿ ಬೆಲೆಯಲ್ಲಿ ಕೆಯುಡಬ್ಲ್ಯುಜೆಗೆ ನಿವೇಶನ ನೀಡಿದ್ದ ದೂಡಾ, ಈ ಸಂಬಂಧ 2025 ಏಪ್ರಿಲ್ 22ರಂದು ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿಸಿದೆ.
ಈ ಹಿನ್ನೆಲೆಯಲ್ಲಿ ದೂಡಾ ಕಛೇರಿಯಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ದೂಡಾ ಸಭೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಿವೇಶವನ್ನು ಸ್ವಾಧೀನಕ್ಕೊಪ್ಪಿಸುವ ಪತ್ರವನ್ನು ಕೆಯುಡಬ್ಲ್ಯುಜೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್ಸೆಸ್ಸೆಂ, ಪತ್ರಕರ್ತರ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗುವ ದಿಸೆಯಲ್ಲಿ ಸರ್ಕಾರ ರಿಯಾಯ್ತಿ ದರದಲ್ಲಿ ನೀಡಿರುವ ನಿವೇಶನದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಗೊಳ್ಳಲಿ. ಆ ಮೂಲಕ ಪತ್ರಕರ್ತರ ಸಮುದಾಯಕ್ಕೆ ಒಳಿತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಛಾಪು ಮೂಡಿಸಿದ್ದರಾದರೂ ಅವರ ಬದುಕು ದುಸ್ತರವಾಗಿದೆ ಎಂದ ಸಚಿವರು, ಪತ್ರಕರ್ತರ ಕಲ್ಯಾಣಕ್ಕೆ ತಾವು ಸದಾ ಬದ್ಧ ಎಂದರು. ಇದೇ ದಿನಾಂಕ 16ರಂದು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಗರಕ್ಕೆ ಆಗಮಿಸುತ್ತಿದ್ದು, ಅದೇ ವೇಳೆ ಪತ್ರಿಕಾ ಭವನ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೃತಜ್ಞತೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಂದ ನಿವೇಶನದ ಸ್ವಾಧೀನ ಪತ್ರ ಸ್ವೀಕರಿಸಿದ ಕೆಯುಡಬ್ಲ್ಯುಜೆ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರದಿಂದ ರಿಯಾಯ್ತಿ ದರದಲ್ಲಿ ನಿವೇಶನ ಮಂಜೂರು ಮಾಡಿಸಿಕೊಟ್ಟ ಸಚಿವ ಎಸ್ಸೆಸ್ಸೆಂ ಅವರಿಗೆ ಪತ್ರಕರ್ತರ ಸಮೂಹದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವರೂ ಆದ ದಾವಣಗೆರೆ ಉತ್ತರ ಕ್ಷೇತ್ರದ ಹಿಂದಿನ ಶಾಸಕ ಎಸ್.ಎ. ರವೀಂದ್ರನಾಥ್ ಅವರ ನಿರ್ದೇಶನದ ಮೇರೆಗೆ ಹಿಂದಿನ ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್ ಅವರು 2022, ನವೆಂಬರ್ 18ರಂದು ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದ್ದರು. ಅದನ್ನು ದೂಡಾದ ಈಗಿನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತು ಆಯುಕ್ತ ಹುಲ್ಮನಿ ತಿಮ್ಮಣ್ಣ ಅವರುಗಳು ಶೀಘ್ರ ವಿಲೇವಾರಿ ಮಾಡುವಲ್ಲಿ ಮುತುವರ್ಜಿ ವಹಿಸಿದ್ದರು. ಅವರೆಲ್ಲರಿಗೂ ಮಂಜುನಾಥ ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆಯುಡಬ್ಲ್ಯುಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಸ್ವಾಗತಿಸಿದರು. ಖಜಾಂಚಿ ಎನ್.ವಿ. ಬದರೀನಾಥ್ ವಂದಿಸಿದರು.
ಕೆಯುಡಬ್ಲ್ಯುಜೆ ರಾಜ್ಯ ನಿರ್ದೇಶಕ ಕೆ. ಚಂದ್ರಣ್ಣ, ಜಿಲ್ಲಾ ಉಪಾಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ನಿರ್ದೇಶಕರುಗಳಾದ ಎನ್. ಕೃಷ್ಣೋಜಿರಾವ್, ಸಿ. ವೇದಮೂರ್ತಿ, ನಂದಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.